Diwali celebrations continue despite rising prices
- ಬೆಲೆ ಏರಿಕೆ ನಡುವೆಯೂ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರು
--ಕನ್ನಡಪ್ರಭ ವಾರ್ತೆ ಭದ್ರಾವತಿ
ಬೆಲೆ ಏರಿಕೆ ನಡುವೆಯೂ ನಗರದಲ್ಲಿ ದೀಪಾವಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ನಡೆಯಿತು.ಪ್ರಮುಖ ವಾಣಿಜ್ಯ ರಸ್ತೆಗಳು, ಮಾರುಕಟ್ಟೆಗಳು ಜನಸಂದಣಿಯಿಂದ ಕೂಡಿದ್ದವು. ಬೆಲೆ ಏರಿಕೆ ನಡುವೆಯೂ ಅಗತ್ಯ ವಸ್ತುಗಳ ಖರೀದಿ ಭರಾಟೆ ಹೆಚ್ಚಾಗಿರುವುದು ಕಂಡು ಬಂದಿತು.
ದಿನ ಬಳಕೆ ಆಹಾರ ವಸ್ತುಗಳಲ್ಲಿ ಒಂದಾಗಿರುವ ಹಾಲು, ಮೊಸರು ಮತ್ತು ತುಪ್ಪದ ದರ ಹಬ್ಬದ ಸಂದರ್ಭದಲ್ಲಿಯೇ ಏರಿಕೆಯಾಗಿರುವುದು ಒಂದೆಡೆ ಜನರ ಜೇಬಿಗೆ ದುಬಾರಿಯಾಗಿ ಪರಿಣಮಿಸಿದರೆ, ಮತ್ತೊಂದೆಡೆ ಸರ್ಕಾರಿ ಬಸ್ಗಳಲ್ಲಿ ಪ್ರಯಾಣ ದರ ಏರಿಕೆಯಾಗಿರುವುದು ಮತ್ತಷ್ಟು ದುಬಾರಿಯಾಗಿ ಪರಿಣಮಿಸಿದೆ. ಈ ನಡುವೆ ಅಗತ್ಯ ವಸ್ತುಗಳ ಬೆಲೆ ದಿಢೀರನೆ ಏರಿಕೆಯಾಗಿದ್ದು, ವ್ಯಾಪಾರಿಗಳಿಂದ ಜನರ ಶೋಷಣೆ ಸಹ ನಡೆಯುತ್ತಿದೆ. ವಿಧಿವಿಲ್ಲದೆ ವ್ಯಾಪಾರಿಗಳು ಕೇಳಿದಷ್ಟು ಹಣ ನೀಡಿ ಖರೀದಿಸುವುದು ಅನಿವಾರ್ಯವಾಗಿದೆ.ಹೂವು, ಹಣ್ಣು, ಸೊಪ್ಪು ಮತ್ತು ತರಕಾರಿ ಬೆಲೆಗಳು ಗಗನಕ್ಕೇರಿದೆ. ಪಟಾಕಿ ದರ ಹೆಚ್ಚಾಗಿದ್ದು, ಆದರೂ ನಗರದ ನ್ಯೂಟೌನ್ ವಿಐಎಸ್ಎಲ್ ಸಂತೆ ಮೈದಾನ ಮತ್ತು ಕನಕಮಂಟಪ ಮೈದಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಗ್ರಾಹಕರು ಪಟಾಕಿ ಖರೀದಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಉಳಿದಂತೆ ನಗರದ ಪ್ರಮುಖ ಜವಳಿ ಅಂಗಡಿಗಳಲ್ಲಿ ಹಬ್ಬದ ಹಿನ್ನಲೆಯಲ್ಲಿ ಬಟ್ಟೆ ಖರೀದಿ ಭರಾಟೆ ಸಹ ಜೋರಾಗಿರುವುದು ಕಂಡು ಬಂದಿತು.
ಬಹುತೇಕ ಅಂಗಡಿಮುಂಗಟ್ಟುಗಳಲ್ಲಿ, ಮನೆಗಳಲ್ಲಿ ಲಕ್ಷ್ಮೀ ದೇವಿಯ ಆರಾಧನೆ ಭರ್ಜರಿಯಿಂದ ನಡೆಯುತ್ತಿರುವುದು ಕಂಡು ಬಂದಿತು.ಈ ನಡುವೆ ಎಲ್ಲೆಡೆ ಪಟಾಕಿ ಸದ್ದು ಸಹ ಜೋರಾಗಿರುವುದು ಕಂಡು ಬಂದಿತು.
ಫೋಟೊ: ಡಿ೮-ಬಿಡಿವಿಟಿ ಮತ್ತು ೮(ಎ) ೮(ಬಿ)ಭದ್ರಾವತಿ ನಗರದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಪ್ರಮುಖ ವಾಣಿಜ್ಯ ರಸ್ತೆಗಳು, ಮಾರುಕಟ್ಟೆಗಳು ಜನಸಂದಣಿಯಿಂದ ಕೂಡಿದ್ದವು. ಬೆಲೆ ಏರಿಕೆ ನಡುವೆಯೂ ಅಗತ್ಯ ವಸ್ತುಗಳ ಖರೀದಿ ಭರಾಟೆ ಹೆಚ್ಚಾಗಿರುವುದು ಕಂಡು ಬಂದಿತು.