ಕುಷ್ಠರೋಗದ ಬಗ್ಗೆ ನಿರ್ಲಕ್ಷ ಬೇಡ: ಡಾ. ಪ್ರಕಾಶ

| Published : Jun 23 2024, 02:04 AM IST

ಸಾರಾಂಶ

ಕುಷ್ಠರೋಗ ಯಾವುದೇ ದೇವರ ಶಾಪ ಹಾಗೂ ಪಾಪ ಮಾಡುವುದರಿಂದ ಬರುವುದಿಲ್ಲ. ಇದು ಮೈಕ್ರೊಬ್ಯಾಕ್ಟಿರಿಯಾ ಲೆಪ್ರೆಂ ಎಂಬ ಸೂಕ್ಷ್ಮಾಣುವಿನಿಂದ ಹರಡುತ್ತದೆ.

ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ಜಾಗೃತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕುಷ್ಠರೋಗದ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಪ್ರಕಾಶ ಎಚ್. ಹೇಳಿದರು.

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿಗಳ ಕಚೇರಿ, ಕೊಪ್ಪಳ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಇರಕಲ್‌ಗಡ ಇವುಗಳ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಇರಕಲ್‌ಗಡ ವ್ಯಾಪ್ತಿಯ ತಾಳಕನಕಾಪೂರ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಹತ್ತಿರ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ಜರುಗಿದ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಯಾರಿಗಾದರೂ ಮೈ ಮೇಲೆ ತಿಳಿ-ಬಿಳಿ ತಾಮ್ರವರ್ಣದ ಸ್ಪರ್ಶಜ್ಞಾನವಿಲ್ಲದ 5 ಅಥವಾ 5ಕ್ಕಿಂತ ಹೆಚ್ಚು ಮಚ್ಚೆಗಳು ಇದ್ದರೆ, ಪಾದಗಳ ದೌರ್ಬಲ್ಯ, ಬೆರಳುಗಳ ದೌರ್ಬಲ್ಯ, ತ್ವಚೆಯ ಮೇಲೆ ಕೆಂಪಾದ ಬಾವು, ಕಣ್ಣು ಮುಚ್ಚುವಲ್ಲಿ ತೊಂದರೆ ಕಾಣಿಸಿಕೊಂಡರೆ, ಇವು ಕುಷ್ಠರೋಗದ ಲಕ್ಷಣಗಳಾಗಿರಬಹುದು. ಆದ್ದರಿಂದ ಇಂತಹ ಲಕ್ಷಣಗಳು ಯಾರಿಗಾದರು ಕಾಣಿಸಿಕೊಂಡರೆ, ತಕ್ಷಣ ತಮ್ಮ ಸಮೀಪದ ಇರಕಲ್‌ಗಡ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷಿಸಿಕೊಂಡು, ಖಚಿತ ಪಟ್ಟರೆ ಉಚಿತವಾಗಿ ಚಿಕಿತ್ಸೆ ಪಡೆಯಿರಿ. ಇದಕ್ಕೆ ಯಾರೂ ಹಿಂಜರಿಯಬಾರದು. ಇದೊಂದು ಸಾಂಕ್ರಾಮಿಕ ರೋಗವಾಗಿದೆ. ರೋಗಿಯು ಕೆಮ್ಮುವುದರ ಮೂಲಕ ಮತ್ತು ಸೀನುವುದರ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಇದು ಖಂಡಿತ ಗುಣಮುಖವಾಗುವಂತಹ ಕಾಯಿಲೆಯಾಗಿದೆ. ಎಂ.ಡಿ.ಟಿ ಚಿಕಿತ್ಸೆಯಿಂದ ಗುಣ ಪಡಿಸಬಹುದು ಎಂದು ತಿಳಿಸಿದರು.

ಇರಕಲ್‌ಗಡ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಲಕ್ಷ್ಮೀ ಮಾತನಾಡಿ, ಕುಷ್ಠರೋಗ ಯಾವುದೇ ದೇವರ ಶಾಪ ಹಾಗೂ ಪಾಪ ಮಾಡುವುದರಿಂದ ಬರುವುದಿಲ್ಲ. ಇದು ಮೈಕ್ರೊಬ್ಯಾಕ್ಟಿರಿಯಾ ಲೆಪ್ರೆಂ ಎಂಬ ಸೂಕ್ಷ್ಮಾಣುವಿನಿಂದ ಹರಡುತ್ತದೆ. ಇದಕ್ಕೆ ಸಂಪೂರ್ಣವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಇದಕ್ಕೆ ಯಾರೂ ಭಯಪಡುವ ಅಗತ್ಯವಿಲ್ಲ. ಚರ್ಮದ ಯಾವುದೇ ಕಾಯಿಲೆ ಇದ್ದರು ತಮ್ಮ ಮನೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿದಾಗ ಪರೀಕ್ಷಿಸಿಕೊಳ್ಳುವಂತೆ ಸಲಹೆ ನೀಡಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕುಷ್ಠರೋಗದ ಬಗ್ಗೆ ಮಾಹಿತಿ ನೀಡಿದರು.

ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಲಾಯಿತು. ಗ್ರಾಮದಲ್ಲಿ 6 ತಂಡ ರಚನೆ ಮಾಡಿ, ಮನೆ ಮನೆಗೆ ಭೇಟಿ ನೀಡಿ, ಕರಪತ್ರ ಹಂಚುವುದರ ಮೂಲಕ ಆರೋಗ್ಯ ತಪಾಸಣೆ ಮಾಡಿ, ಅರಿವು ಮೂಡಿಸಿ, ಸಮೀಕ್ಷೆ ಮಾಡಲಾಯಿತು.

ಮೇಲ್ವಿಚಾರಕ ವೀರಭದ್ರಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಸಂಗಯ್ಯ ಕೆ., ಶೈಲಜಾ ಪಾಟೀಲ್, ಪರಶುರಾಮ, ರಾಜಶೇಖರ, ಸುರೇಶ್, ಜಯಪ್ರಕಾಶ, ಪ್ರಿಯಾಂಕ, ಆಶಾ ಕಾರ್ಯಕರ್ತೆಯರು, ಗ್ರಾಮದ ಮುಖಂಡರು, ಎಸ್.ಡಿ.ಎಂ.ಸಿ ಅಧ್ಯಕ್ಷರು, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇದ್ದರು.