ಭದ್ರಾ ಮೇಲ್ದಂಡೆ ನಾಲೆಗೆ ನೀರು ಹರಿಸದಿರಿ: ಭಾರತೀಯ ರೈತ ಒಕ್ಕೂಟ

| Published : Jan 16 2025, 12:45 AM IST

ಭದ್ರಾ ಮೇಲ್ದಂಡೆ ನಾಲೆಗೆ ನೀರು ಹರಿಸದಿರಿ: ಭಾರತೀಯ ರೈತ ಒಕ್ಕೂಟ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳು, ಚಿಕ್ಕಮಗಳೂರು, ವಿಜಯ ನಗರ ಜಿಲ್ಲೆಗಳ ಕೆಲ ಭಾಗಗಳ ರೈತರಿಗೆ, ಅಚ್ಚುಕಟ್ಟು ರೈತರಿಗೆ ಹಿತಕಾಯಬೇಕಾದರೆ ಮೊದಲು ಭದ್ರಾ ಮೇಲ್ದಂಡೆ ನಾಲೆಗೆ ಮಧ್ಯಾವಧಿಯಲ್ಲಿ ನೀರು ಹರಿಸುತ್ತಿರುವುದನ್ನು ತಕ್ಷಣ ನಿಲ್ಲಿಸುವಂತೆ ಭಾರತೀಯ ರೈತ ಒಕ್ಕೂಟದ ಭದ್ರಾ ಶಾಖೆ ಅಧ್ಯಕ್ಷ ಶಾಮನೂರು ಎಚ್.ಆರ್. ಲಿಂಗರಾಜ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

- ಭದ್ರಾ ಕಾಡಾ ಎಂಡಿ, ಸಚಿವ, ಸಂಸದ, ಶಾಸಕರು ಈ ಬಗ್ಗೆ ಧ್ವನಿ ಎತ್ತಬೇಕು: ಶಾಮನೂರು ಲಿಂಗರಾಜ ಆಗ್ರಹ

- ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಹರಪನಹಳ್ಳಿ ಅಚ್ಚುಕಟ್ಟು ವ್ಯಾಪ್ತಿ ರೈತರ ಬಲಿ ಕೊಡದಂತೆ ಒತ್ತಾಯ- - - ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳು, ಚಿಕ್ಕಮಗಳೂರು, ವಿಜಯ ನಗರ ಜಿಲ್ಲೆಗಳ ಕೆಲ ಭಾಗಗಳ ರೈತರಿಗೆ, ಅಚ್ಚುಕಟ್ಟು ರೈತರಿಗೆ ಹಿತಕಾಯಬೇಕಾದರೆ ಮೊದಲು ಭದ್ರಾ ಮೇಲ್ದಂಡೆ ನಾಲೆಗೆ ಮಧ್ಯಾವಧಿಯಲ್ಲಿ ನೀರು ಹರಿಸುತ್ತಿರುವುದನ್ನು ತಕ್ಷಣ ನಿಲ್ಲಿಸುವಂತೆ ಭಾರತೀಯ ರೈತ ಒಕ್ಕೂಟದ ಭದ್ರಾ ಶಾಖೆ ಅಧ್ಯಕ್ಷ ಶಾಮನೂರು ಎಚ್.ಆರ್. ಲಿಂಗರಾಜ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಾವಧಿಗೆ ಭದ್ರಾ ಅಣೆಕಟ್ಟೆಯಿಂದ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸುತ್ತಿರುವುದೇ ಸರಿಯಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ನಾಲ್ಕೂ ಜಿಲ್ಲೆಗಳ ಲಕ್ಷಾಂತರ ಎಕರೆಯ ಅಚ್ಚುಕಟ್ಟು ರೈತರು, ಭದ್ರಾ ನೀರಿನ ಅವಲಂಬಿತರು ಬೀದಿಪಾಲಾಗುವ ಪರಿಸ್ಥಿತಿ ಬರಲಿದೆ. ಅದಕ್ಕೆ ಸರ್ಕಾರ ಅವಕಾಶ ಕೊಡಬಾರದು ಎಂದರು.

7 ದಶಕಗಳ ಹಿಂದೆ ದಾವಣಗೆರೆ, ಹರಿಹರ, ಶಿವಮೊಗ್ಗ, ಭದ್ರಾವತಿ, ಹರಪನಹಳ್ಳಿ ಹಾಗೂ ಚಿಕ್ಕಮಗಳೂರು ಭಾಗದ ರೈತರಿಗೆ ಅನುಕೂಲ ಮಾಡಿಕೊಡಲು, 2.65 ಲಕ್ಷ ಎಕರೆ ಭೂಮಿಗೆ ನೀರುಣಿಸಲು ವಿಶ್ವ ಬ್ಯಾಂಕ್‌ನಿಂದ ಸಾಲ ಪಡೆದು, ಭದ್ರಾ ಅಣೆಕಟ್ಟೆ ನಿರ್ಮಾಣ ಮಾಡಲಾಗಿದೆ. ಇದರ ಮೂಲ ಉದ್ದೇಶಕ್ಕೆ ಧಕ್ಕೆ ತರುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಭದ್ರಾ ಮೇಲ್ದಂಡೆಗೆ ದಾವಣಗೆರೆ, ಹೊರನಾಡು, ಚಿಕ್ಕಮಗಳೂರು ಭಾಗದ ರೈತರು ತೀವ್ರ ವಿರೋಧ ವ್ಯಕ್ತಪಡಿಸಿ, ಪ್ರತಿಭಟಿಸಿದ್ದರು ಎಂದು ತಿಳಿಸಿದರು.

ಬಿಜೆಪಿ-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಸಿಎಂ ಎಚ್.ಡಿ.ಕುಮಾರಸ್ವಾಮಿ, ಡಿಸಿಎಂ ಬಿ.ಎಸ್. ಯಡಿಯೂರಪ್ಪ, ಅಂದಿನ ನೀರಾವರಿ ಸಚಿವ ಕೆ.ಎಸ್.ಈಶ್ವರಪ್ಪ ತುಂಗಾ ತಿರುವು ಅಂತಾ 12.5 ಟಿಎಂಸಿ ನೀರನ್ನು ತುಂಗಾದಿಂದ ಮೇಲ್ದಂಡೆ ಹರಿಸುವುದಾಗಿ ಜನರಿಗೆ ಯಾಮಾರಿಸಿದ್ದರು. ಆದರೆ, ತುಂಗಾದಿಂದ ಮೇಲ್ದಂಡೆಗೆ ನೀರು ಕೊಡದೇ, ಇದೇ ಭದ್ರಾ ಅಣೆಕಟ್ಟೆಯಿಂದ ನೀರು ಹರಿಸಲಾಯಿತು. ನೀರನ್ನು ಲಿಫ್ಟ್ ಮಾಡಲು ವಿದ್ಯುತ್ ಸಮಸ್ಯೆ ಇದ್ದು, ಸುಮಾರು ₹60 ಕೋಟಿ ಬಾಕಿ ಉಳಿಸಿಕೊಂಡಿದೆ. ₹60 ಕೋಟಿ ಬಾಕಿ ಹೊರೆ ಭಾರವನ್ನೂ ಸರ್ಕಾರ ಜನರ ಮೇಲೆಯೇ ಹಾಕಿದೆ ಎಂದು ಶಾಮನೂರು ಲಿಂಗರಾಜ ದೂರಿದರು.

ಮೇಲ್ದಂಡೆ ಭಾಗದಲ್ಲಿ ರಾಜಕಾರಣಿಗಳು, ಅಲ್ಲಿನ ಜಿಲ್ಲಾಧಿಕಾರಿ ಜ.18ರಂದು ಬಾಗಿನ ಬಿಡಲು ಭದ್ರಾದಿಂದ ಮೇಲ್ದಂಡೆಗೆ ನೀರು ಹರಿಸುತ್ತಿದ್ದಾರೆ. ಈಗಾಗಲೇ ಮೇಲ್ದಂಡೆ ವ್ಯಾಪ್ತಿಯ ಕೆರೆಗಳು ಕೋಡಿ ಬಿದ್ದರೂ ನೀರನ್ನು ವ್ಯರ್ಥ ಮಾಡಲಾಗುತ್ತಿದೆ. ಅಣೆಕಟ್ಟೆಯಲ್ಲಿ ಲಭ್ಯ ನೀರಿನಲ್ಲೇ ಬೆಳೆಗೆ, ಕುಡಿಯುವ ನೀರಿಗೆ, ಡೆಡ್‌ ಸ್ಟೋರೇಜ್‌, ಗದಗ-ಬೆಟಗೇರಿ ಭಾಗಕ್ಕೆ ಕುಡಿಯುವ ನೀರಿ ಬಿಟ್ಟರೆ, ಉಳಿಯೋದು ಕೇವಲ 18 ಟಿಎಂಸಿ ನೀರು. ಅಣೆಕಟ್ಟೆ ತುಂಬಿದಾಗ 2 ಬೆಳೆಗೆ ನೀರು ಕೊಡಬೇಕು. ಆದರೆ, ಅಚ್ಚುಕಟ್ಟು ರೈತರಿಗೆ ಮುಂದಿನ ಬೆಳೆಗೆ ನೀರು ಸಿಗುವುದು ಅನಮಾನ ಎಂಬ ಸ್ಥಿತಿ ಬಂದೊದಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಅತ್ತ ಮೇಲ್ದಂಡೆಗೆ ನೀರು ಸರಾಗವಾಗಿ ಹರಿದುಹೋಗುತ್ತಿದ್ದು, ಅಚ್ಚುಕಟ್ಟಿಗೆ ಸರಿಯಾಗಿ ಬರುತ್ತಿಲ್ಲ. ನಾಲೆಯುದ್ದಕ್ಕೂ ಜಂಗಲ್ ಬೆಳೆದು, ಹೂಳು ತುಂಬಿಕೊಂಡು ನೀರಿನ ಹರಿವಿನ ವೇಗ ತಗ್ಗಿಸಿದೆ. ಸರ್ಕಾರಕ್ಕೆ ಮೇಲ್ದಂಡೆ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ ತುಂಗಾದಿಂದ ಲಿಫ್ಟ್ ಮಾಡಿದಾಗ ಆ ಭಾಗದ ಕೆರೆಗಳನ್ನು ತುಂಬಿಸಿಕೊಳ್ಳಲಿ. ಅದನ್ನು ಬಿಟ್ಟು, ಅಚ್ಚುಕಟ್ಟು ಜಿಲ್ಲೆಗಳ ರೈತರ ಹಕ್ಕಿನ ನೀರಿಗೆ ಕೈಹಾಕುವುದು ಸರಿಯಲ್ಲ. ಮತಕ್ಕಾಗಿ ಕಾಂಗ್ರೆಸ್, ಬಿಜೆಪಿ ಯಾವುದೇ ಸರ್ಕಾರವಿದ್ದರೂ ಅಚ್ಚುಕಟ್ಟು ರೈತರ ಹಿತ ಮರೆಯುತ್ತಿರುವುದು ಸರಿಯಲ್ಲ. ಭದ್ರಾ ಅಣೆಕಟ್ಟೆ ಪೂರ್ಣವಾಗಿ ತುಂಬಿಸಿ, ಅಚ್ಚುಕಟ್ಟಿಗೆ ಸಮರ್ಪಕ ನೀರು ಕೊಟ್ಟು, ಬೇರೆ ಎಲ್ಲಿಗಾದರೂ ಒಯ್ಯಲಿ ಎಂದು ತಾಕೀತು ಮಾಡಿದರು.

ಒಕ್ಕೂಟದ ಮುಖಂಡರಾದ ಕೊಂಡಜ್ಜಿ ಶಾನುಬೋಗರ ನಾಗರಾಜ ರಾವ್‌, ಕಾರ್ಯದರ್ಶಿ ಶಿರಮಗೊಂಡನಹಳ್ಳಿ ಎ.ಎಂ.ಮಂಜುನಾಥ, ಬೆಳವನೂರು ಬಿ.ಕೆ.ವಿಶ್ವನಾಥ ಇದ್ದರು.

- - -

ಬಾಕ್ಸ್‌ * ಜಿಲ್ಲೆ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಲಿ

ಅಪ್ಪರ್ ಭದ್ರಾಗೆ ನಮ್ಮ ವಿರೋಧವಿದೆ. ಚಿತ್ರದುರ್ಗ ಡಿಸಿ ಬಾಗಿನ ಬಿಡಬೇಕೆಂದು ಮೇಲ್ದಂಡೆ ನೀರು ಹರಿಸುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು. ಸಚಿವರು, ಸಂಸದರ, ಶಾಸಕರು ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತಬೇಕು. ಭದ್ರಾ ಕಾಡಾದ ಎಂಡಿ, ಜಿಲ್ಲಾ ಸಚಿವರ ಗಮನಕ್ಕೆ ತಂದರೂ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಡಿಸೆಂಬರ್‌ನಿಂದಲೇ ಚಿತ್ರದುರ್ಗ ಭಾಗಕ್ಕೆ 700 ಟಿಎಂಸಿ ನೀರು ಹರಿಸಲಾಗುತ್ತಿದೆ. ನಮ್ಮ ಈಗಿನ ಬೆಳೆಗೆ 30 ಟಿಎಂಸಿ ನೀರು ಬೇಕು. ಈಗಿರುವ 64 ಟಿಎಂಸಿಯಲ್ಲಿ 24 ಟಿಎಂಸಿ ನೀರನ್ನು ಎಲ್ಲಾ ಕಡೆ ಹರಿಸಲಾಗುತ್ತಿದೆ. ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಎಚ್ಚೆತ್ತು, ಡ್ಯಾಂನಲ್ಲಿ ನೀರು ಉಳಿಸಲು ಮುಂದಾಗಲಿ ಎಂದು ಶಾಮನೂರು ಎಚ್.‍ಆರ್‌.ಲಿಂಗರಾಜ ಒತ್ತಾಯಿಸಿದರು.

- - - ಕೋಟ್‌

ಭದ್ರಾ ಡ್ಯಾಂ ತುಂಬಿದೆ ಎಂದು ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ ಹಾಗೂ ಹರಪನಹಳ್ಳಿ ಭಾಗದ ಅಚ್ಚುಕಟ್ಟು ರೈತರು ಮಲಗಿದಂತಿದೆ. ತಕ್ಷಣವೇ ಭದ್ರಾ ಡ್ಯಾಂನಿಂದ ಮೇಲ್ದಂಡೆಗೆ ಹರಿಸುವ ನೀರನ್ನು ಬಂದ್ ಮಾಡಬೇಕು. ಕಳ್ಳರ ಕೈಗೆ ಅಣೆಕಟ್ಟೆ ಗೇಟ್‌ಗಳ ಬೀಗ ಕೊಟ್ಟಂತಾಗಿದ್ದು, ನೀರು ನಿರ್ವಹಣೆ ಬಗ್ಗೆ ಕನಿಷ್ಠ ಅರಿವು, ಅನುಭವ, ಜ್ಞಾನ, ಮಾಹಿತಿ ಇಲ್ಲದ ಅಧಿಕಾರಿಗಳು, ಜನಪ್ರತಿನಿಧಿಗಳಿಂದಾಗಿ ಅಚ್ಚುಕಟ್ಟು ರೈತರು ಸಂಕಷ್ಟ ಅನುಭವಿಸುವ ಸ್ಥಿತಿ ಬಂದೊದಗಿದೆ

- ಶಾಮನೂರು ಲಿಂಗರಾಜ, ರೈತ ಮುಖಂಡ

- - - -15ಕೆಡಿವಿಜಿ2.ಜೆಪಿಜಿ:

ದಾವಣಗೆರೆಯಲ್ಲಿ ಬುಧವಾರ ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಶಾಮನೂರು ಎಚ್.ಆರ್.ಲಿಂಗರಾಜ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.