ಕನಕಪುರ: ಕಸಬಾ ಹೋಬಳಿ ಕಲ್ಲಹಳ್ಳಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ರೋಟರಿ ಕನಕಪುರ ಮತ್ತು ಪಶುಪಾಲನಾ ಇಲಾಖೆ ಸಹಯೋಗದಲ್ಲಿ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹುಟ್ಟುಹಬ್ಬದ ಪ್ರಯುಕ್ತ ಹಾಲು ಕರೆಯುವ ಸ್ಪರ್ಧೆ, ಮಿಶ್ರತಳಿ ಕರುಗಳ ಪ್ರದರ್ಶನ ಹಾಗೂ ಪಶು ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಕನಕಪುರ: ಕಸಬಾ ಹೋಬಳಿ ಕಲ್ಲಹಳ್ಳಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ರೋಟರಿ ಕನಕಪುರ ಮತ್ತು ಪಶುಪಾಲನಾ ಇಲಾಖೆ ಸಹಯೋಗದಲ್ಲಿ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹುಟ್ಟುಹಬ್ಬದ ಪ್ರಯುಕ್ತ ಹಾಲು ಕರೆಯುವ ಸ್ಪರ್ಧೆ, ಮಿಶ್ರತಳಿ ಕರುಗಳ ಪ್ರದರ್ಶನ ಹಾಗೂ ಪಶು ಆರೋಗ್ಯ ತಪಾಸಣಾ ಶಿಬಿರ ನಡೆಯಿತು.ರೋಟರಿ ಸಂಸ್ಥೆ ಅಧ್ಯಕ್ಷ ಕೆಬಿಎಸ್ ಸಿದ್ದರಾಜು ಮಾತನಾಡಿ, ಡಿ.ಕೆ.ಸುರೇಶ್ ರೈತ ಪರ ಕಾಳಜಿ ಉಳ್ಳವರಾಗಿದ್ದಾರೆ. ಅವರು ಬಮೂಲ್ ಅಧ್ಯಕ್ಷರಾಗಿ ಹೈನುಗಾರಿಕೆಗೆ ಉತ್ತೇಜನ ನೀಡುತ್ತಿದ್ದಾರೆ. ಅದಕ್ಕಾಗಿ ಅವರ ಹುಟ್ಟುಹಬ್ಬವನ್ನು ಜಾನುವಾರುಗಳಿಗೆ ಸಂಬಂಧಿಸಿದ ಕಾರ್ಯಕ್ರಮದ ಮೂಲಕ ಆಚರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಕನಕಪುರ ತಾಲೂಕು ಹೈನುಗಾರಿಕೆ ಮತ್ತು ರೇಷ್ಮೆಗೆ ಹೆಚ್ಚು ಪ್ರಸಿದ್ಧಿಯಾಗಿದೆ. ಶೇ.80ರಷ್ಟು ರೈತರು ಹೈನುಗಾರಿಕೆ ಮತ್ತು ರೇಷ್ಮೆಯನ್ನು ಅವಲಂಬಿಸಿದ್ದಾರೆ, ಹೈನುಗಾರಿಕೆ ರೈತರನ್ನು ಉತ್ತೇಜಿಸಲು ಹೆಚ್ಚಿನ ಹಾಲು ಕರೆಯುವ ಸ್ಪರ್ಧೆಯನ್ನು ಏರ್ಪಡಿಸಿದ್ದೇವೆ. ಬುಧವಾರ ರಾತ್ರಿ, ಗುರುವಾರ ಬೆಳಿಗ್ಗೆ ಮತ್ತು ರಾತ್ರಿ ಮೂರು ಸಮಯದಲ್ಲಿ ಹಸುಗಳಿಂದ ಹಾಲು ಕರೆಯುತ್ತಿದ್ದು ಯಾರ ಹಸು ಹೆಚ್ಚಿಗೆ ಹಾಲು ಕೊಡುತ್ತದೆ, ಅಂತಹ ಹಸುಗಳಿಗೆ ಪ್ರಥಮ ಬಹುಮಾನ 15,000 ರುಪಾಯಿ, ದ್ವಿತೀಯ ಬಹುಮಾನ 12,000 ರುಪಾಯಿ, ತೃತೀಯ ಬಹುಮಾನ 8,000 ರುಪಾಯಿ ಕೊಡಲಾಗುವುದು ಎಂದು ಹೇಳಿದರು.ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತಹ ಎಲ್ಲಾ ಹಸುಗಳಿಗೂ ಸಮಾಧಾನಕರ ಬಹುಮಾನ, ಒಂದು ಮೂಟೆ ಪಶು ಆಹಾರ, ಹಸಿ ಮೇವು ಹಾಗೂ ಉಡುಗೊರೆ ಕೊಡಲಾಗುವುದು. ಜೊತೆಗೆ ಪಶು ಇಲಾಖೆ ವೈದ್ಯರ ತಂಡ ಮನೆಮನೆಗೆ ಭೇಟಿ ನೀಡಿ ರಾಸುಗಳ ತಪಾಸಣೆ, ವ್ಯಾಕ್ಸಿನೇಷನ್ ಮಾಡಲಿದೆ ಎಂದು ತಿಳಿಸಿದರು
ರೋಟರಿ ಮಾಜಿ ಅಧ್ಯಕ್ಷ ಜೆಪಿಎನ್ ಭಾನುಪ್ರಕಾಶ್ ಮಾತನಾಡಿ, ಸುರೇಶ್ ಅವರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ಮಾಡುವುದರಿಂದ ಜನರಿಗೆ ಏನು ಉಪಯೋಗ ಆಗುವುದಿಲ್ಲ, ಅವರ ಹೆಸರಿನಲ್ಲಿ ಗ್ರಾಮೀಣ ಜನತೆ ಮತ್ತು ರೈತರಿಗೆ ಸಾರ್ಥಕವಾಗುವ ಕಾರ್ಯಕ್ರಮ ನಡೆಸುತ್ತಿದ್ದೇವೆ. ಸ್ಪರ್ಧೆಗೆ ಬರುವಂತಹ ಜಾನುವಾರುಗಳನ್ನು ಕರೆ ತರಲು ಉಚಿತ ಟೆಂಪೋ ವ್ಯವಸ್ಥೆ ಮಾಡಲಾಗಿದೆ. ಉತ್ತಮ ಮಿಶ್ರ ತಳಿ ಕರುಗಳ ಪ್ರದರ್ಶನ ನಡೆಸುತ್ತಿದ್ದು, ಹೆಚ್ಚಿನ ರೈತರು ಹಸು ಮತ್ತು ಕರಗಳನ್ನು ಇಲ್ಲಿಗೆ ಕರೆತಂದಿದ್ದಾರೆ. ಆರೋಗ್ಯಕರ ಹಸು, ಕರುಗಳಿಗೆ ಬಹುಮಾನ ನೀಡಲಾಗುವುದು. ಅಶಕ್ತ ಕರುಗಳಿಗೆ ಇಲ್ಲಿಯೇ ಉಚಿತ ಚಿಕಿತ್ಸೆ ನೀಡಲಾಗುವುದು. ರೈತರು ಅವಕಾಶ ಸದ್ಬಳಸಿಕೊಂಡಿದ್ದಕ್ಕೆ ಧನ್ಯವಾದ ತಿಳಿಸಿದರು.ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಯು.ಸಿ.ಕುಮಾರ್ ಮಾತನಾಡಿ, ಸುರೇಶ್ ಅವರ ಹುಟ್ಟುಹಬ್ಬದ ಪ್ರಯುಕ್ತ ರೋಟರಿ ವತಿಯಿಂದ ಹೆಚ್ಚಿನ ಹಾಲು ಕರೆಯುವ ಸ್ಪರ್ಧೆ, ಮಿಶ್ರತಳಿ ಕರುಗಳ ಪ್ರದರ್ಶನ ಹಾಗೂ ಬರಡು ರಾಸುಗಳ ತಪಾಸಣೆ ಶಿಬಿರ ಆಯೋಜಿಸಲಾಗಿದೆ. ಹೆಚ್ಚಿನ ಹಾಲು ಕರೆಯುವ ಹಸುಗಳಿಗೆ ಬಹುಮಾನ ಕೊಡುವ ಮೂಲಕ ಹೈನುಗಾರಿಕೆಗೆ ಪ್ರೋತ್ಸಾಹ ನೀಡುತ್ತಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪಶು ಇಲಾಖೆ ಅಧಿಕಾರಿ ಡಾ.ಹರಿಣಿ, ಡಾ.ಪಂಕಜ, ಡಾ.ಸುಧೀರ್ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ತಾಪಂ ಮಾಜಿ ಅಧ್ಯಕ್ಷ ಎಂ.ಪುರುಷೋತ್ತಮ್, ಗ್ರಾಪಂ ಮಾಜಿ ಅಧ್ಯಕ್ಷರಾದ ನಟರಾಜ್, ಪ್ರಕಾಶ್ ಮತ್ತು ರೋಟರಿ ಸಂಸ್ಥೆಯ ಮುನಿರಾಜು, ಗವಿರಾಜು, ಮುನಿ ನಿಂಗಯ್ಯ ,ನಿಜಲಿಂಗಪ್ಪ, ಶ್ರೀಧರ್, ದೇಸಾಯಿ, ರೋಟರಿ ಪದಾಧಿಕಾರಿಗಳು, ಪಶುಪಾಲನಾ ಇಲಾಖೆ ನೌಕರರು ಉಪಸ್ಥಿತರಿದ್ದರು.ಕೆ ಕೆ ಪಿ ಸುದ್ದಿ 03:ಕಲ್ಲಹಳ್ಳಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ರೋಟರಿ ಕನಕಪುರ ಮತ್ತು ಪಶುಪಾಲನಾ ಇಲಾಖೆ ಸಹಯೋಗದಲ್ಲಿ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹುಟ್ಟುಹಬ್ಬದ ಪ್ರಯುಕ್ತ ಹಾಲು ಕರೆಯುವ ಸ್ಪರ್ಧೆ, ಮಿಶ್ರತಳಿ ಕರುಗಳ ಪ್ರದರ್ಶನ ಹಾಗೂ ಪಶು ಆರೋಗ್ಯ ತಪಾಸಣಾ ಶಿಬಿರ ನಡೆಯಿತು.