ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಸಹಕಾರದ ತತ್ವದಡಿಯಲ್ಲಿ ಭಾರತೀಯ ಜೀವನ ಪರಂಪರೆ ಸಾಗಿದ್ದು, ದುರುದ್ದೇಶದಿಂದ ಸಂಘ-ಸಂಸ್ಥೆಗಳನ್ನು ಸ್ಥಾಪಿಸದೇ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುವುದು ಇಂದು ಅತ್ಯವಶ್ಯವಾಗಿದೆ ಎಂದು ಮಲ್ಲೂರು-ಸಿಂದೋಗಿಯ ನಿತ್ಯಾನಂದ ಸತ್ಸಂಗ ಆಶ್ರಮದ ಮುಕ್ತಾನಂದ ಸ್ವಾಮೀಜಿ ಹೇಳಿದರು.ಅವರು ಸಮೀಪದ ಮಲ್ಲೂರ ಗ್ರಾಮದಲ್ಲಿ ಭಾನುವಾರ ನಡೆದ ಶ್ರೀ ಸೋಮೇಶ್ವರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತದ ಬಹುಉದ್ದೇಶಿತ ಸೇವಾ ಕೇಂದ್ರ, ನಬಾರ್ಡ ಯೋಜನೆಯಡಿಯಲ್ಲಿ ನಿರ್ಮಿಸಲಾದ ಸಹಕಾರ ಸಂಘದ ನೂತನ ಕೃಷಿ ಸೇವಾ ಕೇಂದ್ರ, ವಿವಿಧೋದ್ದೇಶ ಉಗ್ರಾಣ ಕಟ್ಟಡ ಉದ್ಘಾಟಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ವಿವಿಧ ಉದ್ದೇಶಗಳಿಗೆ ಅನುಷ್ಠಾನಗೊಂಡ ಸಹಕಾರಿ ಸಂಘಗಳು ಗ್ರಾಮೀಣರಿಗೆ ವರದಾನವಾಗಿ ಆರ್ಥೀಕ ಬಲ ಹೆಚ್ಚಿಸಬೇಕು ಎಂದರು. ಪ್ರಸ್ತುತ ದಿನಗಳಲ್ಲಿ ಮೂಲ ಸಂಸ್ಕ್ರತಿ ಮರೆತು ಆಧುನಿಕ ಭರಾಟೆಯತ್ತ ಸಾಗಿದ್ದು ಕಳವಳಕಾರಿ ಸಂಗತಿ. ದುಡ್ಡಿನ ದರ್ಪದಲ್ಲಿ ಮಾನವೀಯ ಮೌಲ್ಯಗಳು ಗೌಣವಾಗುತ್ತಿವೆ. ಸಹಕಾರಿ ಸಂಘಗಳು ಪ್ರಗತಿ ಪಥದತ್ತ ಸಾಗಬೇಕಾದರೆ ಪ್ರಾಮಾಣಿಕ ಸೇವಾ ಮನೋಭಾವನೆ ರೂಡಿಸಿಕೊಂಡಾಗ ಸಾಧ್ಯ ಎಂದರು. ಕರ್ನಾಟಕ ಹಣಕಾಸು ನಿಗಮದ ಅದ್ಯಕ್ಷ, ಶಾಸಕ ಮಹಾಂತೇಶ ಕೌಜಲಗಿ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಸಹಕಾರ ಇಲಾಖೆಯ ಮೂಲಕ ರಾಜ್ಯ ಸರ್ಕಾರ ರೈತರಿಗೆ ಹಲವು ಯೋಜನೆಗಳನ್ನು ರೂಪಿಸಿ ಆ ಮೂಲಕ ಸಹಾಯ - ಸಹಾಕಾರ ನೀಡುತ್ತಿದ್ದು, ಅವುಗಳ ಸದುಪಯೋಗ ಪಡೆದು ಬದುಕಿನಲ್ಲಿ ಸಮೃದ್ದಿ ಕಾಣಬೇಕು. ಸಂಘಗಳ ಬೆಳವಣಿಗೆಯಲ್ಲಿ ಗ್ರಾಹಕರ ಪಾತ್ರವೂ ಅತ್ಯಮೂಲ್ಯವಾಗಿದ್ದು ಪಡೆದ ಸಾಲವನ್ನು ಮರುಪೂರಣ ಮಾಡಿದಾಗ ಮಾತ್ರ ಯಶಸ್ವಿ ಸಾದ್ಯವೆಂದರು.
ಸಹಕಾರಿ ಸಂಘದ ಅಧ್ಯಕ್ಷ ಬಸನಗೌಡಾ ಪಾಟೀಲ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಬೆಳಗಾವಿ ಬಿಡಿಸಿಸಿ ಬ್ಯಾಂಕ್ ನಿರ್ಧೇಶಕಿ ರತ್ನವ್ವ ಮಾಮನಿ, ಬಿಡಿಸಿಸಿ ಬ್ಯಾಂಕ ನಿರ್ದೇಶಕ ಮಹಾಂತೇಶ ದೊಡಗೌಡರ, ಶ್ರೀ ಕ್ಷೇತ್ರ ಸೊಗಲ ಸೋಮೇಶ್ವರ ಟ್ರಸ್ಟ ಕಮಿಟಿ ಅಧ್ಯಕ್ಷ ವೀರನಗೌಡಾ ಸಂಗನಗೌಡರ, ಸಂಘದ ಉಪಾಧ್ಯಕ್ಷ ಸಂಗಪ್ಪ ಮುರಗೋಡ, ಮಾಜಿ ಶಾಸಕ ಜಗದೀಶ ಮೆಟಗುಡ್, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯ ನಿರ್ಧೇಶಕ ರವೀಂದ್ರ ಯಲಿಗಾರ ಬಿಡಿಸಿಸಿ ಬ್ಯಾಂಕ್ ತಾಲೂಕಾ ನಿಯಂತ್ರಣಾಧಿಕಾರಿ ಸಿ.ಆರ್.ಪಾಟೀಲ, ಬ್ಯಾಂಕ್ ನಿರೀಕ್ಷಕ ಪ್ರವೀಣ ಕೋಟಗಿ, ಹೊಸೂರಿನ ಬಿಡಿಸಿಸಿಯ ಶಾಖಾ ವ್ಯವಸ್ಥಾಪಕ ಜಿ.ಬಿ.ಪಾಟೀಲ, ಗ್ರಾಮ ಪಂಚಾಯತಿ ಅಧ್ಯಕ್ಷ್ಯೆ ಕವಿತಾ ಪಾಟೀಲ, ಮುಖ್ಯ ಕಾರ್ಯನಿರ್ವಾಹಕ ರುದ್ರಗೌಡಾ ಪಾಟೀಲ, ಪಿಡಿಓ ವಿಜಯಕುಮಾರ ಅಂಗಡಿ, ಮುರಗೋಡ ಪಿಕೆಪಿಎಸ್ ಅಧ್ಯಕ್ಷ್ಯೆ ಗೀತಾತಾಯಿ ದೇಸಾಯಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಮೆಟಗುಡ್ಡ, ಮಲ್ಲವ್ವ ಮುರಗೋಡ, ಕಸ್ತೂರೆವ್ವ ಕಮತಗಿ ಮುಂತಾದವರು ವೇದಿಕೆ ಮೇಲಿದ್ದರು. ಸಂಘದ ಆಡಳಿತ ಮಂಡಳಿಯ ಸರ್ವ ಸದಸ್ಯರು ಇದ್ದರು.ಅಧಿಕ ಸಂಖ್ಯೆಯಲ್ಲಿ ಗ್ರಾಹಕರು, ಸಾರ್ವಜನಿಕರು ಪಾಲ್ಗೊಂಡಿದ್ದರು. ವಿವಿಧ ಕ್ಷೇತ್ರದ ಸಾಧಕರನ್ನು, ಆಡಳಿತ ಮಂಡಳಿಯ ಸದಸ್ಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಂಗಪ್ಪ ಕರಡಿ ವದರಿ ವಾಚನ ಮಾಡಿದರು. ಶಿಕ್ಷಕ ವೀರುಪಾಕ್ಷಯ್ಯ ತವಗಮಠ ಸ್ವಾಗತಿಸಿದರು. ಶಿಕ್ಷಕ ರಾಯಪ್ಪ ಸಣ್ಣಮನಿ ನಿರೂಪಿಸಿದರು. ಶಿಕ್ಷಕ ನಾಗಪ್ಪ ಪೆಂಟೇದ ವಂದಿಸಿದರು.