ದಾಬಸ್‍ಪೇಟೆ: ಡಿಸಿಎಂ ಆಗಿದ್ದ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿರುವ ಸಂದರ್ಭದಲ್ಲಿ ನನ್ನ ಕ್ಷೇತ್ರದಲ್ಲೂ ಸಂಭ್ರಮಾಚರಣೆ ಮಾಡಲು ಸಕಲ ತಯಾರಿಯೂ ನಡೆಸಿದ್ದು ಕ್ಷೇತ್ರಾದ್ಯಂತ 10 ಲಕ್ಷ ಲಾಡು ವಿತರಿಸಲಾಗುವುದು ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.

ಸೋಲೂರು ಹೋಬಳಿ ಗ್ರಾಪಂ ವ್ಯಾಪ್ತಿಯಲ್ಲಿ ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಡಿಕೆಶಿ ಮುಖ್ಯಮಂತ್ರಿ ಆಗುತ್ತಿರುವುದು ನನ್ನ ವಿಧಾನಸಭಾ ಕ್ಷೇತ್ರದ ಪ್ರತಿ ಹಳ್ಳಿಗಳಲ್ಲಿ, ಪ್ರತಿ ಮನೆಯಲ್ಲಿ ಸಂಭ್ರಮದ ವಾತಾವರಣ ಕಂಡು ಬರುತ್ತಿದೆ. ನನಗೂ ಬಹಳ ಸಂತಸವಾಗುತ್ತಿದೆ. ಈ ಸಂತಸವನ್ನು ಹಂಚಿಕೊಳ್ಳುವ ಉದ್ದೇಶದಿಂದ 10 ಲಕ್ಷ ಲಾಡು ಹಂಚಲಿದ್ದು, ಇದಕ್ಕಾಗಿ 250 - 300 ಬಾಣಸಿಗರಿಂದ ತಯಾರಿಸಲಾಗಿದೆ ಎಂದರು.

ಕ್ಷೇತ್ರದ ಮಹಿಳೆಯರನ್ನು ಉತ್ತೇಜಿಸಲು ಕ್ಷೇತ್ರದಾದ್ಯಂತ ರಂಗೋಲಿ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಿ ಅವರಲ್ಲಿರುವ ಕಲೆಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಅದರ ಜೊತೆಗೆ ನೇರವಾಗಿ ಮಹಿಳೆಯರನ್ನು ಭೇಟಿ ಮಾಡಿ ಕಷ್ಟಸುಖಗಳನ್ನು ಆಲಿಸಿ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಈ ಸ್ಪರ್ಧೆ ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದರು.

ಸೋಲೂರು ಹೋಬಳಿಯ ಜನತೆ ನನ್ನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪಕ್ಷ ಭೇದ ಮರೆತು ಸೋಲೂರು ಹೋಬಳಿಯ ಪ್ರತಿ ಗ್ರಾಮದ ಅಭಿವೃದ್ದಿಗೆ ಅನುದಾನ ತಂದು ಅಭಿವೃದ್ದಿಪಡಿಸಲಾಗುತ್ತಿದೆ. ಈಗಾಗಲೇ ಹತ್ತಾರು ಕೋಟಿ ಅನುದಾನ ನೀಡಿದ್ದು, ಮುಂದಿನ ಎರಡು ವರ್ಷಗಳಲ್ಲಿ ಇನ್ನಷ್ಟು ಅನುದಾನ ತಂದು ಅಭಿವೃದ್ದಿಗೆ ವೇಗ ನೀಡಲಾಗುತ್ತದೆ ಎಂದರು.

ಬಹುಮಾನ ವಿತರಣೆ:


ಬಾಣಾವಾಡಿ ಗ್ರಾಪಂ ವ್ಯಾಪ್ತಿಯ ಬಾಣಾವಾಡಿ, ಬಾಣಾವಾಡಿ ಕಾಲೋನಿ, ಶಿರಗನಹಳ್ಳಿ, ಕಕ್ಕೆಪಾಳ್ಯ, ಕಕ್ಕೆಪಾಳ್ಯ ಕಾಲೋನಿ, ಮೂಗನಹಳ್ಳಿ, ಮೂಗನಹಳ್ಳಿ ಕಾಲೋನಿ, ಮಲ್ಲಾಪುರ, ಪಾಲನಹಳ್ಳಿ, ಮೈಲನಹಳ್ಳಿ, ಆಲೂರು, ಮೂಡಲಪಾಳ್ಯ, ಉಡುಕುಂಟೆ, ಗೊಲ್ಲರಹಟ್ಟಿ, ಶಾಂತಪುರ ಗ್ರಾಮಗಳಲ್ಲಿ ರಂಗೋಲಿ ಸ್ಪರ್ದೇ ವೀಕ್ಷಿಸಿ ಬಹುಮಾನ ವಿತರಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರುದ್ರಶರ್ಮಾ, ಮಾಜಿ ಅಧ್ಯಕ್ಷ ರಂಗಸ್ವಾಮಿ, ಗ್ರಾ.ಪಂ.ಮಾಜಿ ಅಧ್ಯಕ್ಷ ಗಂಗರೇವಣ್ಣ, ಬಾಣವಾಡಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಅರುಣ್ ಕುಮಾರ್, ಮುಖಂಡ ಕೃಷ್ಣಪ್ಪ ಸೇರಿದಂತೆ ನೂರಾರು ಕಾರ್ಯಕರ್ತರು, ಮುಖಂಡರು, ಮಹಿಳೆಯರು ಉಪಸ್ಥಿತರಿದ್ದರು.

ಪೋಟೋ 7 :

ನೆಲಮಂಗಲ ತಾಲೂಕಿನ ಸೋಲೂರು ಹೋಬಳಿಯ ಬಾಣಾವಾಡಿ ಗ್ರಾಮದಲ್ಲಿ ರಂಗೋಲಿ ಸ್ಪರ್ಧೇಗೆ ಶಾಸಕ ಎನ್.ಶ್ರೀನಿವಾಸ್ ಚಾಲನೆ ನೀಡಿದರು.