ಸಾರಾಂಶ
ವಿಠಲಾಪೂರದಲ್ಲಿ ನಡೆದ ಶಾಂತಿಸಭೆ
ಕನ್ನಡಪ್ರಭ ವಾರ್ತೆ ಕನಕಗಿರಿಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ವಿಠಲಾಪೂರದ ನಿವಾಸಿ, ದಲಿತ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ ಹಾಗೂ ಪೊಲೀಸ್ ಅಧಿಕಾರಿಗಳು ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಶಾಂತಿಸಭೆ ನಡೆಸಿದರು.
ಸಭೆಯನ್ನು ಉದ್ದೇಶಿಸಿ ಗಂಗಾವತಿ ತಹಸೀಲ್ದಾರ ನಾಗರಾಜ ಮಾತನಾಡಿ, ಗ್ರಾಮದಲ್ಲಿ ದಲಿತ ಮಹಿಳೆಯ ಕೊಲೆ ಪ್ರಕರಣ ನಡೆದಿರುವುದು ವಿಷಾದನೀಯ. ಸಮಾಜದಲ್ಲಿ ಈ ರೀತಿಯ ಘಟನೆಗಳು ಎಲ್ಲಿಯೂ ನಡೆಯಬಾರದು. ಎಲ್ಲರೂ ಸಹೋದರತ್ವ, ಸಹಬಾಳ್ವೆಯಿಂದ ಜೀವನ ನಡೆಸಬೇಕು. ಗ್ರಾಮದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸಬಾರದು. ಕಾನೂನು ಬಾಹಿರವಾಗಿ ನಡೆದುಕೊಂಡರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಸಮುದಾಯದ ಜಾಗೃತಿಗೆ ಹಲವು ಕಾರ್ಯಕ್ರಮ ನಡೆಸಲಾಗುವುದು.ಅಲ್ಲದೇ ಪ್ರಕರಣದಲ್ಲಿ ಮೃತಳಾದ ದಲಿತ ಮಹಿಳೆಗೆ ಸರ್ಕಾರದಿಂದ ಪರಿಹಾರಕ್ಕೆ ಮೇಲಾಧಿಕಾರಿಗಳ ಜತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.
ನಂತರ ಡಿವೈಎಸ್‌ಪಿ ಸಿದ್ದಲಿಂಗಪ್ಪಗೌಡ ಮಾತನಾಡಿ, ದಲಿತ ಮಹಿಳೆ ಕೊಲೆ ಪ್ರಕರಣವನ್ನು ಬೇಧಿಸಿ ಪೊಲೀಸ್ ಇಲಾಖೆ ಆರೋಪಿಗಳ ಪತ್ತೆಗೆ ಮುಂದಾಗಿದೆ. ಪ್ರಕರಣದಲ್ಲಿ ಯಾರೇ ಭಾಗಿಯಾಗಿರಲಿ ಅವರನ್ನು ಬಿಡುವ ಪ್ರಶ್ನೆ ಇಲ್ಲ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಗ್ರಾಮದಲ್ಲಿ ಎಲ್ಲರೂ ಸೌಹಾರ್ದಯುತವಾಗಿ ಜೀವನ ನಡೆಸಬೇಕು. ಯಾರೂ ಕಾನೂನು ಮೀರಬಾರದು ಎಂದು ಮನವಿ ಮಾಡಿದರು.ಸ್ಥಳೀಯ ಠಾಣಾಧಿಕಾರಿ ಎಂ.ಡಿ. ಪೈಜುಲ್ಲಾ, ಪೇದೆ ಬೈಲಪ್ಪ, ಗ್ರಾಮಸ್ಥರು ಇದ್ದರು.
ಗಣೇಶೋತ್ಸವ ಹಿನ್ನೆಲೆ ಸಾವಿರಾರು ಜನರಿಗೆ ಅನ್ನಸಂತರ್ಪಣೆ:ಕನಕಗಿರಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಸಮಿತಿಗಳಿಂದ ನಡೆದ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು.
ಇಲ್ಲಿನ ಹೇಮರೆಡ್ಡಿ ಮಲ್ಲಮ್ಮ, ಕಿತ್ತೂರು ರಾಣಿ ಚೆನ್ನಮ್ಮ, ಡಾ.ಬಾಬು ಜಗಜೀವನರಾಮ್ ಹಾಗೂ ಅಂಬಿಗರ ಚೌಡಯ್ಯ ಗಜಾನನ ಸಮಿತಿಗಳಿಂದ ಸಜ್ಜಕ, ಕೇಸರಿಬಾತ್, ಅನ್ನಸಾಂಬಾರ್, ಪಲಾವ್, ಸೊಂಗಟಿ, ಸಾರು, ಹುಗ್ಗಿ, ಮಜ್ಜಿಗಿಯನ್ನು ತಯಾರಿಸಿ ಭಕ್ತರಿಗೆ ಉಣಬಡಿಸಿದರು.ಕಳೆದ ವರ್ಷಕ್ಕಿಂತ ಈ ಬಾರಿ ಗಣಪತಿ ಪ್ರತಿಷ್ಠಾಪನೆಗೊಂಡಿರುವ ಓಣಿ ಹಾಗೂ ವಾರ್ಡ್‌ಳಲ್ಲಿನ ಮನೆ-ಮನೆಗಳಲ್ಲಿಯೂ ಹಬ್ಬದ ಸಂಭ್ರಮ ಮನೆ ಮಾಡಿದೆ. ಭಕ್ತರು ವಿವಿಧ ರೂಪದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆಯೋಜಕರು ನಗರದ ಗಲ್ಲಿ-ಗಲಿಯಲ್ಲಿಯೂ ಅನ್ನಸಂತರ್ಪಣೆ ಹಮ್ಮಿಕೊಳ್ಳುವ ಮೂಲಕ ಭಕ್ತರಿಗೆ ಪ್ರಸಾದ ವಿತರಿಸುತ್ತಿದ್ದಾರೆ.ಈ ನಡುವೆ ರಂಗೋಲಿ ಸ್ಪರ್ಧೆ, ಕ್ರೀಡಾಕೂಟ, ರಸಪ್ರಶ್ನೆ ಕಾರ್ಯಕ್ರಮ, ಭಜನೆ ಸೇರಿದಂತೆ ನಾನಾ ಕಾರ್ಯಕ್ರಮಗಳ ಮೂಲಕ ಆಯೋಜಕರು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಪ್ರತಿಭೆಗಳನ್ನು ಗುರುತಿಸುತ್ತಿದ್ದಾರೆ.ಒಟ್ಟಾರೆ ಈ ಬಾರಿಯ ಗಣೇಶೋತ್ಸವದ ಸಂಭ್ರಮ ಹಾಗೂ ಹಬ್ಬದ ಮಹತ್ವ ಪಟ್ಟಣಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಸದ್ದು ಮಾಡಿದೆ. ಇನ್ನೂ ಬಹುತೇಕ ಹಳ್ಳಿಗಳಲ್ಲಿ ಜಾತಿ, ಬೇಧ ಮರೆತು ಗಣಪತಿ ಹಬ್ಬ ಆಚರಿಸಲಾಗುತ್ತಿದೆ. ಸಮೀಪದ ತಿಪ್ಪನಾಳ ಗ್ರಾಮದಲ್ಲಿ ಶಾಲಾ ಮಕ್ಕಳಿಗಾಗಿ ದಿನಕ್ಕೊಂದು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದರಿಂದ ಐದು ದಿನಗಳ ಕಾಲ ಒಗ್ಗಟ್ಟಿನಿಂದ ಹಬ್ಬ ಆಚರಿಸಲು ಮುಂದಾಗಿದ್ದು, ಗ್ರಾಮಸ್ಥರಲ್ಲಿ ಸಂತಸ ಮೂಡಿದೆ.