ಗೋಪಾಲ್ ಯಡಗೆರೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಬೆನ್ನಲ್ಲೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಇತ್ತ ಸಚಿವ ಸಂಪುಟ ರಚನೆ ಚರ್ಚೆಗಳು ಗರಿಗೆದರಿದೆ. ನೂತನ ಸಚಿವ ಸಂಪುಟದಲ್ಲಿ ಜಿಲ್ಲೆಯ ಪ್ರಾತಿನಿಧ್ಯ ಯಾರಿಗೆ ಅವಕಾಶ ಸಿಗಬಹುದು ಎಂಬ ಚರ್ಚೆಗಳು ಜಿಲ್ಲೆಯಲ್ಲಿ ಜೋರಾಗಿದೆ.
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವುದು ಖಚಿತವಾಗಿದ್ದು, ಇವರ ಸಚಿವ ಸಂಪುಟದಲ್ಲಿ ಜಿಲ್ಲೆಯ ಒಬ್ಬರಿಗೆ ಸ್ಥಾನ ಸಿಗುವುದು ಖಚಿತವಾಗಿದೆ. ಜಿಲ್ಲೆಯಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದ ಮೂರು ಮಂದಿಯೂ ತಮ್ಮದೇ ಆದ ಕಾರಣಕ್ಕೆ ಹೊಸ ಸಚಿವ ಸಂಪುಟದಲ್ಲಿ ಸೇರ್ಪಡೆಗೊಳ್ಳಲು ಲಾಬಿ ಆರಂಭಿಸಿದ್ದಾರೆ.2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಕಿಮ್ಮನೆ ರತ್ನಾಕರ್ ಅವರಿಗೆ ಶಿಕ್ಷಣ ಖಾತೆ ಸಿಕ್ಕಿತ್ತು. ಆದರೆ ಅದೇ ಅವಧಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ತಡೆಗಟ್ಟಲು ವಿಫಲವಾದ ಆರೋಪ ಕೇಳಿ ಬಂದ ಬಳಿಕ ನಡೆದ ಸಚಿವ ಸಂಪುಟ ಪುನಾರಚನೆ ಸಂದರ್ಭದಲ್ಲಿ ಅವರನ್ನು ಕೈ ಬಿಡಲಾಗಿತ್ತು.
2023ರಲ್ಲಿ ಎರಡನೇ ಬಾರಿಗೆ ಪುನಃ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಈಡಿಗ ಕೋಟಾ ಅಡಿಯಲ್ಲಿ ಮಧು ಬಂಗಾರಪ್ಪ ಅವರಿಗೆ ಶಿಕ್ಷಣ ಖಾತೆ ದೊರಕಿತು. ಮಧು ಬಂಗಾರಪ್ಪ ತಮ್ಮ ಖಾತೆಯನ್ನು ಚೆನ್ನಾಗಿಯೇ ನಿರ್ವಹಿಸಿದರು ಕೂಡ. ಮಧು ಬಂಗಾರಪ್ಪ ಅವರ ಸಚಿವ ಸಂಪುಟ ಸೇರ್ಪಡೆಗೆ ನಟ ಶಿವರಾಜ ಕುಮಾರ್ ಅವರ ಒತ್ತಡದ ಜೊತೆಗೆ ಉಪ ಮುಖ್ಯಮಂತ್ರಿಯಾದ ಡಿ. ಕೆ. ಶಿವಕುಮಾರ್ ಅವರು ದಿ. ಬಂಗಾರಪ್ಪ ಅವರ ಶಿಷ್ಯರಾಗಿದ್ದು, ಆ ಋಣ ತೀರಿಸುವ ಕಾರಣಕ್ಕೂ ಡಿಕೆಶಿ ಇವರ ಸೇರ್ಪಡೆಗೆ ಪೂರಕವಾಗಿ ಕೆಲಸ ಮಾಡಿದ್ದರು.
ಇದೀಗ ಸಿದ್ಧರಾಮಯ್ಯನವರು ಸಚಿವ ಸಂಪುಟದ ಜೊತೆಗೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುವುದು ಖಚಿತವಾಗಿದೆ. ಡಿ.ಕೆ. ಶಿವಕುಮಾರ್ ಹೊಸದಾಗಿ ತಮ್ಮದೇ ಸಚಿವ ಸಂಪುಟ ರಚಿಸಲಿದ್ದು, ಈ ವೇಳೆಯಲ್ಲಿ ಜಿಲ್ಲೆಯ ಪ್ರಾತಿನಿಧ್ಯ ಯಾರಿಗೆ ಸಿಗಬಹುದು ಎಂಬುವುದು ಕುತೂಹಲ ಮೂಡಿಸಿದೆ.
ಜಿಲ್ಲಾ ಕಾಂಗ್ರೆಸ್ ಶಾಸಕರ ಪೈಕಿ ಭದ್ರಾವತಿಯ ಬಿ. ಕೆ. ಸಂಗಮೇಶ್ ಅವರಿಗೆ ಹಿರಿತನ ಇದೆ. 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಆದರೆ ಸಂಗಮೇಶ್ ಸೋಲು ಅನುಭವಿಸಿದ್ದರು. 2018ರಲ್ಲಿ ಸಂಗಮೇಶ್ ಗೆದ್ದಿದ್ದು, ಆಗ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾದರೂ ಸಂಗಮೇಶ್‌ಗೆ ನಿರಾಶೆ ಕಾದಿತ್ತು.2023ರ ಚುನಾವಣೆ ಸಂದರ್ಭದಲ್ಲಿ ಭದ್ರಾವತಿಯಿಂದ ಸಂಗಮೇಶ್ ಗೆದ್ದು ಬಂದಲ್ಲಿ ಮಂತ್ರಿ ಸ್ಥಾನ ಕೊಡಲಾಗುವುದು ಎಂದು ಸ್ವತಃ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ.ಶಿವಕುಮಾರ್ ಮತದಾರರಿಗೆ ಭರವಸೆ ನೀಡಿದ್ದರು. ಸಂಗಮೇಶ್ ಸಹ ಇದನ್ನು ಮುಂದಿಟ್ಟುಕೊಂಡೇ ಪ್ರಚಾರ ನಡೆಸಿ ಮತದಾರರನ್ನು ಆಕರ್ಷಿಸಿದ್ದರು. ಕೆಪಿಸಿಸಿ ಮುಖಂಡರ ಭರವಸೆ ಅವರ ಗೆಲುವಿಗೂ ಸಹಕಾರಿಯಾಗಿತ್ತು. ಹೀಗಾಗಿ ಕಾಂಗ್ರೆಸ್ ಸರ್ಕಾರಕ್ಕೆ ಸಂಗಮೇಶ್ ಅವರನ್ನು ಸಚಿವರನ್ನಾಗಿ ಮಾಡುವ ಅನಿವಾರ್ಯತೆ ಇತ್ತು. ಆದರೆ ಜಾತಿ ಮತ್ತು ಬಾಹ್ಯ ಒತ್ತಡದ ಕಾರಣ ಈ ಅವಕಾಶ ಮಧು ಬಂಗಾರಪ್ಪ ಅವರ ಪಾಲಾಗಿತ್ತು. ಆ ಬಾರಿ ತಪ್ಪಿದ ಅವಕಾಶ ಈ ಭಾರಿ ಸಿಗಬಹುದೆಂಬ ನಿರೀಕ್ಷೆ ಅವರ ಬೆಂಬಲಿಗರಲ್ಲಿದೆ. ಜೊತೆಗೆ ಆಗ ಭರವಸೆ ನೀಡಿದ್ದ ಡಿ. ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗುತ್ತಿರುವುದರಿಂದ ಅವರು ಕೊಟ್ಟ ಮಾತು ಉಳಿಸಿಕೊಳ್ಳುವರೇ ಎಂಬ ಪ್ರಶ್ನೆಯನ್ನು ಭದ್ರಾವತಿಯ ಜನ ಎತ್ತುತ್ತಿದ್ದಾರೆ.
ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಎರಡು ಬಾರಿ ಬಿಜೆಪಿಯಿಂದ ಶಾಸಕರಾಗಿದ್ದರೂ ಅವಕಾಶ ಸಿಕ್ಕಿರಲಿಲ್ಲ. 2023ರಲ್ಲಿ ಬೇಳೂರು ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿ, ಜಾತಿ ಮತ್ತು ಸೀನಿಯಾರಿಟಿಯಲ್ಲಿ ತಮಗೆ ಅವಕಾಶ ಸಿಗಬೇಕೆಂದು ಒತ್ತಡ ಹೇರಿದರು. ಆದರೆ ಅವಕಾಶ ಇವರಿಗೆ ಸಿಗಲಿಲ್ಲ. ಹೀಗಾಗಿ ಈ ಬಾರಿಯಾದರೂ ತಮಗೆ ಕೊಡಲೇಬೇಕು ಎಂಬ ಒತ್ತಡ ಹಾಕುತ್ತಿದ್ದಾರೆ.ಹಾಲಿ ಸಚಿವರಾಗಿದ್ದ ಮಧು ಬಂಗಾರಪ್ಪನವರು ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರಾಗಿದ್ದು, ಸವಾಲಿನ ಕ್ಷೇತ್ರವಾಗಿರುವ ಶಿಕ್ಷಣ ಇಲಾಖೆಯನ್ನು ಮೂರೂವರೆ ವರ್ಷಗಳ ಕಾಲ ಸಮರ್ಥವಾಗಿ ನಿರ್ವಹಿಸಿದ್ದಾರೆ. ಮೊದಲ ಬಾರಿಗೆ ಸಚಿವರಾಗಿ ಶಿಕ್ಷಣ ಇಲಾಖೆಯಂತಹ ದೊಡ್ಡ ಇಲಾಖೆಯನ್ನು ಪಡೆದರೂ ಸಮರ್ಥವಾಗಿ ಕೆಲಸ ಮಾಡಿ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗೆ ಕಾರಣರಾಗಿದ್ದಾರೆ. ಕೊಟ್ಟ ಖಾತೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಸರ್ಕಾರದ ಮರ್ಯಾದೆ ಹೆಚ್ಚಿಸಿದ್ದಾರೆ.
ಇದರ ಜೊತೆಗೆ ಮಾಜಿ ಮುಖ್ಯಮಂತ್ರಿ ದಿ. ಬಂಗಾರಪ್ಪನವರ ಪುತ್ರ ಎಂಬ ದೊಡ್ಡ ಹಿನ್ನೆಲೆಯೂ ಇದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿ. ಎರಡೂ ಬಣಗಳಲ್ಲಿ ಉತ್ತಮ ಬಾಂಧವ್ಯ ವೃದ್ಧಿಸಿಕೊಂಡಿದ್ದಾರೆ.ಇದರ ಜೊತೆಗೆ ಯುವ ಮುಖಗಳಿಗೆ ಹೆಚ್ಚುಆದ್ಯತೆ ನೀಡಬೇಕೆಂಬ ಸೂಚನೆ ನೀಡಿದ್ದು, ಇದು ಕೂಡ ಮಧು ಬಂಗಾರಪ್ಪನವರಿಗೆ ನೆರವಾದರೆ ಆಶ್ಚರ್ಯಪಡಬೇಕಿಲ್ಲ.
ಒಟ್ಟಾರೆಯಾಗಿ ಸಿಗಬಹುದಾದ ಒಂದು ಸಚಿವ ಸ್ಥಾನಕ್ಕೆ ಮೂರು ಮಂದಿಯೂ ತೀವ್ರ ಆಕಾಂಕ್ಷಿಗಳಾಗಿದ್ದು, ಎಲ್ಲರಿಗೂ ಈ ಅವಕಾಶ ಕೇಳಲು ತಮ್ಮದೇ ಆದ ಗಟ್ಟಿಯಾದ ಕಾರಣವಿದೆ. ಅದೃಷ್ಟ ಯಾರ ಪಾಲಾಗಬಹುದು ಎಂಬುದು ಭವಿಷ್ಯವೇ ಉತ್ತರಿಸಬೇಕು.