ದಾಬಸ್‍ಪೇಟೆ: ಡಿ.ಕೆ.ಶಿವಕುಮಾರ್ ಅವರು ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭವನ್ನು ಸೋಂಪುರ ಹೋಬಳಿಯ ಕಾಂಗ್ರೇಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಬ್ಬದ ರೀತಿಯಲ್ಲಿ ಆಚರಣೆ ಮಾಡಿ ಸಂಭ್ರಮಿಸೋಣ ಎಂದು ಕಾಂಗ್ರೆಸ್ ಮುಖಂಡ ಅಗಳಕುಪ್ಪೆ ಗೋವಿಂದರಾಜು ತಿಳಿಸಿದರು.

ಪಟ್ಟಣದ ಮಾರುತಿ ಕಾಂಪ್ಲೆಕ್ಸ್‌ನಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಕಟ್ಟಾಳು, ಕೆಪಿಸಿಸಿ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತಂದ ಡಿ.ಕೆ.ಶಿವಕುಮಾರ್ ಅವರು ರಾಜ್ಯದ 29ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವುದು ನಮಗೆಲ್ಲಾ ಹೆಮ್ಮೆಯ ವಿಷಯ. ಈ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಲು ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಪಟ್ಟಣದ ಉದ್ದಾನೇಶ್ವರ ವೃತ್ತದಲ್ಲಿ ಬೃಹತ್‌ ಪ್ರೊಜೆಕ್ಟರ್ ಅಳವಡಿಸಿ ಸೋಂಪುರ ಹೋಬಳಿಯ 3000ಕ್ಕೂ ಹೆಚ್ಚು ಕಾರ್ಯಕರ್ತರು ಡಿಕೆಶಿ ಮುಖ್ಯಮಂತ್ರಿ ಪ್ರಮಾಣ ವಚನದ ನೇರ ಪ್ರಸಾರವನ್ನು ವೀಕ್ಷಿಸಲು ಅವಕಾಶ ಕಲ್ಪಿಸಿದ್ದು, ಹೋಬಳಿಯ ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಆಗಮಿಸಬೇಕೆಂದರು.

ಪ್ರತಿ ಮನೆಗೂ ಸಿಹಿ ವಿತರಣೆ:

ನೆಲಮಂಗಲ ಶಾಸಕರಾದ ಎನ್.ಶ್ರೀನಿವಾಸ್ ಮಾರ್ಗದರ್ಶನದಲ್ಲಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಪ್ರತಿ ಮನೆಗೂ ಸಿಹಿ ಹಂಚಲು ತೀರ್ಮಾನಿಸಿದ್ದಾರೆ. ಈ ನಿಟ್ಟಿನಲ್ಲಿ ಸೋಂಪುರ ಹೋಬಳಿಯ ಪ್ರತಿ ಮನೆಗೂ ಪಕ್ಷಬೇದವಿಲ್ಲದೆ ನಮ್ಮ ಮುಖಂಡರ ನೇತೃತ್ವದಲ್ಲಿ ಸಿಹಿ ಹಂಚುತ್ತೇವೆ ಎಂದು ಹೇಳಿದರು.


ಸಭೆಯಲ್ಲಿ ಎನ್‌ಪಿಎ ಸದಸ್ಯ ಅಂಚೆಮನೆ ಪ್ರಕಾಶ್, ಗ್ರಾಪಂ ಮಾಜಿ ಅಧ್ಯಕ್ಷರಾದ ಶಿವಕುಮಾರ್, ರಾಮಾಂಜೀನಯ್ಯ, ಖಲೀಂ ಉಲ್ಲಾ, ಗಂಗರುದ್ರಯ್ಯ, ಸಿದ್ದರಾಜು, ನಯಾಜ್ ಖಾನ್, ಮುಖಂಡರಾದ ಗೊಟ್ಟಿಗೆರೆ ಮೂರ್ತಿ, ಚಂದ್ರಶೇಖರ್, ಸುರೇಶ್, ಯೋಗಾನಂದೀಶ್, ಪಾರ್ಥ, ಸಿದ್ದರಾಜು, ನಾಗರಾಜು, ಮಂಜುನಾಥ್, ಹೊಸಳಯ್ಯ, ನಾರಾಯಣಸ್ವಾಮಿ, ಮನುಪ್ರಸಾದ್, ಬೈಲಪ್ಪ, ಚಂದ್ರಶೇಖರ್, ಬೋಜರಾಜು, ಪ್ರವೀಣ್, ಚಿಕ್ಕಣ್ಣ, ಅಜ್ಜಯ್ಯ, ಟಗರುಶಿವು, ನಂದೀಶ್, ನಾಗೇಶ್ ಇತರರಿದ್ದರು.

ಪೋಟೋ 5 :

ದಾಬಸ್‍ಪೇಟೆಯಲ್ಲಿ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅಗಳಕುಪ್ಪೆ ಗೋವಿಂದರಾಜು ಮಾತನಾಡಿದರು. ಅಂಚೆಮನೆ ಪ್ರಕಾಶ್, ಗ್ರಾಪಂ ಮಾಜಿ ಅಧ್ಯಕ್ಷರಾದ ಶಿವಕುಮಾರ್, ರಾಮಾಂಜೀನಯ್ಯ ಇತರರಿದ್ದರು.