ಆಳ್ವಾಸ್‌ನಲ್ಲಿ ದೀಪಾವಳಿ ಜ್ಞಾನದ ಬೆಳಕು: ಸಾಂಸ್ಕೃತಿಕ ಸಂಭ್ರಮ

| Published : Nov 18 2025, 02:00 AM IST

ಆಳ್ವಾಸ್‌ನಲ್ಲಿ ದೀಪಾವಳಿ ಜ್ಞಾನದ ಬೆಳಕು: ಸಾಂಸ್ಕೃತಿಕ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇತ್ತೀಚೆಗೆ ಇಲ್ಲಿನ ಪುತ್ತಿಗೆ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲುರಂಗ ಮಂದಿರದಲ್ಲಿ ‘ಆಳ್ವಾಸ್ ದೀಪಾವಳಿ-2025’ ಸಂಭ್ರಮಿಸಿತು.

ಮೂಡುಬಿದಿರೆ: ಶಿಕ್ಷಣ, ಕ್ರೀಡೆ, ಸಂಸ್ಕೃತಿ ಸಂಗಮವಾದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಬುಧವಾರ ಬೆಳಕಿನ ಹಬ್ಬ ‘ಆಳ್ವಾಸ್ ದೀಪಾವಳಿ-2025’ರ ಸೊಬಗು. ಅದು ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅವರ ಪರಿಕಲ್ಪನೆಯ ‘ಬೌದ್ಧಿಕ, ಭೌತಿಕ ಹಾಗೂ ಬಾಂಧವ್ಯ ಬೆಳೆಸುವ ಬೆಳಕು’.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಬುಧವಾರ ಸಂಜೆ ಇಲ್ಲಿನ ಪುತ್ತಿಗೆ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲುರಂಗ ಮಂದಿರದಲ್ಲಿ ‘ಆಳ್ವಾಸ್ ದೀಪಾವಳಿ-2025’ ಸಂಭ್ರಮಿಸಿತು. 15 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಸೇರಿದಂತೆ ಪೋಷಕರು, ಸ್ಥಳೀಯರು ಸೇರಿ 25 ಸಾವಿರಕ್ಕೂ ಅಧಿಕ ಜನರ ಸಮ್ಮುಖದಲ್ಲಿ ದೀಪಾವಳಿಯು ತನು, ಮನ ಬೆಳಗಿತು.

ಕೊಂಬು, ಕಹಳೆ, 30 ಶ್ವೇತ ಛತ್ರಿ ಚಾಮರದ ಜೊತೆ, 100ಕ್ಕೂ ಅಧಿಕ ದೇವಕನ್ಯೆಯರು, ವೇದಘೋಷ ತಂಡ, ಸುಶೋಭಿತ ಕೊಡೆ, ಪ್ರಣತಿ ಹಿಡಿದ ದೇವಕನ್ನಿಕೆಯರು, ನಾಗಸ್ವರದ ನಿನಾದ ಹಾಗೂ ಪುಟಾಣಿಗಳ ಜೊತೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಪಂಚ ಯತಿವರ್ಯರು ಹಾಗೂ ಅತಿಥಿಗಳು ಮೆರವಣಿಗೆಯಲ್ಲಿ ಸಭಾಂಗಣವನ್ನು ಪ್ರವೇಶಿಸಿದರು. ಕದನಿ (ಸಿಡಿಮದ್ದು), ಸಾಂಪ್ರದಾಯಿಕ ಮೆರವಣಿಗೆಯಿಂದ ಸಭಾಂಗಣ ಜಾತ್ರೆಯಂತೆ ಕಂಗೊಳಿಸಿತು.

ತುಳುನಾಡಿನ ದೀಪಾವಳಿ ಹಬ್ಬ ಮಾದರಿಯಲ್ಲಿ ಮೊದಲಿಗೆ ಗೋ ಪೂಜೆ ನಡೆಯಿತು. ಅವಲಕ್ಕಿ, ಬೆಲ್ಲ, ಭತ್ತ, ನೀರ್ ದೋಸೆ, ಬಾಳೆ ಹಣ್ಣು ನೀಡಿ ಗೋವನ್ನು ಸತ್ಕರಿಸಲಾಯಿತು. ಆರತಿ ಬೆಳಗಿ ಆರಾಧಿಸಲಾಯಿತು. ಬಳಿಕ ಕಳಸೆ, ನೇಗಿಲು, ನೊಗ, ಮುಡಿ ಕಟ್ಟುವ ಕೊದಂಟಿ, ಕತ್ತಿ, ಹಾರೆ, ಇಸ್ಮುಳ್ಳು, ಕೊಯ್ತಿ ಸೇರಿದಂತೆ ಸಮಗ್ರ ಕೃಷಿ ಪರಿಕರಗಳು, ಹಣ್ಣು ಹಂಪಲು, ಕರಾವಳಿಯ ಗದ್ದೆಯ ನಾಟಿ ತರಕಾರಿ ಬೆಳೆಗಳು, ದವಸ ಧಾನ್ಯಗಳ ಪೂಜೆಯ ಮೂಲಕ ಸಿರಿ - ಸಂಪತ್ತು -ಸಮೃದ್ಧಿಯನ್ನು ನಾಡಿಗೆ ಹರಸಲಾಯಿತು. ವೇದಿಕೆ ಮುಂಭಾಗದಲ್ಲಿ ತುಳಸಿ ಪೂಜೆ ನಡೆಯಿತು. ಕದಿರು ಕಟ್ಟಿ ಮನೆ ತುಂಬಿಸುವ ಸಮೃದ್ಧಿ ಆಶಿಸಲಾಯಿತು. ನಂತರದ ದೇವಾರಾಧನೆಯಲ್ಲಿ ವಿದ್ಯಾ ಅಧಿಪತಿ ಸರಸ್ವತಿ, ಸಂಪತ್ತಿನ ದೇವಿ ಲಕ್ಷ್ಮೀ ದೇವರ ಪೂಜೆ ನೆರವೇರಿಸಲಾಯಿತು. ದೀಪಾರಾಧನೆ ಮಾಡಿ ಪೂಜಿಸಲಾಯಿತು.ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಗುರು ರಾಮಾಂಜನೇಯ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರು ದೇವಾನಂದ ಸ್ವಾಮೀಜಿ ಮೆರವಣಿಗೆ ಮೂಲಕ ಸ್ವಾಗತಿಸಿ, ಸನ್ಮಾನಿಸಿ ಗೌರವಿಸಲಾಯಿತು.300ಕ್ಕೂ ಹೆಚ್ಚು ಲಂಗ ದಾವಣಿ ತೊಟ್ಟು ಮಲ್ಲಿಗೆ ಮುಡಿದ ಬಾಲಕಿಯರು, ಪುಟಾಣಿಗಳು ಒಟ್ಟು ವೇದಿಕೆಯ ಮೆರುಗು ಹೆಚ್ಚಿಸಿದರು.ಬಾರಕೂರು ದಾಮೋದರ ಶರ್ಮಾ ದೀಪಾವಳಿ ಸಂದೇಶ ನೀಡಿ, ಜೀವನಕ್ಕೆ ದುಡ್ಡು ಮಾತ್ರ ಸಂಪತ್ತಲ್ಲ. ವಿದ್ಯೆ, ವಿವೇಕ, ವಿನಯ ನಮ್ಮ ಸಂಪತ್ತು ಎಂಬ ಸಂದೇಶವನ್ನು ಆಳ್ವಾಸ್ ಸಾಕಾರಗೊಳಿಸಿದೆ'''''''''''''''' ಎಂದು ಶ್ಲಾಘಿಸಿದರು. ದೀಪಾವಳಿ ಆಚರಣೆಗೂ ಮೊದಲು ಮಂಗಳೂರಿನ ಮೂಕಾಂಬಿಕಾ ಚೆಂಡೆ ಬಳಗದಿಂದ ಚೆಂಡೆ, ವಯೋಲಿನ್, ಕೊಳಲು ಮತ್ತು ಕೀಬೋರ್ಡ್ ಸ್ವರಗಳ ಮೂಲಕ ಮೂಡಿಬಂದ ‘ಸಿಂಗಾರಿ ಮೇಳ’ ಇಂಪು ನೀಡಿತು. ಆರಾಧನೆಯ ಬಳಿಕ ಆಚರಣೆಯ ಭಾಗವಾಗಿ ದೀಪಾವಳಿಯ ಸಂಭ್ರಮದ ವೇದಿಕೆಯಲ್ಲಿ ‘ಆಳ್ವಾಸ್ ಸಾಂಸ್ಕೃತಿಕ ವೈಭವ’ ಮೇಳೈಸಿತು. ವಿದ್ವಾನ್ ದೀಪಕ್ ಕುಮಾರ್ ಪುತ್ತೂರು ನಿರ್ದೇಶನದಲ್ಲಿ ಅಷ್ಟಲಕ್ಷ್ಮೀ ಭರತನಾಟ್ಯ ಮೂಡಿಬಂತು. ಶಂಕರಾರ್ಧ ಶರೀರಿಣಿ ರೂಪಕವು ಬಡಗುತಿಟ್ಟು ಯಕ್ಷಗಾನ ಶೈಲಿಯಲ್ಲಿ ಪ್ರಸ್ತುತಗೊಂಡಿತು ಅಚ್ಚುಕಟ್ಟಾದ ಆಂಗಿಕ ಕಸರತ್ತು ಹಾಗೂ ಲಯದಲ್ಲಿ ಮೂಡಿಬಂದ ಸಂಸ್ಥೆ ಯ ವಿದ್ಯಾರ್ಥಿಗಳ ಯೋಗ ಪ್ರದರ್ಶನ ‘ಯೋಗದೀಪಿಕಾ’ ಸ್ವಾಸ್ಥ್ಯ, ಪ್ರಕೃತಿ ಮಹತ್ವ ತಿಳಿಸಿತು.ಸಾಹಸ ಕಲಾ ಮಾದರಿಯ ಮಣಿಪುರಿ ಬಿದಿರು ಕಡ್ಡಿಯಾಟದ ನರ್ತನ (ಸ್ಟಿಕ್ ಡ್ಯಾನ್ಸ್ ) ಈಶಾನ್ಯ ಭಾರತದ ಸಾಹಸ ಹಾಗೂ ಏಕಾಗ್ರತೆಯ ದರ್ಶನ ನೀಡಿತು. ಬಸವರಾಜ್ ಹಾಗೂ ಚೇತನ್ ತರಬೇತಿಯಲ್ಲಿ ಮೂಡಿ ಬಂದ ಮಲ್ಲಕಂಬ ಮತ್ತು ರೋಪ್ ಕಸರತ್ತು ಕಲಾಕ್ರೀಡೆಯಾಗಿ ಮೆರಗು ನೀಡಿತು. ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ದೇಸಿ ಕಲೆ ಮನಸೂರೆಗೊಳಿಸಿತು.

ಕರ್ನಾಟಕದ ದೇಸಿ ಕಲೆಯಾದ ಡೊಳ್ಳು ಕುಣಿತವನ್ನು ಆಳ್ವಾಸ್ ಎಂಜಿನಿಯರಿಂಗ್ ಹಾಗೂ ತಂತ್ರಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದಾಗ ಪ್ರೇಕ್ಷಕ ವರ್ಗವೇ ಧ್ವನಿಯಾಯಿತು. ಯಕ್ಷಗಾನ ರೂಪಕ ಪ್ರಸ್ತುತಗೊಂಡಿತು.

ಕೊನೆಯಲ್ಲಿ ವೇದಿಕೆಯಲ್ಲಿ ಗೊಂಬೆ ವಿನೋದಾವಳಿ ನೃತ್ಯ ರಂಗೇರಿದರೆ, ಆಗಸದಲ್ಲಿ ಸಿಡಿಮದ್ದು ಚಿತ್ತಾರ ಮೂಡಿಸಿತು. ಬೆಳಕಿನ ಸಂಭ್ರಮ ಮನೆ ಮಾಡಿತು.ಶಾಸಕ ಹರೀಶ್ ಪೂಂಜಾ, ಉದ್ಯಮಿ ಕೆ.ಶ್ರೀಪತಿ ಭಟ್, ಮಾಜಿ ಸಚಿವ ಅಭಯಚಂದ್ರ ಜೈನ್, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಉದ್ಯಮಿ ಮುಸ್ತಾಫ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ವಿನಯ್ ಆಳ್ವ ಮತ್ತಿತರರು ಇದ್ದರು. ಉಪನ್ಯಾಸಕ ಕೆ.ವೇಣುಗೋಪಾಲ ಶೆಟ್ಟಿ ಹಾಗೂ ಶಾಲಾ ಆಡಳಿತಾಧಿಕಾರಿ ನಿತೇಶ್ ಮಾರ್ನಾಡ್ ನಿರೂಪಿಸಿದರು.