ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್‌ ಅವರು ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಅವರ ಅಭಿಮಾನಿಗಳು, ಕಾಂಗ್ರೆಸ್‌ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಎಲ್ಲೆಡೆ ಅಭಿಮಾನಿಗಳು ಡಿಕೆಶಿ ಭಾವಚಿತ್ರ ಹಿಡಿದು, ಸಂಭ್ರಮಿಸಿ, ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಎಲ್ಲೆಡೆ ಡಿಕೆಶಿಗೆ ಶುಭ ಕೋರುವ ಬ್ಯಾನರ್ ಗಳು ರಾರಾಜಿಸಿದವು.

ಡಿ.ಕೆ.ಶಿವಕುಮಾರ್ ಹುಟ್ಟೂರಾದ ದೊಡ್ಡಾಲಹಳ್ಳಿ ಹಾಗೂ ಸ್ವಕ್ಷೇತ್ರ ಕನಕಪುರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಡಿಕೆಶಿ ಮನೆದೇವರಾದ ಕೆಂಕೇರಮ್ಮ ತಾಯಿ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಅಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯಿತು. ಡಿಕೆಶಿಯವರ ಪದಗ್ರಹಣ ಸಮಾರಂಭವನ್ನು ಕಣ್ತುಂಬಿಕೊಳ್ಳಲು ಹಳೆ ಮೈಸೂರು ಭಾಗದಿಂದ ಬೆಂಗಳೂರಿಗೆ ತೆರಳುತ್ತಿದ್ದವರಿಗೆ ಡಿಕೆಶಿ ಆಪ್ತ, ರಾಮನಗರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಇಕ್ಬಾಲ್ ಹುಸೇನ್ ಅವರು ಬೆಂಗಳೂರು-ಮೈಸೂರು ಹೆದ್ದಾರಿಯ ಮಾಯಗಾನಹಳ್ಳಿ‌ ಬಳಿ ಬಿರಿಯಾನಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ಇದೇ ವೇಳೆ, ಡಿಕೆಶಿಗೆ ಒಳಿತಾಗಲೆಂದು ಹಾರೈಸಿ ರಾಮನಗರದ ಪೀರನ್ ಷಾ ವಲಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ರಾಮನಗರದ ಐಜೂರು ವೃತ್ತದಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು, ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಮಾಗಡಿ ರಸ್ತೆಯ ಸುಮ್ಮನಹಳ್ಳಿ ಸರ್ಕಲ್‌ನಲ್ಲಿ ಡಿಕೆಶಿಯ 100 ಅಡಿ ಕಟೌಟ್‌ ನಿಲ್ಲಿಸಿ, ವಿವಿಧ ಹೂವುಗಳಿಂದ ಶೃಂಗರಿಸಲಾಗಿತ್ತು.

ಚಿಕ್ಕಬಳ್ಳಾಪುರ ಹೊರವಲಯದ ವೀರಾಂಜನೇಯ ದೇವಸ್ಥಾನದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಳ್ಳಿ ಎನ್.ರಮೇಶ್ ಅವರ ಅಭಿಮಾನಿ ಬಳಗದಿಂದ ವೀರಾಂಜನೇಯ ದೇವಸ್ಥಾನದಲ್ಲಿ 1008 ತೆಂಗಿನಕಾಯಿಗಳನ್ನು ಒಡೆದು ಹರಕೆ ಸಲ್ಲಿಸಲಾಯಿತು. ತೀರ್ಥಹಳ್ಳಿಯಲ್ಲಿ ಪುರಾಣ ಪ್ರಸಿದ್ದ ರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.


ಶಿವಮೊಗ್ಗದ ಶಿವಪ್ಪ ನಾಯಕ ಪ್ರತಿಮೆ ಬಳಿ ಜನರಿಗೆ ಹಯಗ್ರೀವ ಪ್ರಸಾದ ಹಾಗೂ ಅನ್ನ ಪ್ರಸಾದ ವಿತರಿಸಿ, ಡಿಕೆಶಿಗೆ ಶುಭ ಕೋರಲಾಯಿತು. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ದೇವೇಗೌಡನ ಕೊಪ್ಪಲು ಗೇಟ್ ಬಳಿ ಮಾಂಸದೂಟ ತಯಾರಿಸಿ, ಕಾರ್ಯಕರ್ತರಿಗೆ ವಿತರಿಸಲಾಯಿತು. ಬೆಳಗಾವಿಯಲ್ಲಿ ಕಾಂಗ್ರೆಸ್ ಯುವ ಮುಖಂಡ ಮೃಣಾಲ್‌ ಹೆಬ್ಬಾಳಕರ್ ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಯಿತು. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸಮೀಪದ ಮುಕ್ತಿಮಂದಿರದ ಗಂಗಾಧರ ಅಜ್ಜನ ಗದ್ದುಗೆಗೆ ಕಾಂಗ್ರೆಸ್‌ ಕಾರ್ಯಕರ್ತರು ಪೂಜೆ ಸಲ್ಲಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಇದೇ ವೇಳೆ, ರಾಮನಗರ ಸೇರಿ ರಾಜ್ಯದ ಆಯ್ದ 230 ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಡಿಜಿಟಲ್ ಡಿಸ್‌ಪ್ಲೇ ಪರದೆಗಳ ಮೂಲಕ ಪ್ರಮಾಣ ವಚನ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು.