ಸಾರಾಂಶ
ಬೆಂಗಳೂರು : ಹುಬ್ಬಳ್ಳಿ-ಧಾರವಾಡ ಕ್ಷೇತ್ರದಿಂದ ಸಲ್ಲಿಸಿರುವ ನಾಮಪತ್ರ ಹಿಂಪಡೆದು ಕಾಂಗ್ರೆಸ್ ಅಭ್ಯರ್ಥಿ ಆನಂದ್ ಅಸೂಟಿ ಅವರಿಗೆ ಬೆಂಬಲಿಸುವಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದಿಂಗಾಲೇಶ್ವರ ಸ್ವಾಮೀಜಿಗೆ ಮನವಿ ಮಾಡಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಲಿಂಗಾಯತ ನಾಯಕರನ್ನು ತುಳಿಯುತ್ತಿದ್ದಾರೆ. ಲಿಂಗಾಯತ ವಿರೋಧಿ ಪ್ರಹ್ಲಾದ್ ಜೋಶಿ ಅವರನ್ನು ಸೋಲಿಸಲು ಚುನಾವಣೆಗೆ ನಿಲ್ಲುತ್ತಿದ್ದೇನೆ ಎಂದು ಘೋಷಿಸಿ ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಸಿದ್ದರು.ಡಿ.ಕೆ. ಶಿವಕುಮಾರ್ ಅವರು ದಿಂಗಾಲೇಶ್ವರ ಸ್ವಾಮೀಜಿ ಅವರೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದು, ನಿಮ್ಮ ನಿರ್ಧಾರ ನಮಗೆ ಮೊದಲೇ ಗೊತ್ತಿದ್ದರೆ ನಮ್ಮ ಪಕ್ಷದಿಂದಲೇ ಅವಕಾಶ ಮಾಡಲು ಸುಲಭವಾಗುತ್ತಿತ್ತು.
ಇದೀಗ ಪಕ್ಷದಿಂದ ಆನಂದ್ ಅಸೂಟಿ ಅವರಿಗೆ ಟಿಕೆಟ್ ನೀಡಿದ್ದೇವೆ. ಪ್ರಹ್ಲಾದ್ ಜೋಶಿ ಅವರಿಗೆ ಪಾಠ ಕಲಿಸಲು ಚುನಾವಣೆಗೆ ನಿಂತಿದ್ದೀರಿ. ಕಾಂಗ್ರೆಸ್ ಹಾಗೂ ನಿಮ್ಮ ನಡುವೆ ಮತ ವಿಭಜನೆಯಾದರೆ ಜೋಶಿ ಗೆಲುವು ಸುಲಭವಾಗಲಿದೆ. ಹೀಗಾಗಿ ನಾವು ಇಬ್ಬರೂ ಸೇರಿ ಹೋರಾಟ ಮಾಡಿ ಅವರನ್ನು ಸೋಲಿಸಬೇಕು ಎಂದು ಮನವಿ ಮಾಡಿರುವುದಾಗಿ ಮೂಲಗಳು ತಿಳಿಸಿವೆ.
ದಿಂಗಾಲೇಶ್ವರ ಸ್ವಾಮೀಜಿಗಳ ಬಳಿ ನಾಮಪತ್ರ ವಾಪಸು ಪಡೆಯವಂತೆ ಮನವಿ ಮಾಡಿದ್ದೇನೆ. ನೀವು ಜ್ಯಾತ್ಯಾತೀತ ಸ್ವಾಮೀಜಿ, ಮಠ ಜ್ಯಾತ್ಯಾತೀತ ನಿಲುವು ಹೊಂದಿದೆ. ಹೀಗಾಗಿ ನಾವು ನಿಮ್ಮ ಜತೆ ಇರುತ್ತೇವೆ. ಎಲ್ಲಾ ಜ್ಯಾತ್ಯಾತೀತ ಸ್ವಾಮೀಜಿಗಳಿಗೂ ಮನವಿ ಮಾಡುತ್ತೇವೆ. ನೀವು ಸ್ಪರ್ಧೆ ಮಾಡದೆ ನಮಗೆ ಆಶೀರ್ವಾದ ಮಾಡಿ ಎಂದು ಕೋರಿದ್ದೇನೆ.
- ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ