ಸಾರಾಂಶ
ಮಾಗಡಿ: ತಿಪ್ಪಗೊಂಡನಹಳ್ಳಿ ಕಲುಷಿತ ನೀರು ಮಂಚನಬೆಲೆ ಜಲಾಶಯಕ್ಕೆ ಸೇರಲು ಬಿಡುವುದಿಲ್ಲ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
ಮಾಗಡಿ: ತಿಪ್ಪಗೊಂಡನಹಳ್ಳಿ ಕಲುಷಿತ ನೀರು ಮಂಚನಬೆಲೆ ಜಲಾಶಯಕ್ಕೆ ಸೇರಲು ಬಿಡುವುದಿಲ್ಲ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
ತಾಲೂಕಿನ ಬೆಳಗುಂಬ ಗ್ರಾಪಂ ವ್ಯಾಪ್ತಿಯಲ್ಲಿ ಶುಕ್ರವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ವೃಷಭಾವತಿ ನೀರನ್ನು ನೆಲಮಂಗಲ ಕೆರೆಗಳಿಗೆ ತುಂಬಿಸುವ ಯೋಜನೆಗೆ ಚಾಲನೆ ಕೊಟ್ಟ ನಂತರ ತಿಪ್ಪನಹಳ್ಳಿ ಜಲಾಶಯಕ್ಕೆ ವೃಷಭಾವತಿ ಕಲುಷಿತ ನೀರು ಸೇರಿ ಮಂಚನಬೆಲೆ ಜಲಾಶಯಕ್ಕೆ ಆಪತ್ತು ಬರಲಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಶಾಸಕ ಬಾಲಕೃಷ್ಣ, ಅನುಪಮ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಈ ವಿಚಾರವಾಗಿ ತಿಳಿಸಿದ್ದೇನೆ. ತಿಪ್ಪಗೊಂಡನಹಳ್ಳಿ ಜಲಾಶಯದ ಹತ್ತಿರ ಕಲುಷಿತ ನೀರು ಬರದಂತೆ ಚೆಕ್ ಡ್ಯಾಂ ನಿರ್ಮಿಸಿ ಮಂಚನಬೆಲೆ ಜಲಾಶಯಕ್ಕೆ ಕಲುಷಿತ ನೀರು ಬರದಂತೆ ಕ್ರಮ ವಹಿಸಲಾಗುವುದು. ಮಂಚನಬೆಲೆ ಜಲಾಶಯಕ್ಕೆ ಮಳೆ ಆಧಾರಿತ ಹಾಗೂ ಸತ್ಯಗಾಲದ ಕಣ್ವ ಜಲಾಶಯದ ನೀರು ಸಾಕಾಗಿದೆ. ತಿಪ್ಪಗೊಂಡನಹಳ್ಳಿ ಕಲುಷಿತ ನೀರು ಬರದಂತೆ ಕ್ರಮ ವಹಿಸಲಾಗುತ್ತದೆ. ಸೋಲೂರು ಹೋಬಳಿಗೆ ಮಂಚನಬೆಲೆ ಜಲಾಶಯದಿಂದ ಬಹುಗ್ರಾಮ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದ್ದು ತಿಪ್ಪಸಂದ್ರ ಮತ್ತು ಕುದೂರು ಹೋಬಳಿಗೆ ಬೇರೆ ಭಾಗದಿಂದ ನೀರು ತರುವ ಕೆಲಸ ಮಾಡಲಾಗುತ್ತದೆ. ಈ ಮೂಲಕ ಮನೆಮನೆಗೂ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ ಎಂದರು.ತಾರತಮ್ಯ ಮಾಡುವುದಿಲ್ಲ:
ಬೆಳಗುಂಬ ಗ್ರಾಪಂ ವ್ಯಾಪ್ತಿಯಲ್ಲಿ ನಾನು ಯಾವುದೇ ತಾರತಮ್ಯ ಮಾಡದೆ ಅಭಿವೃದ್ಧಿ ಮಾಡುತ್ತಿದ್ದೇನೆ. 15 ಕೋಟಿ ವೆಚ್ಚದಲ್ಲಿ ರಸ್ತೆ, ಚರಂಡಿ, ಅಂಗನವಾಡಿ ಕಟ್ಟಡ, ಎಎಂಎಂ ವಸತಿ, ಶುದ್ಧ ನೀರು ಘಟಕ, ಹೈ-ಮಾಸ್ಟ್ ದೀಪ, ಹಿಂದೆ ಗ್ರಾಮಗಳಲ್ಲಿ ಏನೆಲ್ಲ ಭರವಸೆ ನೀಡಿದ್ದೇವೋ ಅದನ್ನೆಲ್ಲ ಬಗೆಹರಿಸುತ್ತಿದ್ದೇನೆ. ಮುಖ್ಯವಾಗಿ ಮೂಲ ಸೌಲಭ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಬಾಲಕೃಷ್ಣ ತಿಳಿಸಿದರು.ಜೆಜೆಎಂ ಅಧಿಕಾರಿಗಳಿಗೆ ತರಾಟೆ:
ಹಿಂದೆ ಜೆಜಿಎಂ( ಜಲಜೀವನ್ ಮಿಷನ್) ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದೆ ಯೋಜನೆಯನ್ನೇ ಹಳ್ಳ ಹಿಡಿಸಿದ್ದಾರೆ ನಾನು ಶಾಸಕರಾದ ಮೇಲೆ ಮತ್ತೆ ಜೆಜಿಎಂ ಅಧಿಕಾರಿಗಳಿಗೆ ಉಳಿಕೆ ಕಾಮಗಾರಿ ಪೂರ್ಣಗೊಳಿಸುತ್ತಿದ್ದಾರೆ. ಅರ್ಧಕ್ಕೆ ನಿಲ್ಲಿಸಿದ್ದ ಓವರ್ ಟ್ಯಾಂಕ್‌ಗಳ ನಿರ್ಮಾಣ ಪೂರ್ಣ ಮಾಡಲಾಗುತ್ತಿದೆ. ಕಾಮಗಾರಿ ಗುಣಮಟ್ಟ ಪರಿಶೀಲಿಸಿ ಕಳಪೆ ಕಂಡುಬಂದರೆ ತೆರವುಗೊಳಿಸಿ ಮತ್ತೆ ಕಟ್ಟಬೇಕೆಂದು ಸೂಚನೆ ನೀಡಿದ್ದೇನೆ. ಎಲ್ಲಿ ಖಾಸಗಿ ಜಾಗವಿದಿಯೋ ಅದನ್ನು ಖರೀದಿಸಿ ಆ ಜಾಗದಲ್ಲಿ ಕಾಮಗಾರಿ ಮುಂದುವರಿಸಬೇಕು. ಜೆಜಿಎಂ ಕಾಮಗಾರಿ ತಾಲೂಕಿನಲ್ಲಿ ಶೇ.50ರಷ್ಟು ಪೂರ್ಣಗೊಂಡಿದೆ. ಕೆಲವೆಡೆ 80ರಷ್ಟು ಪೂರ್ಣಗೊಂಡಿದೆ. ಪ್ರತಿ ಮನೆಗೂ ಕುಡಿಯುವ ನೀರು ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಶರತ್ ಕುಮಾರ್, ವಲಯ ಅರಣ್ಯಾಧಿಕಾರಿ ಚೈತ್ರ, ಮಾಗಡಿ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪೂಜಾರಿ ಪಾಳ್ಯ ಕೃಷ್ಣಮೂರ್ತಿ, ಬೆಳಗುಂಬ ಗ್ರಾಪಂ ಅಧ್ಯಕ್ಷೆ ಚಂದ್ರಕಲಾ, ಸದಸ್ಯರಾದ ತಿರುಮಲೆ ಭೈರಪ್ಪ, ಕೋಟಪ್ಪ, ವಿಶ್ವನಾಥ್, ಚಿಕ್ಕಣ್ಣ, ಶಿಕ್ಷಕ ಗುಣಶೇಖರ್, ತಾಪಂ ಮಾಜಿ ಉಪಾಧ್ಯಕ್ಷ ನಾಗರಾಜು, ಆರ್‌ಐ ಮಧು ಇತರರಿದ್ದರು.
(ಫೋಟೋ ಕ್ಯಾಪ್ಷನ್)ಮಾಗಡಿ ತಾಲೂಕಿನ ಬೆಳಗುಂಬದಲ್ಲಿ ಆರೋಗ್ಯ ಉಪ ಕೇಂದ್ರದ ನೂತನ ಕಟ್ಟಡವನ್ನು ಶಾಸಕ ಬಾಲಕೃಷ್ಣ ಉದ್ಘಾಟಿಸಿದರು. ತಹಸೀಲ್ದಾರ್ ಶರತ್ ಕುಮಾರ್, ವಲಯ ಅರಣ್ಯಾಧಿಕಾರಿ ಚೈತ್ರ, ಪೂಜಾರಿ ಪಾಳ್ಯ ಕೃಷ್ಣಮೂರ್ತಿ, ಗ್ರಾಪಂ ಅಧ್ಯಕ್ಷೆ ಚಂದ್ರಕಲಾ ಇತರರಿದ್ದರು.