ಕೆ.ಆರ್.ಪೇಟೆ ತಾಲೂಕಿನ ಹಲವಾರು ಭಾಗಗಳಲ್ಲಿ ವಿದ್ಯುತ್ ಸಬ್ ಸ್ಟೇಷನ್‌ ನಿರ್ಮಾಣ ಮಾಡಲಾಗಿದೆ. ವಿದ್ಯುತ್ ಸಮರ್ಪಕವಾಗಿ ರೈತರಿಗೆ, ಗ್ರಾಮಗಳಿಗೆ ಪೂರೈಕೆಯಾಗುತ್ತಿದೆ. ಇದರಿಂದ ವಿದ್ಯುತ್ ಸಮಸ್ಯೆ ಕಡಿಮೆಯಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಜೆಡಿಎಸ್ ಅಧಿಕಾರದಲ್ಲಿದ್ದಾಗ ಸಿಎಂ ಆಗಿದ್ದ ಎಚ್.ಡಿ.ಕುಮಾರಸ್ವಾಮಿ ಹಾಗೂ ಇಂಧನ ಸಚಿವರಾಗಿದ್ದ ಎಚ್.ಡಿ.ರೇವಣ್ಣ ಅವರು ರಾಜ್ಯಾದ್ಯಂತ ಅಗತ್ಯ ಇರುವೆಡೆ ವಿದ್ಯುತ್ ಉಪಕೇಂದ್ರಗಳ ನಿರ್ಮಾಣದಿಂದಾಗಿ ರಾಜ್ಯದಲ್ಲಿ ಬೇಸಿಗೆ ವೇಳೆ ವಿದ್ಯುತ್ ಸಮಸ್ಯೆ ಸಾಧ್ಯವಾದಷ್ಟು ಕಡಿಮೆಯಾಗಿತ್ತು ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.

ತಾಲೂಕಿನ ಮಡುವಿನಕೋಡಿ ಗ್ರಾಮದಲ್ಲಿ 66/11 ಕೆ.ವಿ. ಸಾಮರ್ಥ್ಯದ ವಿದ್ಯುತ್ ವಿತರಣಾ ಕೇಂದ್ರ ಉದ್ಘಾಟಿಸಿ ಮಾತನಾಡಿ, ಜೆಡಿಎಸ್ ಅಧಿಕಾರ ನಡೆಸಿದ ಅವಧಿಯಲ್ಲಿ ರಾಜ್ಯದ ಪ್ರತಿ ತಾಲೂಕುಗಳಲ್ಲಿ ಅಗತ್ಯ ಇರುವ ಕಡೆಗಳಲ್ಲಿ ಹತ್ತಾರು ಸಬ್ ಸ್ಟೇಷನ್‌ಗಳನ್ನು ನಿರ್ಮಾಣ ಮಾಡಿ ವಿದ್ಯುತ್ ಸಮಸ್ಯೆ ನಿವಾರಣೆಗೆ ಶ್ರಮಿಸಲಾಗಿತ್ತು ಎಂದರು.

ಕೆ.ಆರ್.ಪೇಟೆ ತಾಲೂಕಿನ ಹಲವಾರು ಭಾಗಗಳಲ್ಲಿ ವಿದ್ಯುತ್ ಸಬ್ ಸ್ಟೇಷನ್‌ ನಿರ್ಮಾಣ ಮಾಡಲಾಗಿದೆ. ವಿದ್ಯುತ್ ಸಮರ್ಪಕವಾಗಿ ರೈತರಿಗೆ, ಗ್ರಾಮಗಳಿಗೆ ಪೂರೈಕೆಯಾಗುತ್ತಿದೆ. ಇದರಿಂದ ವಿದ್ಯುತ್ ಸಮಸ್ಯೆ ಕಡಿಮೆಯಾಗಿದೆ ಎಂದರು.

ಜನಸಾಮಾನ್ಯರಿಗೆ ರಸ್ತೆ, ವಿದ್ಯುತ್, ಕುಡಿಯುವ ನೀರು ಸರಿಯಾಗಿ ಮಾಡಿಕೊಟ್ಟರೆ ಉಳಿದ ಯಾವುದೇ ಸಮಸ್ಯೆಯನ್ನು ಹಂತ ಹಂತವಾಗಿ ಬಗೆಹರಿಸಿಕೊಡಬಹುದು. ಆದರೆ, ಈಗಿನ ಸರ್ಕಾರ ರೈತರಿಗೆ ಕಿರುಕುಳ ನೀಡುತ್ತಿದೆ. ಸರ್ಕಾರವು ಕೃಷಿ ಪಂಪ್ ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸುವ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಇದನ್ನು ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿದರು.

ರೈತರು ಪಂಪ್‌ಸೆಟ್‌ಗಳಿಗೆ ಕಷ್ಟ ಪಟ್ಟು ಬೋರ್‌ವೆಲ್ ಕೊರೆಸಿ ಹಾಕಿಸಿಕೊಂಡಿರುವ ವಿದ್ಯುತ್ ಸಂಪರ್ಕವನ್ನು ಅಕ್ರಮ- ಸಕ್ರಮ ಯೋಜನೆಯಡಿ ಸಕ್ರಮ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು. ಉಚಿತ ವಿದ್ಯುತ್ ನೀಡುವ ಯೋಜನೆ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಚೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಪುಟ್ಟಸ್ವಾಮಿ, ಜೆಇ ಫಾಝಿಲ್, ಗ್ರಾಪಂ ಅಧ್ಯಕ್ಷೆ ಪ್ರೀತಿ ಭೈರನಾಯಕ್, ಉಪಾಧ್ಯಕ್ಷ ನಾಗರಾಜು, ಪಿಡಿಒ ಮಹೇಶ್, ತಾಲೂಕು ಜೆಡಿಎಸ್ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ರತಿಮಹಾದೇವ್, ಗ್ರಾ.ಪಂ.ಸದಸ್ಯರಾದ ರವಿ, ಚಂದ್ರಹಾಸ, ಮುಖಂಡರಾದ ಸಂದೇಶ್, ವಿಜಯ್‌ಕುಮಾರ್ ಸೇರಿದಂತೆ ಹಲವರಿದ್ದರು.