ದ.ಕ, ಉಡುಪಿ ಲೋಕಸಭಾ ಕ್ಷೇತ್ರ ಗೆಲವಿಗೆ ಸಂಘಟನಾ ಕಾರ್ಯದರ್ಶಿ ಸಂತೋಷ್‌ ಕರೆಸಿ ಬಿಜೆಪಿ ಪ್ರತಿಕಾರ್ಯತಂತ್ರ

| Published : Apr 17 2024, 01:19 AM IST

ದ.ಕ, ಉಡುಪಿ ಲೋಕಸಭಾ ಕ್ಷೇತ್ರ ಗೆಲವಿಗೆ ಸಂಘಟನಾ ಕಾರ್ಯದರ್ಶಿ ಸಂತೋಷ್‌ ಕರೆಸಿ ಬಿಜೆಪಿ ಪ್ರತಿಕಾರ್ಯತಂತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರು ದಿಢೀರನೆ ಭಾನುವಾರ ರಾತ್ರಿ ಮಂಗಳೂರಿಗೆ ಆಗಮಿಸಿದ್ದು, ಅಂದೇ ತಡರಾತ್ರಿ ಜಿಲ್ಲಾ ಕೋರ್‌ ಕಮಿಟಿ ಸಭೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕರಾವಳಿಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಜಾತಿಯ ದಾಳ ಉರುಳಿಸಿರುವಂತೆಯೇ ಎಚ್ಚೆತ್ತಿರುವ ಬಿಜೆಪಿ ಈಗ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯನ್ನು ಕರೆಸಿ ಕೋರ್‌ ಕಮಿಟಿ ಸಭೆ ಹಾಗೂ ಚುನಾವಣಾ ನಿರ್ವಹಣಾ ಸಮಿತಿ ಸಭೆಯನ್ನು ನಡೆಸಿ ಪ್ರತಿಕಾರ್ಯತಂತ್ರ ಹಣೆದಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರು ದಿಢೀರನೆ ಭಾನುವಾರ ರಾತ್ರಿ ಮಂಗಳೂರಿಗೆ ಆಗಮಿಸಿದ್ದು, ಅಂದೇ ತಡರಾತ್ರಿ ಜಿಲ್ಲಾ ಕೋರ್‌ ಕಮಿಟಿ ಸಭೆ ನಡೆಸಿದ್ದಾರೆ.

ರೋಡ್‌ಶೋ ಮುಗಿಸಿ ಪ್ರಧಾನಿ ನರೇಂದ್ರ ಮೋದಿ ತೆರಳಿದ ಬಳಿಕ ಸಂತೋಷ್‌ ಅವರು ನಗರದ ಖಾಸಗಿ ಹೊಟೇಲ್‌ನಲ್ಲಿ ಸುಮಾರು ಎರಡು ಗಂಟೆ ಕಾಲ ಜಿಲ್ಲಾ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಅಭ್ಯರ್ಥಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಸಹಿತ ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಬಿಜೆಪಿ ಶಾಸಕರು ಇದ್ದರು.

ರೋಡ್‌ಶೋ ಬೂಸ್ಟ್‌ ಬಳಸಿ:

ಪ್ರಧಾನಿ ನರೇಂದ್ರ ಮೋದಿ ನಡೆಸಿದ ರೋಡ್‌ಶೋದ ಬೂಸ್ಟ್‌ನ್ನು ಚುನಾವಣೆಗೆ ಪರಿಣಾಮಕಾರಿಯಾಗಿ ಬಳ‍ಸಿಕೊಳ್ಳುವಂತೆ ಕೋರ್‌ ಕಮಿಟಿ ಸಭೆಯಲ್ಲಿ ಸಂತೋಷ್‌ ಸೂಚನೆ ನೀಡಿದ್ದಾರೆ. ಇದೊಂದು ಮಾದರಿ ಕಾರ್ಯಕ್ರಮವಾಗಿದ್ದು, ಮನೆ ಮನೆ ಪ್ರಚಾರ ನಡೆಸುವ ಜತೆಯಲ್ಲಿ ಕಾರ್ನರ್‌ ಸಭೆ ನಡೆಸಲು ಒತ್ತು ನೀಡಬೇಕು. ಮೋದಿ ಮೋಡಿ ಎಲ್ಲರಿಗೆ ತಲುಪಬೇಕು ಎಂದು ಅವರು ಸೂಚಿಸಿದ್ದಾರೆ.

ಗಣ್ಯರ ಭೇಟಿಗೆ ಸೂಚನೆ:

ಬಿಜೆಪಿ ಬಗ್ಗೆ ಸದಭಿಪ್ರಾಯ ಇರುವವರು ಮಾತ್ರವಲ್ಲ ಋಣಾತ್ಮಕ ಅಭಿಪ್ರಾಯ ಹೊಂದಿರುವವರನ್ನೂ ಭೇಟಿ ಮಾಡಿ ಕೇಂದ್ರ ಸರ್ಕಾರದ ಸಾಧನೆ, ಮೋದಿ ವರ್ಚಸ್ಸಿನ ಬಗ್ಗೆ ಹೇಳಬೇಕು. ವಿವಿಧ ಕ್ಷೇತ್ರದ ಪ್ರಮುಖರು, ಗಣ್ಯರನ್ನು ಕಡ್ಡಾಯವಾಗಿ ಭೇಟಿ ಮಾಡಿ ಮಾತನಾಡಿಸಬೇಕು ಎಂದು ಸಂತೋಷ್‌ ತಿಳಿಸಿದ್ದಾರೆ ಎಂದು ಪಕ್ಷ ಮೂಲಗಳು ತಿಳಿಸಿವೆ.

ಜಾತಿ ದಾಳಕ್ಕೆ ಭೀತಿ ಬೇಡ:

ಮರುದಿನ ಸೋಮವಾರ ನಗರದ ಸಂಘನಿಕೇತನದಲ್ಲಿ ಉಡುಪಿ ಹಾಗೂ ದ.ಕ. ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿ ಸಭೆ ನಡೆಸಿದ್ದಾರೆ. ದ.ಕ. ಹಾಗೂ ಉಡುಪಿಯನ್ನು ಸವಾಲಿನ ಕ್ಷೇತ್ರವಾಗಿ ಪರಿಣಿಸಿರುವ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದುಕೊಂಡಿದೆ.

ಕಾಂಗ್ರೆಸ್‌ ಎಸೆದಿರುವ ಜಾತಿ ದಾಳಕ್ಕೆ ಭೀತಿ ಪಡಬೇಡಿ, ಮುಖ್ಯವಾಗಿ ಕರಾವಳಿಯಲ್ಲಿ ಅನೇಕ ಜಾತಿಗಳಿದ್ದರೂ, ಯಾರೂ ಕೂಡ ಜಾತಿ ಆಧಾರದಲ್ಲಿ ಅಭ್ಯರ್ಥಿಯನ್ನು ಗೆಲ್ಲಿಸುವುದಿಲ್ಲ, ಅದರ ಬದಲು ದೇಶ, ರಾಷ್ಟ್ರೀಯ ಹಿತದ ಚಿಂತನೆಯನ್ನು ಹೊಂದಿರುತ್ತಾರೆ. ಹಾಗಾಗಿ ಜಾತಿಯ ದಾಳಕ್ಕೆ ಎದೆಗುಂದುವ ಅಗತ್ಯ ಇಲ್ಲ ಎಂದು ಸಂತೋಷ್‌ ಸಭೆಯಲ್ಲಿ ಪ್ರತಿಪಾದಿಸಿದರು ಎನ್ನಲಾಗಿದೆ.

ಲೀಡ್‌ ಕಡಿಮೆಯಾಗದಂತೆ ನಿಗಾ:

ಕಾಂಗ್ರೆಸ್‌ನ ಜಾತಿ ದಾಳಕ್ಕೆ ಪ್ರತಿಯಾಗಿ ಮೋದಿ ರೋಡ್‌ಶೋ ಯಶಸ್ಸು, ಕೇಂದ್ರ ಸರ್ಕಾರದ ಸಾಧನೆ ಹಾಗೂ ರಾಜ್ಯ ಸರ್ಕಾರದ ವಿರುದ್ಧದ ಜನತೆಯ ಅಸಮಾಧಾನವನ್ನು ಮತದಾರರ ಮನ ತಲುಪಿಸುವಂತೆ ಸಂತೋಷ್‌ ಸಲಹೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಕಳೆದ ಅವಧಿಗಿಂತ ಮತ ಗಳಿಕೆಯಲ್ಲಿ ಕಡಿಮೆ ಆಗಬಾರದು. ಈ ಬಗ್ಗೆ ನಿಗಾ ವಹಿಸಬೇಕು. ಚುನಾವಣೆಗೆ ಕೆಲವೇ ದಿನ ಇರುವುದರಿಂದ ಯುದ್ಧೋಪಾದಿಯಲ್ಲಿ ಪ್ರಚಾರ ಕಾರ್ಯ ನಡೆಸುವಂತೆ ಅವರು ಸೂಚನೆ ನೀಡಿದರು ಎಂದು ಹೇಳಲಾಗಿದೆ.

ಉಭಯ ಜಿಲ್ಲೆಯ ಚುನಾವಣಾ ನಿರ್ವಹಣಾ ಸಮಿತಿ ಸಭೆಯಲ್ಲಿ ಜಿಲ್ಲೆಯ ಪದಾಧಿಕಾರಿಗಳು, ಶಾಸಕರು, ಮಂಡಲ, ಶಕ್ತಿ ಕೇಂದ್ರ ಪ್ರಮುಖರು ಇದ್ದರು.