ಕನ್ನಡಪ್ರಭವಾರ್ತೆ ಸೋಮವಾರಪೇಟೆ

ರಾಜ್ಯದ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಬುಧವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಿದ ಪ್ರಯುಕ್ತ ಇಲ್ಲಿನ ಕಕ್ಕೆಹೊಳೆ ಸಮೀಪದಲ್ಲಿರುವ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸಂಭ್ರಮಾಚರಣೆ ಆಚರಿಸಲಾಯಿತು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿವಕುಮಾರ್‌ ಕಳೆದ ೬ ವರ್ಷಗಳಿಂದ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿದ್ದುಕೊಂಡು, ಕಾಂಗ್ರೆಸ್ ಪಕ್ಷವನ್ನು ಆಡಳಿತಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಂದು ಅವರು ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವುದು ರಾಜ್ಯದಲ್ಲಿ ಆಭಿವೃದ್ಧಿಗೆ ಮತ್ತಷ್ಟು ಬಲ ಬಂದಂತಾಗಿದೆ ಎಂದರು.ಕೊಡಗಿನ ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಸಗೊಂಡು ಅತೀ ಹೆಚ್ಚು ಅನುದಾನವನ್ನು ನೀಡಿ ಜಿಲ್ಲೆಯ ಅಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ. ಅದರಲ್ಲೂ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್‌ಗೌಡ ಅವರು ಹೆಚ್ಚಿನ ಅನುದಾನವನ್ನು ತಂದು ಅಭಿವೃದ್ಧಿ ಕಾಮಗಾರಿಗಳು ನಡೆಯುವಂತೆ ನೋಡಿಕೊಂಡಿದ್ದಾರೆ. ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಪ್ತ ವಲಯದಲ್ಲೂ ಡಾ.ಮಂತರ್‌ಗೌಡ ಗುರುತಿಸಿಕೊಂಡಿದ್ದು ಇನ್ನು ಹೆಚ್ಚಿನ ಅನುದಾನವನ್ನು ತರುವ ನಿರೀಕ್ಷೆಯಿದೆ. ಜಿಲ್ಲೆಯ ಇಬ್ಬರು ಶಾಸಕರನ್ನು ಸಚಿವರನ್ನಾಗಿ ಮಾಡಬೇಕು. ಅದರಲ್ಲೂ ಡಾ. ಮಂತರ್‌ಗೌಡ ಅವರಿಗೆ ಸಚಿವ ಸ್ಥಾನ ದೊರೆತಲ್ಲಿ ಕೊಡಗು ಜಿಲ್ಲೆಯಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯ ಎಂದು ಹೇಳಿದರು. ಪಟ್ಟಣದ ಖಾಸಗಿ ಬಸ್ ನಿಲ್ದಾಣ ಮತ್ತು ಬ್ಲಾಕ್ ಕಾಂಗ್ರೆಸ್ ಕಚೇರಿ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಮಾಣ ವಚನ ಕಾರ್ಯಕ್ರಮವನ್ನು ವೀಕ್ಷಿಸಲು ಎರಡು ಎಲ್‌ಇಡಿ ವ್ಯವಸ್ಥೆ ಮಾಡಲಾಗಿತ್ತು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜೈಕಾರದೊಂದಿಗೆ ಮೆರವಣಿಗೆ ನಡೆಸಿ, ಕಾರ್ಯಕ್ರಮದ ನಂತರ ಸಿಹಿ ಹಂಚಲಾಯಿತು.ಪಕ್ಷದ ಜಿಲ್ಲಾ ಉಪಾಧ್ಯಕ್ಷ ಕೆ.ಎಂ. ಲೋಕೇಶ್, ತಾಲೂಕು ಘಟಕದ ಬಸವರಾಜು, ಕಾರ್ಯದರ್ಶಿ ಕೆ.ಜೆ. ಸುನಿಲ್, ಖಜಾಂಚಿ ಸಿ.ಈ. ಚೇತನ್, ಜಿಲ್ಲಾ ಕಾರ್ಯದರ್ಶಿ ಜನಾರ್ದನ್, ಪರಿಶಿಷ್ಟ ಜಾತಿ ಘಟಕದ ಜಿಲ್ಲಾ ಅಧ್ಯಕ್ಷ ಬಿ.ಈ. ಜಯೇಂದ್ರ, ಎಚ್.ಸಿ. ನಾಗೇಶ್, ಶೀಲಾ ಡಿಸೋಜ, ಮಂಜುಳ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು.