ರಾಮನಗರ: ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲೆಂದು ಹರಕೆ ಹೊತ್ತು ಕನಕಪುರದಿಂದ ಬೆಂಗಳೂರಿಗೆ ಪಾದಯಾತ್ರೆ ಹೊರಟಿರುವ ಮಹಾತ್ಮ ಗಾಂಧೀಜಿ ವೇಷ ತೊಟ್ಟ ಅಭಿಮಾನಿ ಶನಿವಾರ ರಾಮನಗರದ ಮೂಲಕ ಬೆಂಗಳೂರಿನತ್ತ ಸಾಗಿದರು

ರಾಮನಗರ: ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲೆಂದು ಹರಕೆ ಹೊತ್ತು ಕನಕಪುರದಿಂದ ಬೆಂಗಳೂರಿಗೆ ಪಾದಯಾತ್ರೆ ಹೊರಟಿರುವ ಮಹಾತ್ಮ ಗಾಂಧೀಜಿ ವೇಷ ತೊಟ್ಟ ಅಭಿಮಾನಿ ಶನಿವಾರ ರಾಮನಗರದ ಮೂಲಕ ಬೆಂಗಳೂರಿನತ್ತ ಸಾಗಿದರು.

ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಬೂದಿಬೆಟ್ಟ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮುತ್ತುರಾಯಪ್ಪಗಾಂಧಿ ಮಹಾತ್ಮ ಗಾಂಧೀಜಿ ವೇಷ ತೊಟ್ಟು ಕಾಲ್ನಡಿಗೆಯಲ್ಲಿ ಸಾಗುತ್ತಿರುವ ಡಿ.ಕೆ.ಶಿವಕುಮಾರ್ ಅಭಿಮಾನಿ.

ಡಿ.ಕೆ.ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿ ಅಗಲೆಂದು ಹರಕೆ ಹೊತ್ತಿದ್ದ ಮುತ್ತುರಾಯಪ್ಪಗಾಂಧಿ ಮಹಾತ್ಮ ಗಾಂಧೀಜಿ ವೇಷ ತೊಟ್ಟು ಕನಕಪುರದ ಕೆಂಕೇರಮ್ಮ ದೇವಾಲಯದಿಂದ ಬೆಂಗಳೂರಿನ ತನಕ ಕಾಲ್ನಡಿಗೆ ಯಾತ್ರೆ ಕೈಗೊಂಡಿದ್ದು, ಎರಡನೇ ದಿನವಾದ ಶನಿವಾರ ರಾಮನಗರದಲ್ಲಿ ಯುವ ಕಾಂಗ್ರೆಸ್ ಪದಾಧಿಕಾರಿಗಳು ಅವರನ್ನು ಸ್ವಾಗತಿಸಿ ಬೀಳ್ಕೊಟ್ಟರು.

ಈ ವೇಳೆ ಮಾತನಾಡಿದ ಮುತ್ತುರಾಯಪ್ಪ ಗಾಂಧಿ, ನಾನು ಡಿ.ಕೆ.ಶಿವಕುಮಾರ್ ಅವರ ಅಭಿಮಾನಿ, ಅವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾದರೆ ಅವರ ಮನೆದೇವತೆ ಕೆಂಕೇರಮ್ಮ ದೇವಾಲಯದಿಂದ ಬೆಂಗಳೂರಿನ ಸದಾಶಿವನಗರದ ಡಿಕೆಶಿ ಅವರ ಮನೆವರೆಗೆ ಗಾಂಧಿವೇಷ ತೊಟ್ಟು ಕಾಲ್ನಡಿಗೆ ಯಾತ್ರೆ ನಡೆಸುವುದಾಗಿ ದೇವರಲ್ಲಿ ಹರಕೆ ಕಟ್ಟುಕೊಂಡಿದ್ದಾಗಿ ಹೇಳಿದರು.

ಒಂದು ವರ್ಷ ತಡವಾಗಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಹರಕೆ ಹೊತ್ತಂತೆ ಶುಕ್ರವಾರ ಕೆಂಕೇರಮ್ಮ ದೇವಿಗೆ ಪೂಜೆ ಸಲ್ಲಿಸಿ ಪಾದಯಾತ್ರೆ ಪ್ರಾರಂಭ ಮಾಡಿ ಎರಡನೇ ದಿನ ರಾಮನಗರಕ್ಕೆ ಆಗಮಿಸಿದ್ದೇನೆ. ಇಲ್ಲಿನ ಶಾಸಕರ ಮಾರ್ಗದರ್ಶನದಲ್ಲಿ ಯುವ ಕಾಂಗ್ರೆಸ್ ಮುಖಂಡರು ನನ್ನನ್ನು ಪ್ರೀತಿಯಿಂದ ಸ್ವಾಗತಿಸಿದ್ದು ನನಗೆ ಸಂತಸ ತಂದಿದೆ ಎಂದರು.

ನಾನು ಕಾಂಗ್ರೆಸ್ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಎನ್‌ಎಸ್‌ಯುಐ ಮೂಲಕ ಪಕ್ಷ ಸಂಘಟನೆ ಮಾಡಿ ಪಕ್ಷಕ್ಕೆ ಅಳಿಲು ಸೇವೆ ಮಾಡಿದ್ದೇನೆ. ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲೇಬೇಕೆಂದು ನಾನು ಕೇರಳದ ಕೊಣ್ಣೂರು ಜಿಲ್ಲೆ ಮಾಡಾಯಿ ಕಾವು ಕಾಲಿಯಮ್ಮ ದೇವಸ್ಥಾನದಲ್ಲೂ ಹರಕೆ ಹೊತ್ತಿರುವುದಾಗಿ ಹೇಳಿದರು.

ಈ ಹಿಂದೆ ಬಳ್ಳಾರಿಯಿಂದ ಬೆಂಗಳೂರು ತನಕ, ಮೇಕೆದಾಟಿನಿಂದ ಬೆಂಗಳೂರು ತನಕ ಹಾಗೂ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಗಾಂಧಿ ವೇಷದಲ್ಲಿ ಹೆಜ್ಜೆ ಹಾಕಿದ್ದೆ ಎಂದು ಮುತ್ತುರಾಯಪ್ಪಗಾಂಧಿ ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಮುತ್ತುರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಆರೀಫ್, ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಕಾರ್ಯಾಧ್ಯಕ್ಷ ಅನಿಲ್ ಜೋಗೇಂದರ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಭೂಷಣ್, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ರಾಮು, ಯುವ ಮುಖಂಡರಾದ ವಸೀಂ, ಮಲ್ಲೇಗೌಡ, ಚೇತನ್, ವಿನು ಮತ್ತಿತರರು ಹಾಜರಿದ್ದರು.

6ಕೆಆರ್ ಎಂಎನ್ 3.ಜೆಪಿಜಿ

ಕನಕಪುರದಿಂದ ಬೆಂಗಳೂರಿಗೆ ಮಹಾತ್ಮಗಾಂಧೀಜಿ ವೇಷ ತೊಟ್ಟು ಪಾದಯಾತ್ರೆ ಹೊರಟಿರುವ

ಮುತ್ತುರಾಯಪ್ಪಗಾಂಧಿ ಅವರನ್ನು ಕಾಂಗ್ರೆಸ್ ಮುಖಂಡರು ಸ್ವಾಗತಿಸಿ ಬೀಳ್ಕೊಟ್ಟರು.