ಬೆಳಗಾವಿಯಲ್ಲಿ ಮಹಾರಾಷ್ಟ್ರ ಗಡಿ ಭವನ ನಿರ್ಮಾಣಕ್ಕೆ ಅನುಮತಿ ನೀಡಬಾರದೆಂದು ಆಗ್ರಹಿಸಿ ಕರವೇ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿಯಲ್ಲಿ ಮಹಾರಾಷ್ಟ್ರ ಗಡಿ ಭವನ ನಿರ್ಮಾಣಕ್ಕೆ ಅನುಮತಿ ನೀಡಬಾರದೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದ ಕಾರ್ಯಕರ್ತರು, ಮಹಾರಾಷ್ಟ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕಳೆದ ಐದು ದಶಕಗಳಿಂದ ನಾಡದ್ರೋಹಿ ಎಂಇಎಸ್ ನಾಯಕರು ಮಹಾರಾಷ್ಟ್ರ ಸರ್ಕಾರ ಬಳಸಿಕೊಂಡು ಗಡಿಜಿಲ್ಲೆ ಬೆಳಗಾವಿಯಲ್ಲಿ ನಾಡದ್ರೋಹಿ ಚಟುವಟಿಕೆ ಮೂಲಕ ಪುಂಡಾಟಿಕೆ ಪ್ರದರ್ಶಿಸುತ್ತ ಬಂದಿದ್ದಾರೆ. ಬೆಳಗಾವಿಯಲ್ಲಿ ಕೆಲ ವರ್ಷಗಳ ಹಿಂದೆ ಹುತಾತ್ಮ ಭವನ ನಿರ್ಮಿಸಲು ಮುಂದಾಗಿದ್ದ ಎಂಇಎಸ್ ಈಗ ಮಹಾರಾಷ್ಟ್ರ ಗಡಿ ಭವನ ನಿರ್ಮಿಸುವ ಕುತಂತ್ರ ಮಾಡುತ್ತಿದೆ. ಒಂದು ರಾಜ್ಯ ಇನ್ನೊಂದು ರಾಜ್ಯದಲ್ಲಿ ಜನರ ಅನುಕೂಲಕ್ಕೆ ಭವನ ನಿರ್ಮಿಸುತ್ತದೆ. ಅದರಂತೆ ದೆಹಲಿ, ಗೋವಾ ಸೇರಿ ವಿವಿಧ ರಾಜ್ಯಗಳಲ್ಲಿ ಕರ್ನಾಟಕ ಭವನಗಳಿವೆ. ಆದರೆ ಬೆಳಗಾವಿಯಲ್ಲಿ ಎಂಇಎಸ್‌ನಂತಹ ಸಂಘಟನೆ ಮೊದಲನಿಂದಲೂ ನಾಡದ್ರೋಹಿ ಚಟುವಟಿಕೆಗಳನ್ನೇ ಮಾಡುತ್ತ ಬಂದಿದೆ. ಇಲ್ಲಿ ಗಡಿ ಭವನ ನಿರ್ಮಿಸಿ ಭಾಷಾ ವೈಷಮ್ಯದ ವಿಷ ಬೀಜ ಬಿತ್ತುವ ದುರುದ್ದೇಶ ಹೊಂದಿದ್ದಾರೆ. ಹೀಗಾಗಿ ಭವನ ನಿರ್ಮಾಣಕ್ಕೆ ಅನುಮತಿ ಕೊಡಬಾರದು ಎಂದು ಆಗ್ರಹಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಶರಥ ಬನೋಶಿ, ತಾಲೂಕು ಅಧ್ಯಕ್ಷ ಸತೀಶ ಗುಡದವರ, ನಗರಾಧ್ಯಕ್ಷ ಭೂಪಾಲ ಅತ್ತು, ಜಯವಂತ ನಿಡಗಲಕರ, ಅರ್ಜುನ ಕಾಂಬಳೆ, ರೂಪಾ ಬಾರಿಗಡ್ಡಿ, ವಿನಾಯಕ ಭೋವಿ ಇತರರಿದ್ದರು.