ರಾಷ್ಟ್ರೀಯ ತೆರಿಗೆ ಸಮ್ಮೇಳನ ಹಾಗೂ ತೆರಿಗೆ ಸಲಹೆಗಾರರ ದಿನಾಚರಣೆಯಲ್ಲಿ ಜಂಟಿ ಆಯುಕ್ತೆ ಮೀರಾ ಪಂಡಿತ್ ಸಲಹೆ
ಕನ್ನಡಪ್ರಭ ವಾರ್ತೆ ಕೋಲಾರತೆರಿಗೆ ಇಲಾಖೆಯಿಂದ ನೋಟಿಸ್ ಬಂದಾಗ ತೆರಿಗೆದಾರರು ಆತಂಕಪಡುವ ಅಗತ್ಯವಿಲ್ಲ. ನೋಟಿಸ್‌ಗೆ ಸಂಬಂಧಿಸಿದಂತೆ ಅಗತ್ಯ ದಾಖಲೆ ಹಾಗೂ ಮಾಹಿತಿಯನ್ನು ಇಲಾಖೆಗೆ ಸಲ್ಲಿಸುವ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬಹುದು ಎಂದು ಆದಾಯ ತೆರಿಗೆ ಇಲಾಖೆಯ ಜಂಟಿ ಆಯುಕ್ತೆ ಮೀರಾ ಪಂಡಿತ್ ತಿಳಿಸಿದರು.
ರಾಜ್ಯ ತೆರಿಗೆ ಸಲಹೆಗಾರರ ಸಂಘ ಹಾಗೂ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಆಶ್ರಯದಲ್ಲಿ ಶುಕ್ರವಾರ ನಗರ ಹೊರವಲಯದ ಅಜ್ಜಪ್ಪನಹಳ್ಳಿ ಗೇಟ್‌ನಲ್ಲಿರುವ ಎಸ್.ಕೆ ಇಂಟರ್‌ನ್ಯಾಷನಲ್ ಇನ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ತೆರಿಗೆ ಸಮ್ಮೇಳನ ಹಾಗೂ ತೆರಿಗೆ ಸಲಹೆಗಾರರ ದಿನಾಚರಣೆಯಲ್ಲಿ ಮಾತನಾಡಿದ ಅವರು, ನೋಟಿಸ್ ಎಂಬುದು ಇಲಾಖೆಯ ತೆರಿಗೆದಾರರನ್ನು ಸಂಪರ್ಕಿಸಿ ನಿಖರ ಮಾಹಿತಿ ಪಡೆಯಲು ಇರುವ ಸಾಧನ ಅಷ್ಟೆ ಇದಕ್ಕೆ ಗ್ರಾಹಕರು ಭಯಪಡುವ ಅವಶ್ಯಕತೆ ಇಲ್ಲ ಎಂದರು.ತೆರಿಗೆ ಇಲಾಖೆಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಂಡಿರುವುದರಿಂದ ತೆರಿಗೆದಾರರಿಗೆ ಸಾಕಷ್ಟು ಅನುಕೂಲವಾಗಿದೆ. ನೋಟಿಸ್‌ಗಳಿಗೆ ಉತ್ತರ ಹಾಗೂ ಅಗತ್ಯ ದಾಖಲೆಗಳನ್ನು ಆನ್‌ಲೈನ್ ಮೂಲಕವೇ ಸಲ್ಲಿಸಬಹುದಾಗಿದ್ದು, ಪ್ರತಿಯೊಂದು ವಿಚಾರಕ್ಕೂ ಕಚೇರಿಗೆ ತೆರಳಿ ದಾಖಲೆ ಸಲ್ಲಿಸುವ ಅಗತ್ಯವಿಲ್ಲ. ತೆರಿಗೆ ಸಲಹೆಗಾರರು ಮತ್ತು ತೆರಿಗೆದಾರರು ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಂಡು ವ್ಯವಸ್ಥೆಯನ್ನು ಸರಳಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇಂದಿನ ಬದಲಾಗುತ್ತಿರುವ ತೆರಿಗೆ ವ್ಯವಸ್ಥೆ ಹಾಗೂ ಹೊಸ ತಂತ್ರಜ್ಞಾನಗಳ ಹಿನ್ನೆಲೆಯಲ್ಲಿ ತೆರಿಗೆ ಸಲಹೆಗಾರರಿಗೆ ನಿರಂತರ ತರಬೇತಿ ಅಗತ್ಯವಿದೆ. ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೆರಿಗೆ ಸಲಹೆಗಾರರ ಕ್ಷೇತ್ರಕ್ಕೆ ಬಂದು ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಂಘವು ಕೇವಲ ತೆರಿಗೆ ಸಂಬಂಧಿತ ವಿಚಾರಗಳಿಗೆ ಸೀಮಿತವಾಗಿಲ್ಲ. ಕೈಗಾರಿಕೋದ್ಯಮಿಗಳು ಸೇರಿದಂತೆ ವಿವಿಧ ವೃಂದಗಳ ಆರ್ಥಿಕ ಚಟುವಟಿಕೆಗಳಿಗೆ ತೆರಿಗೆ ಸಲಹೆಗಾರರು ಪ್ರಮುಖ ಕೊಂಡಿಯಾಗಿದ್ದಾರೆ. ತೆರಿಗೆದಾರರ ಸಹಕಾರದಿಂದಲೇ ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆ ಸುಗಮವಾಗಿ ಸಾಗಲು ಸಾಧ್ಯವಾಗುತ್ತಿದೆ ಎಂದರು.
ಬಡ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವು:ಗುತ್ತಿಗೆದಾರ ಹಾಗೂ ಶಿಕ್ಷಣೋದ್ಯಮಿ ವಿ.ಕೃಷ್ಣಾರೆಡ್ಡಿ ಮಾತನಾಡಿ, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಉದ್ದೇಶ ವ್ಯಕ್ತಪಡಿಸಿ ಪ್ರತಿ ವರ್ಷ ಇಬ್ಬರು ಬಡ ಹೆಣ್ಣು ಮಕ್ಕಳನ್ನು ಆಯ್ಕೆ ಮಾಡಿಕೊಂಡು ಅವರ ಶಿಕ್ಷಣಕ್ಕೆ ನೆರವು ನೀಡಿ, ಅವರು ವಿದ್ಯಾಭ್ಯಾಸ ಪೂರ್ಣಗೊಳಿಸಿದ ಬಳಿಕ ಉದ್ಯೋಗಕ್ಕೆ ಸೇರುವಂತೆ ಸಹಕಾರ ನೀಡುತ್ತಿದ್ದೇನೆ. ಇದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿ ಹೇಳಿದರು.
ರಾಜ್ಯ ಸಂಘದ ಅಧ್ಯಕ್ಷ ಎಸ್.ನಂಜುಂಡಪ್ರಸಾದ್ ಮಾತನಾಡಿ, ತೆರಿಗೆ ಸಲಹೆಗಾರರು ಸಂಘಟಿತರಾಗಬೇಕು. ನಾವು ಸಂಘಟಿತರಾದರೆ ತೆರಿಗೆ ವಂಚನೆ ತಪ್ಪಿಸಬಹುದು. ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸುವ ಮೂಲಕ ದಂಡ ತಪ್ಪಿಸಬಹುದು. ಈ ಎಲ್ಲದರ ಅರಿವು ಮೂಡಿಸುವುದು ಈ ಸಮಾವೇಶದ ಉದ್ದೇಶವಾಗಿದೆ ಎಂದರು.ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ರಾಜ್‌ಕುಮಾರ್ ಮಾತನಾಡಿ, ರಾಷ್ಟ್ರೀಯ ಸಮಾವೇಶವನ್ನು ಕೋಲಾರದಲ್ಲಿ ಆಯೋಜಿಸಲು ಅವಕಾಶ ಸಿಕ್ಕಿರುವುದು ನಮ್ಮೆಲ್ಲರ ಪಾಲಿಗೆ ಹೆಮ್ಮೆಯ ವಿಚಾರ. ಕೋಲಾರದಲ್ಲಿ ಇದೇ ಮೊದಲ ಬಾರಿ ಆಯೋಜನೆ ಮಾಡಲಾಗಿದೆ ಎಂದರು.
ಜಿಲ್ಲಾ ಸಂಘದಲ್ಲಿ ೫೨ ಸದಸ್ಯರು ಇದ್ದು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ತೆರಿಗೆ ಪಾವತಿ ಸಂಬಂಧ ಜಾಗೃತಿ ಮೂಡಿಸಲಾಗುತ್ತಿದೆ. ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸಿ ನೋಟಿಸ್, ದಂಡ, ಬಡ್ಡಿ ಬಾರದಂತೆ ಎಚ್ಚರಿಕೆ ವಹಿಸಬೇಕು. ಸರಿಯಾದ ದಾಖಲೆ ಹಾಗೂ ಮಾಹಿತಿ ನೀಡಬೇಕು. ಈ ಸಂಬಂಧ ಸಲಹೆ ನೀಡಲು ನಾವು ಬದ್ಧರಿದ್ದೇವೆ. ಸರ್ಕಾರದ ಜೊತೆ ಕೈಜೋಡಿಸಿ ಅಭಿವೃದ್ಧಿಗೆ ಸಿದ್ಧ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾರಡ್ಡಿ, ರಾಜ್ಯ ಹಾಗೂ ಜಿಲ್ಲಾ ಸಂಘದ ಪದಾಧಿಕಾರಿಗಳು, ರವೀಂದ್ರ ವಿ.ಶೆಟ್ಟಿ, ಸೋಮಲಿಂಗಪ್ಪ, ಅಬ್ದುಲ್ ಬಷೀರ್ ಸಾಬ್, ರವೀಂದ್ರ ಎಸ್.ಕೆ, ಕೆ.ಆರ್.ನರಸಿಂಹಮೂರ್ತಿ, ಪ್ರಸಾದ್, ಜ್ಯೋತಿಜಂಬಗಿ ಇದ್ದರು.