ಡಾ.ಪ್ರಭಾ ಗೆಲುವಿನ ಬಗ್ಗೆ ಅನುಮಾನ ಬೇಡ: ಸಚಿವ ಮಲ್ಲಿಕಾರ್ಜುನ

| Published : Mar 27 2024, 01:05 AM IST

ಸಾರಾಂಶ

ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಕಾಂಗ್ರೆಸ್ ಪಕ್ಷವು ದಾವಣಗೆರೆ ಲೋಕಸಭಾ ಕ್ಷೇತ್ರ ಗೆಲ್ಲುವುದರಲ್ಲಿ ಯಾವುದೇ ಅನುಮಾನವೂ ಬೇಡ. ಈ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ಯಾವ ರೀತಿ ಹೋರಾಟ ಮಾಡಬೇಕೆಂಬ ಬಗ್ಗೆ ನಾಯಕರೆಲ್ಲಾ ಚರ್ಚಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ದಾವಣಗೆರೆಯಲ್ಲಿ ಹೇಳಿದ್ದಾರೆ.

- ನಮ್ಮ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಯಾವುದೂ ಅಸಾಧ್ಯವಲ್ಲ- ಭಿನ್ನಾಭಿಪ್ರಾಯ, ಗೊಂದಲ, ಗದ್ದಲಗಳನ್ನೆಲ್ಲಾ ಬದಿಗೊತ್ತಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸಿರಿ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಕಾಂಗ್ರೆಸ್ ಪಕ್ಷವು ದಾವಣಗೆರೆ ಲೋಕಸಭಾ ಕ್ಷೇತ್ರ ಗೆಲ್ಲುವುದರಲ್ಲಿ ಯಾವುದೇ ಅನುಮಾನವೂ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.

ನಗರದ ಬಂಟರ ಭವನದಲ್ಲಿ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನಪ ಪರ ಪಕ್ಷದ ಜನಪ್ರತಿನಿಧಿಗಳು, ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಈ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ಯಾವ ರೀತಿ ಹೋರಾಟ ಮಾಡಬೇಕೆಂಬ ಬಗ್ಗೆ ನಾಯಕರೆಲ್ಲಾ ಚರ್ಚಿಸಿದ್ದಾರೆ ಎಂದರು.

ಭಿನ್ನಾಭಿಪ್ರಾಯ, ಗೊಂದಲಗಳಿದ್ದರೆ ಬದಿಗೊತ್ತಿ. ಅತಿ ಹೆಚ್ಚು ಮತಗಳ ಅಂತರದಿಂದ ನಮ್ಮ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ. ಮುಖಂಡರು, ಕಾರ್ಯಕರ್ತರು ಸಮಸ್ಯೆ ಗಮನಕ್ಕೆ ತಂದರೆ ಪರಿಹರಿಸುತ್ತೇವೆ ಎಂದು ತಿಳಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನರ ಪರ ಮಾ.28ರಿಂದ ವಿಧಾನಸಭಾ ಕ್ಷೇತ್ರವಾರು ಪ್ರಚಾರಕ್ಕೆ ಚಾಲನೆ ನೀಡಲು ನಿರ್ಧರಿಸಿದ್ದೇವೆ. ಹಿಂದಿನ ನಮ್ಮ ಸರ್ಕಾರ ಹಾಗೂ ಈಗಿನ ನಮ್ಮ ಸರ್ಕಾರದ ಅಭಿವೃದ್ಧಿ ಮಂತ್ರಗಳು, ಜನಪರ ಯೋಜನೆ, ಕಾರ್ಯಕ್ರಮ, ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಮತ ಕೇಳೋಣ ಎಂದರು.

ಶಾಸಕರೂ ಒಂದೇ. ಎಲ್ಲರೂ ಒಂದೇ ಕುಟುಂಬವೆಂದು, ಕೆಲಸ ಮಾಡಿದಾಗ ಮಾತ್ರ ಕಾಂಗ್ರೆಸ್ ಗೆಲುವು ಸಾಧ್ಯ. ನಮ್ಮ ಜನರಿಗೆ ಬೇಕಾಗಿರುವುದು ಅನ್ನ, ಅರಿವು, ಆಶ್ರಯ, ಆರೋಗ್ಯಗಳೇ ಹೊರತು, ಐಷಾರಾಮಿ ಬದುಕಲ್ಲ. ಕಾಂಗ್ರೆಸ್ ಸದಾ ಜನರ ಕಷ್ಟ, ನಷ್ಟಗಳಿಗೆ ಸ್ಪಂದಿಸುತ್ತಾ ಬಂದಿರುವ ಪಕ್ಷವಾಗಿದೆ ಎಂದರು.

ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಸಭೆ ಉದ್ಘಾಟಿಸಿ ಮಾತನಾಡಿ, ನಮ್ಮ ಗ್ಯಾರಂಟಿ ಯೋಜನೆ ಪ್ರತಿ ಮನೆಗೂ ತಲುಪಿದೆ. ಆದರೆ, ಬಿಜೆಪಿಯವರು ಕೇವಲ ನರೇಂದ್ರ ಮೋದಿ ಹೆಸರು ಹೇಳಿಕೊಂಡು, ಅಭಿವೃದ್ಧಿ ಕೈಗೊಳ್ಳದೇ ಜನರಿಗೆ ಮೋಸ ಮಾಡಿದ್ದಾರೆ. ತೆರಿಗೆ ಹಂಚಿಕೆ, ಬರ ಪರಿಹಾರ ಸೇರಿದಂತೆ ಅನೇಕ ವಿಧದಲ್ಲಿ ಕೇಂದ್ರ ಸರ್ಕಾರವು ರಾಜ್ಯವನ್ನು ಕಡೆಗಣಿಸಿದೆ. ಲೋಕಸಭೆ ಚುನಾವಣೆ ನಮಗೆ ಅತ್ಯಂತ ಮಹತ್ವದ್ದಾಗಿದೆ. ಪ್ರಭಾ ಮಲ್ಲಿಕಾರ್ಜುನರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವ ಕೆಲಸ ಆಗಬೇಕು. ಪ್ರಭಾ ಜನರ ಸಮಸ್ಯೆಗೆ ಸ್ಪಂದಿಸುತ್ತಾ ಬಂದಿದ್ದಾರೆ. ಗೆದ್ದ ನಂತರ ಇನ್ನೂ ಹೆಚ್ಚಿನ ಸೇವೆಯನ್ನು ಪಡೆಯಬಹುದು ಎಂದರು.

ಡಾ. ಎಚ್.ಬಿ. ಮಂಜಪ್ಪ ಅಧ್ಯಕ್ಷತೆ ವಹಿಸಿ, ದಾವಣಗೆರೆ ಕ್ಷೇತ್ರದಲ್ಲಿ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನರಿಗೆ 8 ಲಕ್ಷಕ್ಕೂ ಅಧಿಕ ಮತಗಳು ಬೀಳಲಿವೆ. ಕನಿಷ್ಠ 2.5 ಲಕ್ಷ ಮತಗಳಿಗೂ ಅಧಿಕ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ. ನಾವು, ನೀವೆಲ್ಲರೂ ಚುನಾವಣೆ ದಿನದವರೆಗೂ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಹಗಲಿರುಳು ಶ್ರಮಿಸೋಣ ಎಂದು ತಿಳಿಸಿದರು.

ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ, ಕೆಪಿಸಿಸಿ ವಕ್ತಾರ ನಿಖಿತ್ ರಾಜ್‌, ಶಾಸಕರಾದ ಹರಪನಹಳ್ಳಿ ಲತಾ ಮಲ್ಲಿಕಾರ್ಜುನ, ಮಾಯಕೊಂಡದ ಕೆ.ಎಸ್.ಬಸವಂತಪ್ಪ, ಚನ್ನಗಿರಿ ಶಿವಗಂಗಾ ವಿ.ಬಸವರಾಜ, ಮಾಜಿ ಶಾಸಕರಾದ ವಡ್ನಾಳ ರಾಜಣ್ಣ, ಎಸ್.ರಾಮಪ್ಪ, ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ, ಮೇಯರ್ ವಿನಾಯಕ ಪೈಲ್ವಾನ್‌, ಕೆಪಿಸಿಸಿ ವಕ್ತಾರ ಡಿ.ಬಸವರಾಜ, ಪಾಲಿಕೆ ಸದಸ್ಯರಾದ ಜಿ.ಎಸ್.ಮಂಜುನಾಥ ಗಡಿಗುಡಾಳ, ಕೆ.ಚಮನ್ ಸಾಬ್, ಅಬ್ದುಲ್ ಲತೀಫ್, ಎ.ನಾಗರಾಜ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ, ಕೆ.ಪಿ.ಪಾಲಯ್ಯ, ಅರಸೀಕೆರೆ ಕೊಟ್ರೇಶ, ಎಸ್.ಮಲ್ಲಿಕಾರ್ಜುನ ಇತರರು ಇದ್ದರು.

- - - ಬಾಕ್ಸ್‌-1 ಡಾ.ಪ್ರಭಾ ಸ್ಪರ್ಧೆಗೆ ವರಿಷ್ಠರಿಂದ ಒತ್ತಡ: ಎಸ್‌ಎಸ್‌ಎಂ

ದಾವಣಗೆರೆ: ಲೋಕಸಭೆ ಚುನಾವಣೆಗೆ ನಾನು ಟಿಕೆಟ್ ಕೇಳಲು ಹೋಗಿರಲಿಲ್ಲ. ಮುಖ್ಯಮಂತ್ರಿಗಾಗಲೀ, ಕೆಪಿಸಿಸಿ ಅಧ್ಯಕ್ಷರಿಗಾಗಲೀ ಟಿಕೆಟ್ ಕೇಳಿದ್ದಿಲ್ಲ. ಆದರೆ, ಪಕ್ಷದ ವರಿಷ್ಠರ ಒತ್ತಡಕ್ಕೆ ಮಣಿದು ಡಾ.ಪ್ರಭಾ ಮಲ್ಲಿಕಾರ್ಜುನ ಅವರನ್ನು ಚುನಾವಣೆ ನಿಲ್ಲಿಸಬೇಕಾಯಿತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.

ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಎಚ್.ಬಿ.ಮಂಜಪ್ಪ ಸ್ಪರ್ಧಿಸಿದ್ದರು. ಈ ಸಲವೂ ಮಂಜಪ್ಪ ಹೆಸರು ಪ್ರಸ್ತಾಪವಾಗಿತ್ತು. ಅನಂತರ ವಿನಯಕುಮಾರ ಹೆಸರು ಕೇಳಿಬಂದಿದ್ದು, ನಮ್ಮ ಜಿಲ್ಲೆಯವರಲ್ಲ. ನಮ್ಮ ಜಿಲ್ಲೆಯ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಿದರೂ ಗೆಲುವಿಗೆ ಶ್ರಮಿಸುವುದಾಗಿ ಹೇಳಿದ್ದೆವು ಎಂದರು.

ಎಐಸಿಸಿ, ಕೆಪಿಸಿಸಿ ಸಮೀಕ್ಷೆಯಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ ಹೆಸರು ಮುಂಚೂಣಿಯಲ್ಲಿ ಕೇಳಿಬಂದಿತು. ಆಗ ನಾಯಕರು ನಮ್ಮ ಬಳಿ ಈ ವಿಚಾರ ಪ್ರಸ್ತಾಪಿಸಿದಾಗ, ನಾವು ಇನ್ನೂ ಮನೆಯಲ್ಲಿ ನಿರ್ಧಾರ ಮಾಡಿಲ್ಲವೆಂದು, ಮನೆಯಲ್ಲಿ ಚರ್ಚಿಸಲು ಒಂದಿಷ್ಟು ಸಮಯಾವಕಾಶ ಕೇಳಿದ್ದೆವು. ಕಡೆಗೆ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಒತ್ತಡ ಹೇರಿದರು ಎಂದು ತಿಳಿಸಿದರು.

ಸುರ್ಜೇವಾಲಾರಿಂದ ನಾಲ್ಕೈದು ಸಲ ಕರೆ ಬಂದಿತ್ತು. ಅಷ್ಟೂ ಸಲವೂ ಚುನಾವಣೆಗೆ ನಿಲ್ಲುವಂತೆ ಒತ್ತಡ ಹೇರಿದ್ದರು. ಕಳೆದ ಅನೇಕ ಚುನಾವಣೆಯಲ್ಲಿ ನಮ್ಮ ಪರವಾಗಿ ಕೆಲಸ ಮಾಡಿ, ಅನುಭವ ಇರುವ ಡಾ.ಪ್ರಭಾ ಬಗ್ಗೆ ಸಮೀಕ್ಷೆ ಆಧರಿಸಿ, ರಾಜ್ಯ, ರಾಷ್ಟ್ರೀಯ ನಾಯಕರ ಒತ್ತಡಕ್ಕೆ ಮಣಿದು, ಚುನಾವಣೆಗೆ ಒಪ್ಪಿದೆ. ಪಕ್ಷಕ್ಕಾಗಿ ಡಾ.ಪ್ರಭಾ ಸಲ್ಲಿಸಿದ ಸೇವೆ, ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಹೀಗೆ ನಾನಾ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆ ಗುರುತಿಸಿ, ಕಾಂಗ್ರೆಸ್ ಹೈಕಮಾಂಡ್‌ ಟಿಕೆಟ್ ನೀಡಿದೆ. ಈಗ ನಿಮ್ಮೆಲ್ಲರ ಶ್ರಮದಿಂದ ಡಾ.ಪ್ರಭಾ ಮಲ್ಲಿಕಾರ್ಜುನರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

- - - ಬಾಕ್ಸ್‌ -2 ಯಾವುದೇ ವ್ಯಕ್ತಿ, ಪಕ್ಷ ನಿಂದಿಸದೇ, ಮತಯಾಚನೆ: ಡಾ.ಪ್ರಭಾ

ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ಯಾವುದೇ ಭಿನ್ನಾಭಿಪ್ರಾಯ, ಗೊಂದಗಳಿದ್ದರೂ ಅದನ್ನೆಲ್ಲಾ ಬದಿಗೊತ್ತಿ, ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು. ನಗರದ ಬಂಟರ ಭವನದಲ್ಲಿ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಪರ ಪಕ್ಷದ ಜನಪ್ರತಿನಿಧಿಗಳು, ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ 8 ಚುನಾವಣೆ ಯಲ್ಲಿ ಮಾವನವರಾದ ಡಾ.ಶಾಮನೂರು ಶಿವಶಂಕರಪ್ಪ, ತಮ್ಮ ಪತಿ ಎಸ್.ಎಸ್.ಮಲ್ಲಿಕಾರ್ಜುನ್‌ ಪರವಾಗಿ ಕೆಲಸ ಮಾಡಿದ್ದೇನೆ ಎಂದರು. ಚುನಾವಣೆಯಲ್ಲಿ ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ತಾವೇ ಕಾಂಗ್ರೆಸ್ ಅಭ್ಯರ್ಥಿಯೆಂಬುದಾಗಿ ತಿಳಿದು, ಕೆಲಸ ಮಾಡಿದರೆ ನಮ್ಮ ಗೆಲುವು ಕಷ್ಟವೇನಲ್ಲ. ಎಲ್ಲಾ ಭಿನ್ನಾಭಿಪ್ರಾಯ ಬದಿಗೊತ್ತಿ, ಎಲ್ಲರೂ ಚುನಾವಣೆವರೆಗೂ ಕೆಲಸ ಮಾಡಬೇಕು. ಕಾಂಗ್ರೆಸ್ ಪಕ್ಷದ ಗೆಲುವೇ ನಮ್ಮ, ನಿಮ್ಮೆಲ್ಲರ ಗುರಿಯಾಗಬೇಕು ಎಂದು ಹೇಳಿದರು. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಶಾಮನೂರು ಶಿವಶಂಕರಪ್ಪ ಅವರು ₹6 ಕೋಟಿ ವೆಚ್ಚದಲ್ಲಿ ಉಚಿತ ಲಸಿಕೆ ವ್ಯವಸ್ಥೆ ಮಾಡಿದ್ದರು. ಎಸ್ಸೆಸ್ ಕೇರ್ ಟ್ರಸ್ಟ್ ಮೂಲಕ ಪ್ರತಿ ತಿಂಗಳೂ ಉಚಿತ ಡಯಾಲಿಸಿಸ್ ಮಾಡಿಸಲಾಗುತ್ತಿದೆ. ಮಹಿಳೆಯರು, ಯುವತಿಯರು, ಮಕ್ಕಳ ಆರೋಗ್ಯ ತಪಾಸಣೆ, ಔಷಧಿ ವಿತರಣೆ ಕಾರ್ಯ ನಿರಂತರ ಸಾಗುತ್ತಿದೆ ಎಂದು ತಿಳಿಸಿದರು.

ಜನ ಸೇವೆಗೆಂದೇ ಶಾಮನೂರು ಶಿವಶಂಕರಪ್ಪ, ಎಸ್‌.ಎಸ್‌. ಮಲ್ಲಿಕಾರ್ಜುನ ಹಾಗೂ ತಾವು ದಿನದ 24 ಗಂಟೆ ಕೆಲಸ ಮಾಡಲು ಸಿದ್ಧರಿದ್ದೇವೆ. ಈ ಹಿನ್ನೆಲೆ ಎಲ್ಲರೂ ಹಬ್ಬದ ರೀತಿಯಲ್ಲಿ ಸಂಭ್ರಮದಿಂದ ಚುನಾವಣೆಯನ್ನು ಮಾಡೋಣ. ಅಲ್ಲದೇ, ಚುನಾವಣೆ ಸಂದರ್ಭದಲ್ಲಿ ಯಾವುದೇ ಪಕ್ಷವನ್ನಾಗಲೀ, ವ್ಯಕ್ತಿಯನ್ನಾಗಲೀ ನಿಂದಿಸದೇ, ಮತಯಾಚಿಸಲು ನಿರ್ಧರಿಸಿದ್ದೇನೆ. ಹಲವಾರು ಮಠಾಧೀಶರೂ ನನಗೆ ಇದೇ ಸಲಹೆ ನೀಡಿದ್ದಾರೆ ಎಂದು ಕಾರ್ಯಕರ್ತರಿಗೆ ಅಭಿವೃದ್ಧಿ, ಜನಪರ ಕಾರ್ಯ, ಮಾನವೀಯ ಸೇವೆಗಳ ಆದಾರದಲ್ಲಿ ಮತ ಕೇಳುವಂತೆ ಡಾ.ಪ್ರಭಾ ಮಲ್ಲಿಕಾರ್ಜುನ ಸಲಹೆ ನೀಡಿದರು.

- - -

ಕೋಟ್‌

400 ಸೀಟುಗಳ ಗೆದ್ದರೆ ಸಂವಿಧಾನ ಬದಲಾಯಿಸುವುದಾಗಿ ಹೇಳಿದ್ದ ಸಂಸದ ಅನಂತಕುಮಾರ ಹೆಗಡೆಗೆ ಬಿಜೆಪಿ ಟಿಕೆಟ್ ತಪ್ಪಿದೆ. ಹಾಗಾಗಿ, ಸಂವಿಧಾನ ಬದಲಾಯಿಸುವವರು ಮತ್ತು ಸಂವಿಧಾನ ಉಳಿಸಿಕೊಳ್ಳುವವರ ಮಧ್ಯೆ ನಡೆಯುತ್ತಿರುವ ಯುದ್ಧ ಲೋಕಸಭೆ ಚುನಾವಣೆ-2024 ಆಗಿದೆ. ನಮ್ಮೆಲ್ಲರಿಗೂ ಕಾಂಗ್ರೆಸ್ ಪಕ್ಷದ ಗೆಲುವೇ ಗುರಿಯಾಗಬೇಕು

- ನಿಖಿತ್ ರಾಜ್, ಕೆಪಿಸಿಸಿ ವಕ್ತಾರ

- - - -(ಫೋಟೋ ಬರಲಿವೆ)