ಸಾರಾಂಶ
ಜಿಲ್ಲಾ ಮಟ್ಟದ ಕಾರ್ಯಾಗಾರ ಮಾಡುವ ಮೂಲಕ ಫಲಿತಾಂಶ ಸುಧಾರಣೆ ತಂತ್ರ ರೂಪಿಸಿರುವುದು ಉತ್ತಮ ಕಾರ್ಯ
ಕನ್ನಡಪ್ರಭ ವಾರ್ತೆ ಇಳಕಲ್ಲ
ಎಸ್ಎಸ್ಎಲ್‌ಸಿಯಲ್ಲಿ ಮಕ್ಕಳಿಗೆ ಅಚ್ಚುಕಟ್ಟಾಗಿ ಪರೀಕ್ಷೆ ಬರೆಯುವ, ಅಧ್ಯಯನ ಮಾಡುವ ತಂತ್ರಗಳನ್ನು ಶಿಕ್ಷಕರು ತಿಳಿಸಬೇಕು. ವಿದ್ಯಾರ್ಥಿಗಳಿಂದ ಪರೀಕ್ಷೆಗೆ ಪೂರಕವಾಗುವ ರೀತಿಯಲ್ಲಿ ಅಭ್ಯಾಸದ ಕೆಲಸ ಮಾಡಿಸಬೇಕು. ವಿದ್ಯಾರ್ಥಿಗಳು ಪರೀಕ್ಷೆಯನ್ನು ಒತ್ತಡ ಎಂದು ಭಾವಿಸಬಾರದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ವಿವೇಕಾನಂದ ಹೇಳಿದರು.ನಗರದ ಎಸ್.ಆರ್.ಕಂಠಿ ಬಾಲಕಿಯರ ಪ್ರೌಢ ಶಾಲೆಯ ಸಂಭಾಗಣದಲ್ಲಿ ನಡೆದ ಜಿಲ್ಲಾಮಟ್ಟದ ಸಮಾಜ ವಿಜ್ಞಾನ ವಿಷಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪರೀಕ್ಷೆ ಹತ್ತಿರ ಬಂದಾಗ ಜಿಲ್ಲಾ ಮಟ್ಟದ ಕಾರ್ಯಾಗಾರ ಮಾಡುವ ಮೂಲಕ ಫಲಿತಾಂಶ ಸುಧಾರಣೆ ತಂತ್ರ ರೂಪಿಸಿರುವುದು ಉತ್ತಮ ಕಾರ್ಯ. ಮಕ್ಕಳ ಸಮಸ್ಯೆ ತಿಳಿಯುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಈ ವರ್ಷ ಶೇ.೧೦೦ರಷ್ಟು ಫಲಿತಾಂಶ ನಮ್ಮ ಜಿಲ್ಲೆಯದಾಗಬೇಕು. ಇದು ಒತ್ತಡ ಅಲ್ಲ ನಮ್ಮ ಜವಾಬ್ದಾರಿ ಎಂದು ಎಲ್ಲ ಶಿಕ್ಷಕರು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಜ್ಞಾನ ಸಿರಿ, ಸವಿ ಸಿರಿ, ಏಣಿ ಪುಸ್ತಕ ಬಿಡುಗಡೆ ಮಾಡಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಚಾರ್ಯ ಬಿ.ಕೆ.ನಂದನೂರ ಮಾತನಾಡಿ, ಈ ಮೂರು ಪುಸ್ತಕಗಳು ಮಕ್ಕಳ ಕಲಿಕೆಗೆ ಉತ್ತಮವಾಗಿದ್ದು ಇವುಗಳನ್ನು ಬಳಸಿಕೊಂಡು ಉತ್ತಮ ಫಲಿತಾಂಶ ಪಡೆಯಬೇಕು. ಗುಣಾತ್ಮಕ ಶಿಕ್ಷಣ ಪಾಲಕರ ಆಸೆಯಾಗಿದ್ದು ಶಿಕ್ಷಕರು ಜವಾಬ್ದಾರಿಯಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಬೇಕು ಎಂದರು.ಇಲಕಲ್ಲ ವಿಜಯಮಹಾಂತೇಶ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಸದಸ್ಯ ಪ್ರಶಾಂತ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಎಲ್ಲ ಸಮಾಜ ವಿಜ್ಞಾನ ಶಿಕ್ಷಕರು ಒಂದು ಕಡೆ ಒಗ್ಗೂಡಿ ಉತ್ತಮ ಫಲಿತಾಂಶಕ್ಕೆ ಕಾರ್ಯಾಗಾರ ಮಾಡಿರುವುದು ಹೆಮ್ಮೆಯ ಸಂಗತಿ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮೀನ ಕಿಲ್ಲೆದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ವಿಷಯ ಪರಿವೀಕ್ಷಕ ಡಿ.ಎಂ.ಯಾವಗಲ್, ಎಸ್.ಎಸ್.ಹಾಲವರ, ವೈ.ಬಿ.ಸಾಲಿ, ಕ್ಷೇತ್ರ ಸಮನ್ವಯಾಧಿಕಾರಿ ಸದಾಶಿವ ಗುಡಗುಂಟಿ, ತಾಲೂಕು ಸಮಾಜ ವಿಜ್ಞಾನ ವಿಷಯ ನೋಡಲ್ ಅಧಿಕಾರಿ ಎಂ.ಪಿ.ಗೋಟೂರ, ಜಿಲ್ಲಾ ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಜಿ.ತಿಪ್ಪರಡ್ಡಿ, ಎ.ಆರ್.ಹಂಚನಾಳ, ಹುನಗುಂದ-ಇಲಕಲ್ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಂಗಣ್ಣ ಗದ್ದಿ, ಕಾರ್ಯದರ್ಶಿ ಡಿ.ಬಿ.ನಧಾಪ ಇತರರಿದ್ದರು. ಜಿಲ್ಲೆಯ ೩೪೦ಕ್ಕೂ ಅಧಿಕ ಸಮಾಜ ವಿಜ್ಞಾನ ವಿಷಯ ಶಿಕ್ಷಕರು ಭಾಗವಹಿಸಿದರು. ಶಿಕ್ಷಕರಿಗೆ ಸಂಪನ್ಮೂಲ ವ್ಯಕ್ತಿ ಮಹದೇವಪ್ಪ ಕುಂದರಗಿ ನಾಲ್ಕು ಗಂಟೆ ಉತ್ತಮ ಫಲಿತಾಂಶದ ತಂತ್ರಗಳನ್ನು ತಿಳಿಸಿದರು.