ಈ ಹಿಂದೆ ನಾನು ಕೃಷಿ ಸಚಿವನಾಗಿದ್ದ ಅವಧಿಯಲ್ಲಿಯೂ ಬರಗಾಲ ಎದುರಿಸಿದ್ದೇವೆ. ಈಗ ತೀವ್ರ ಬರಗಾಲವನ್ನು ಎದುರಾಗಿದೆ. ಜನ ಜಾನುವಾರುಗಳಿಗೆ ಕುಡಿಯಲು ಮತ್ತು ದನಕರುಗಳ ಮೇವಿಗೆ ಅನುಕೂಲವಾಗುವಂತೆ ಗೌರಿ ಗಣೇಶ ಹಬ್ಬದ ಸಮಯದಲ್ಲಾದರೂ ಉತ್ತಮ ಮಳೆಯಾಗಲೆಂದು ಎಲ್ಲರೂ ದೇವರಲ್ಲಿ ಪ್ರಾರ್ಥಿಸಬೇಕಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ಡಿ.ಕೆ.ಶಿವಕುಮಾರ್ ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭವಿಷ್ಯ ನುಡಿದರು.

ತಾಲೂಕಿನ ಕನ್ನಾಘಟ್ಟ ಗ್ರಾಮದಲ್ಲಿ ಉದ್ಯಮಿ ಹಾಗೂ ಸಮಾಜ ಸೇವಕ (ವೆಂಕಟರಮಣೇಗೌಡ) ಸ್ಟಾರ್ ಚಂದ್ರು ಅವರ ಕುಟುಂಬಸ್ಥರು ನೂತನವಾಗಿ ನಿರ್ಮಿಸಿರುವ ಶ್ರೀಮಹಾಗಣಪತಿ ಪ್ರತಿಷ್ಠಾಪನೆ ಮತ್ತು ನೂತನ ದೇವಾಲಯ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಎದುರಾಗಿರುವ ತೀವ್ರ ಬರ ಪರಿಸ್ಥಿತಿ ಎದುರಿಸಲು ಸರ್ಕಾರ ಸಿದ್ಧವಾಗಿದೆ ಎಂದರು.

ಕಳೆದ 2023ರಲ್ಲಿ ಕೇಂದ್ರದಿಂದ ರಾಜ್ಯದ ರೈತರಿಗೆ ಬರಬೇಕಿದ್ದ ಅನುದಾನವನ್ನು ನಾವು ಸುಪ್ರೀಂ ಕೋರ್ಟ್ ಮೂಲಕ ತಂದು ರೈತರನ್ನು ರಕ್ಷಣೆ ಮಾಡಿದ್ದೇವೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಹಿಂದೆ ನಾನು ಕೃಷಿ ಸಚಿವನಾಗಿದ್ದ ಅವಧಿಯಲ್ಲಿಯೂ ಬರಗಾಲ ಎದುರಿಸಿದ್ದೇವೆ. ಈಗ ತೀವ್ರ ಬರಗಾಲವನ್ನು ಎದುರಾಗಿದೆ. ಜನ ಜಾನುವಾರುಗಳಿಗೆ ಕುಡಿಯಲು ಮತ್ತು ದನಕರುಗಳ ಮೇವಿಗೆ ಅನುಕೂಲವಾಗುವಂತೆ ಗೌರಿ ಗಣೇಶ ಹಬ್ಬದ ಸಮಯದಲ್ಲಾದರೂ ಉತ್ತಮ ಮಳೆಯಾಗಲೆಂದು ಎಲ್ಲರೂ ದೇವರಲ್ಲಿ ಪ್ರಾರ್ಥಿಸಬೇಕಿದೆ ಎಂದರು.

ಸಿದ್ದರಾಮಯ್ಯ ಅವರ ಸಹಕಾರದಿಂದ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿದ್ದಾರೆ. 2028ರಲ್ಲೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳ ಪರಿಶ್ರಮದಿಂದಾಗಿ ಆದಿಚುಂಚನಗಿರಿ ಕ್ಷೇತ್ರವು ಬಹಳ ಎತ್ತರಕ್ಕೆ ಬೆಳೆದು ನಿಂತಿದೆ. ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳು ಶ್ರೀಮಠವನ್ನು ಇನ್ನೂ ಅತ್ಯುತ್ತಮವಾಗಿ ಮುನ್ನಡೆಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಶಾಸಕ ಶರತ್‌ ಬಚ್ಚೇಗೌಡ ಮಾತನಾಡಿ, ಹುಟ್ಟು ಸಾವಿನ ನಡುವೆ ನಾವು ಮಾಡುವ ಸಾಧನೆ ಉಳಿಸುವ ಸಾಕ್ಷಿಗುಡ್ಡೆಗಳನ್ನು ಬಿಟ್ಟು ಹೋಗುತ್ತೇವೋ ಅದರ ಆಧಾರದ ಮೇಲೆ ಜನರು ಸ್ಮರಿಸುತ್ತಾರೆ. ಅದರಂತೆ ಗ್ರಂಥಾಲಯ ಮತ್ತು ದೇವಸ್ಥಾನವನ್ನು ಒಂದೇ ಕಡೆ ನಿರ್ಮಿಸುವ ಮೂಲಕ ಕನ್ನಾಘಟ್ಟ ಗ್ರಾಮದ ಹೊನ್ನೇಗೌಡರ ಕುಟುಂಬದವರು ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದರು.

ಗೌರಿಬಿದನೂರು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಮಾತನಾಡಿ, ವ್ಯವಸಾಯ ವ್ಯಾಪಾರದಲ್ಲಿ ನಿರತರಾಗಿರುವ ಹಳ್ಳಿಯ ಜನರು ಸಂಜೆ ವೇಳೆ ಕೆಲಹೊತ್ತು ದೇವಸ್ಥಾನಕ್ಕೆ ಬಂದು ಭಕ್ತಿಯಿಂದ ಪ್ರಾರ್ಥಿಸಿದರೆ ಶಾಂತಿ ನೆಮ್ಮದಿ ಸಿಗುತ್ತದೆಂಬ ಕಾರಣಕ್ಕೆ ಗ್ರಾಮದಲ್ಲಿ ದೇವಾಲಯ ನಿರ್ಮಿಸಲಾಗಿದೆ ಎಂದರು.

ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥಸ್ವಾಮೀಜಿ ಅವರು ಆಶೀರ್ವಚನ ನೀಡಿದರು. ಸಾರಿಗೆ ಸಚಿವ ಭೈರತಿ ಸುರೇಶ್, ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ಜಿಲ್ಲೆಯ ಶಾಸಕರಾದ ಕೆ.ಎಂ.ಉದಯ್, ದರ್ಶನ್ ಪುಟ್ಟಣ್ಣಯ್ಯ, ಎಂಎಲ್ಸಿ ದಿನೇಶ್ ಗೂಳಿಗೌಡ, ಉದ್ಯಮಿ ಸ್ಟಾರ್ ಚಂದ್ರು, ಕನ್ನಾಘಟ್ಟ ವೆಂಕಟೇಶ್, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಪ್ರಕಾಶ್, ಅಪ್ಪಾಜಿಗೌಡ ಸೇರಿದಂತೆ ಹಲವರು ಇದ್ದರು.