ಮಹಿಳೆಯರು ಪೊರಕೆ ಹಿಡಿದು ಹೊಡೆಯುವ ಪರಿಸ್ಥಿತಿ ನಿರ್ಮಾಣವಾಗಲು ಡಿ.ಕೆ. ಶಿವಕುಮಾರ್ ಅವರ ರೈತ ವಿರೋಧಿ ಆಡಳಿತ ನೀತಿಯೇ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಪಾದಿಸಿದರು.

ಬಳ್ಳಾರಿ: ಮಹಿಳೆಯರು ಪೊರಕೆ ಹಿಡಿದು ಹೊಡೆಯುವ ಪರಿಸ್ಥಿತಿ ನಿರ್ಮಾಣವಾಗಲು ಡಿ.ಕೆ. ಶಿವಕುಮಾರ್ ಅವರ ರೈತ ವಿರೋಧಿ ಆಡಳಿತ ನೀತಿಯೇ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಪಾದಿಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಬಡವರ, ರೈತ ವಿರೋಧಿ ಸರಕಾರ ಆಡಳಿತ ನಡೆಯುತ್ತಿದೆ. ಸಿಎಂ ಡಿಕೆಶಿ ಅವರಿಗೆ ರಿಯಲ್‌ ಎಸ್ಟೇಟ್‌ ಆದ್ಯತೆಯಾಗಿದೆ ಹೊರತು ರೈತರಲ್ಲ. ಮುಖ್ಯಮಂತ್ರಿಗಳು ರೈತರ ಜೊತೆ ಚೆಲ್ಲಾಟ ಆಡುವುದನ್ನು ನಿಲ್ಲಿಸಬೇಕು. ಬಿಡದಿ ಟೌನ್‌ಶಿಪ್‌ ಬಗ್ಗೆ ಹೋರಾಟ ಮಾಡುತ್ತಿರುವ ರೈತರು ಹಾಗೂ ಸಂಘಟನೆ ಮೇಲೆ ದಾಖಲು ಮಾಡಿರುವ ಪ್ರಕರಣಗಳನ್ನು ತಕ್ಷಣವೇ ಹಿಂಪಡೆಯಬೇಕು. ರೈತರ ಮೇಲೆ ಸರಕಾರ ಮಾಡುತ್ತಿರುವ ದಬ್ಬಾಳಿಕೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಟೌನ್‌ ಶಿಪ್‌ ಕೈಬಿಡಬೇಕು ಎಂದು ಆಗ್ರಹಿಸಿ ಜು.17ರಂದು ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಬಿಜೆಪಿಯ ಎಲ್ಲ ಶಾಸಕರು, ಸಂಸದರು, ಮಾಜಿ ಸಂಸದ, ಶಾಸಕರು ಸೇರಿ ಧರಣಿ ಮಾಡಲಾಗುವುದು. ಬಿಡದಿ ಸೇರಿದಂತೆ ರೈತ ವಿರೋಧಿ ನಿಲುವಿನ ವಿರುದ್ಧ, ಅಧಿವೇಶನದಲ್ಲೂ ಬಿಜೆಪಿ ಜೆಡಿಎಸ್‌ನಿಂದ ಜಂಟಿಯಾಗಿ ಹೋರಾಟ ನಡೆಸಲಾಗುವುದು. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆಯೂ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.

ಡಿಕೆಶಿ ಅವರು ಸಿಎಂ ಆಗಿ ಆಯ್ಕೆಯಾದ 24 ಗಂಟೆಗಳಲ್ಲಿ ಬಿಡದಿ ಟೌನ್‌ಶಿಪ್‌ ಬಗ್ಗೆ ಆದೇಶ ಮಾಡಿದ್ದಾರೆ. ರೈತರು ಹಾಗೂ ಕೃಷಿ ಕಾರ್ಮಿಕರ ಬಗ್ಗೆ ಈ ಸರ್ಕಾರಕ್ಕೆ ಯಾವುದೇ ಕಾಳಜಿಯಿಲ್ಲ ಎಂಬುದಕ್ಕೆ ಇದುವೇ ಸಾಕ್ಷಿ. ಈ ಸರ್ಕಾರಕ್ಕೆ ದುಡಿವ ಜನರಿಗಿಂತ ತಮ್ಮ ಹಿತಾಸಕ್ತಿಯೇ ಮುಖ್ಯವಾಗಿದೆ. ಡಿ.ಕೆ.ಶಿವಕುಮಾರ್‌ ಅವರು ನೀರಾವರಿ ಸಚಿವರಾಗಿದ್ದ ವೇಳೆ ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್‌ ದುರಸ್ತಿ ಮಾಡಲು 24 ತಿಂಗಳು ಬೇಕಾಯಿತು. ಇದರಿಂದಾಗಿ ರೈತರು ಎರಡನೇ ಬೆಳೆಯಿಂದ ವಂಚಿತರಾಗಿದ್ದರು. ಹೀಗೆ ಸಾಕಷ್ಟು ರೈತ ವಿರೋಧಿ ನೀತಿಗಳಿವೆ.

ರಾಜ್ಯ ಸರ್ಕಾರ ಜನವಿರೋಧಿಯಾಗಿ ವರ್ತಿಸಿದರೆ ಕೇಳುವುದಿಲ್ಲ. ರೈತರ ಹಿತಾಸಕ್ತಿಗೆ ಧಕ್ಕೆಯಾಗಲು ನಾವು ಬಿಡುವುದಿಲ್ಲ. ಹೋರಾಟದ ಮೂಲಕ ಸೂಕ್ತ ಉತ್ತರ ನೀಡುತ್ತೇವೆ ಎಂದು ತಿಳಿಸಿದರು.

ಕೃಷಿ ಸಚಿವರು ಯಾರು?

ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ಹೀಗಾಗಿ, ಸಿಎಂ ಡಿಕೆಶಿ ಅವರು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು, ಕೇಂದ್ರ ಸರಕಾರದ ಅಧಿಕಾರಿಗಳ ತಂಡವನ್ನು ರಾಜ್ಯಕ್ಕೆ ಕಳಿಸಬೇಕು ಎಂದು ಉಲ್ಲೇಖ ಮಾಡಿದ್ದಾರೆ. ಕರ್ನಾಟಕದಲ್ಲಿ ಏನಾದರೂ ರಾಷ್ಟ್ರಪತಿ ಆಡಳಿತ ಹೇರಿದ್ದಾರಾ ಎನ್ನುವ ಅನುಮಾನ ಮೂಡಿಸಿದೆ. ಇಂಥ ಪರಿಸ್ಥಿತಿಯಲ್ಲಿ ಸಿಎಂ ಹಾಗೂ ಸಚಿವರು ಜಿಲ್ಲಾ ಪ್ರವಾಸ ಮಾಡುತ್ತಿಲ್ಲ. ರಾಜ್ಯದಲ್ಲಿ ಕೃಷಿ ಸಚಿವರಿಲ್ಲದಿರುವುದು ಇದಕ್ಕಿಂತ ದುರ್ದೈವ ಇನ್ನೊಂದಿಲ್ಲ. ರೈತರ ಸಂಕಷ್ಟಕ್ಕೆ ಸ್ಪಂದಿಸುವ ವ್ಯವಧಾನ ಕಾಂಗ್ರೆಸ್‌ ಸರಕಾರಕ್ಕಿಲ್ಲ. ರೈತರ ಜೀವದ ಜೊತೆ ರಾಜ್ಯ ಸರಕಾರ ಚೆಲ್ಲಾಟ ಆಡೋದು ಬಿಟ್ಟು, ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕು. ಬರಗಾಲ ಹಿನ್ನೆಲೆಯಲ್ಲಿ ಎಕರೆಗೆ ₹50 ಸಾವಿರ ಪರಿಹಾರ ಕೊಡಬೇಕು. ರಾಜ್ಯದಲ್ಲಿ ಕೃಷಿ ಸಚಿವರು ಯಾರು ಎಂದು ಕೂಡಲೇ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ ಬಿ.ವೈ. ವಿಜಯೇಂದ್ರ ಅವರು, ಕಾವೇರಿ ಕೊಳ್ಳದ ಭಾಗದ ರೈತರ ದನ ಕರುಗಳಿಗೂ ಕುಡಿಯಲು ನೀರಿಲ್ಲ. ಆದರೂ ಈ ಸರಕಾರ ತಮಿಳುನಾಡಿಗೆ ನೀರು ಬಿಡಲು ಮುಂದಾಗಿದ್ದು, ರೈತರ ರಕ್ಷಣೆಯನ್ನು ಈ ಸರಕಾರ ಮಾಡಬೇಕು ಎಂದು ಆಗ್ರಹಿಸಿದರು.

ಕ್ಯಾಬಿನೆಟ್‌ ವಿಸ್ತರಣೆ ಚರ್ಚೆ ಶುರುವಾಗಿರುವುದರಿಂದ ಶಾಸಕರ ದಂಡು ದೆಹಲಿ ಕಡೆ ಪ್ರಯಾಣ ಬೆಳೆಸುತ್ತಿದೆ. ಆದರೆ, ರಾಹುಲ್‌ ಗಾಂಧಿ ಇನ್ನೂ ಅಪಾಯಿಟ್ಮೆಂಟ್‌ ಕೊಟ್ಟಿಲ್ಲ. ಮೂರು ದಿನ ಯಾರೂ ಬರಬೇಡಿ ಎಂದು ಹೇಳಿದ್ದಾರೆ. 15-20 ದಿನ ರಾಹುಲ್‌ ಗಾಂಧಿ ಪ್ರವಾಸ ಮಾಡಿ ಸುಸ್ತಾಗಿ ಬಂದಿರುವುದರಿಂದ ಇನ್ನೂ ರೆಸ್ವ್‌ ತಗೆದುಕೊಳ್ಳುವವರಿದ್ದಾರೆ ಎಂದು ವ್ಯಂಗ್ಯವಾಡಿದರು.

ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ, ಬಿ. ಶ್ರೀರಾಮುಲು, ಶಾಸಕ ವೈ.ಎಂ. ಸತೀಶ್, ಪಕ್ಷದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ, ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ, ಎಂ.ಎಸ್‌. ಸೋಮಲಿಂಗಪ್ಪ, ಟಿ.ಎಚ್‌. ಸುರೇಶ್‌ ಬಾಬು, ಮಾಜಿ ಸಂಸದ ಸಣ್ಣ ಫಕ್ಕೀರಪ್ಪ, ಪಕ್ಷದ ಮುಖಂಡರಾದ ಲಕ್ಷ್ಮಿ ಅರುಣಾ, ಎಸ್‌. ಗುರುಲಿಂಗನಗೌಡ, ಡಾ. ಮಹಿಪಾಲ್‌, ಡಾ. ಅರುಣಾ ಕಾಮಿನೇನಿ, ರಾಮಲಿಂಗಪ್ಪ ಇತರರಿದ್ದರು.