ಸಾರಾಂಶ
ಯಲಬುರ್ಗಾ: ಸಮಾಜದಲ್ಲಿ ಹೆಣ್ಣು ಮಗುವನ್ನು ತಾತ್ಸರ ಮನೋಭಾವನೆಯಿಂದ ಕಾಣದೆ ಆಕೆಯನ್ನು ಎಲ್ಲರೂ ಮನೆಯ ಮಹಾಲಕ್ಷ್ಮೀಯಂತೆ ಕಾಣಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಂಗಸ್ವಾಮಿ ಜೆ. ಹೇಳಿದರು.
ತಾಲೂಕಿನ ಹೊಸಳ್ಳಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಪಂ, ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಸೇರಿದಂತೆ ನಾನಾ ಇಲಾಖೆಗಳ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಮತ್ತು ಕಾನೂನು ಅರಿವು, ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಹೆಣ್ಣು ಎಂದರೆ ಮಹಾನ್ ಶಕ್ತಿ ಇದ್ದಂತೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ಶೈಕ್ಷಣಿಕವಾಗಿ ಅತಿ ಹೆಚ್ಚು ಸಾಧನೆ ಮಾಡುವ ಮೂಲಕ ಇಡೀ ಜಗತ್ತಿಗೆ ಮಾದರಿಯಾಗಿದ್ದಾರೆ. ತಾಯಿ, ಹೆಂಡತಿ, ಅಕ್ಕ, ತಂಗಿಯಾಗಿ ಇಡೀ ಕುಟುಂಬ ನಿರ್ವಹಣೆಯಲ್ಲಿ ಹೆಣ್ಣಿನ ಪಾತ್ರ ಅಮೋಘವಾಗಿದೆ. ಜಗಜ್ಯೋತಿ ಬಸವಣ್ಣ, ಅಕ್ಕಮಹಾದೇವಿ, ಸಾವಿತ್ರಿಬಾಯಿ ಪುಲೆ ಹಾಗೂ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಸೇರಿದಂತೆ ಅನೇಕ ಮಹಾತ್ಮರು ಮಹಿಳೆಯರಿಗೆ ಶಿಕ್ಷಣ ಹಕ್ಕು, ಸಮಾನತೆ ಹಾಗೂ ಸಮಾಜದಲ್ಲಿ ಉತ್ತಮ ಸ್ಥಾನಮಾನ ದೊರಕಿಸುವಲ್ಲಿ ಆದ್ಯತೆ ನೀಡಿದ್ದರು. ಇತ್ತೀಚಿನ ದಿನಗಳಲ್ಲಿ ಹೆಣ್ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಹತ್ಯೆ ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತ್ತಿದ್ದು, ಇಂತಹ ಪ್ರಕರಣಗಳ ವಿರುದ್ಧ ಧ್ವನಿ ಎತ್ತುವ ಮೂಲಕ ಅವರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯವಾಗಬೇಕು ಎಂದು ಹೇಳಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೆಟದಪ್ಪ ಮಾಳೇಕೊಪ್ಪ ಮಾತನಾಡಿ, ಸಮಾಜದಲ್ಲಿ ಹೆಣ್ಣು, ಗಂಡು ಎನ್ನುವ ತಾರತಮ್ಯ ಮಾಡದೆ ಹೆಣ್ಣು ಮಕ್ಕಳನ್ನು ಸಹ ಗಂಡು ಮಕ್ಕಳಂತೆ ಕಾಣುವ ಮನೋಭಾವನೆ ಮೂಡಿಬರಬೇಕು ಎಂದರು.ಪ್ರಾಚಾರ್ಯ ವಿರೂಪಾಕ್ಷಪ್ಪ ಹನುಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಸರ್ಕಾರಿ ಅಭಿಯೋಜಕ ರವಿ ಹುಣಸಿಮರದ, ಪಿಎಸ್‌ಐ ವಿಜಯಪ್ರತಾಪ, ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ, ಬಿ.ಎಂ. ಶಿರೂರು, ಎಸ್.ಎನ್. ಶ್ಯಾಗೋಟಿ, ಸಮಾಜ ಕಲ್ಯಾಣಾಧಿಕಾರಿ ಶಶಿಧರ ಸಕ್ರಿ, ವಕೀಲರಾದ ಎ.ಎಂ. ಪಾಟೀಲ, ಅಮರೇಶ ಎಚ್., ರಾಘವೇಂದ್ರ ಕೋಳಿಹಾಳ, ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರು ಹಾಗೂ ಶಿಕ್ಷಕರು, ವಿದ್ಯಾರ್ಥಿನಿಯರಿದ್ದರು.