ಸಾರಾಂಶ
ಹುಬ್ಬಳ್ಳಿ:
ಚುನಾವಣಾ ಕಾರ್ಯ ಯಶಸ್ವಿಯಾಗಿ ಪೂರ್ಣಗೊಳ್ಳುವಲ್ಲಿ ಪಿಆರ್‌ಒ ಮತ್ತು ಅವರ ತಂಡಗಳ ಕಾರ್ಯ ಮುಖ್ಯವಾಗಿದೆ ಎಂದು ಚುನಾವಣಾಧಿಕಾರಿ ದಿವ್ಯ ಪ್ರಭು ಹೇಳಿದರು.ಅವರು ಜಿಲ್ಲೆಯ ವಿವಿಧ ವಿಧಾನಸಭಾ ಮತಕ್ಷೇತ್ರಗಳಲ್ಲಿ ನಡೆಯುತ್ತಿರುವ ಪಿಆರ್‌ಒ ಮತ್ತು ಎಪಿಆರ್‌ಒ, ಪಿಒ 1, ಪಿಒ 2 ಅವರ ಎರಡನೇ ಹಂತದ ತರಬೇತಿ ಕೇಂದ್ರಗಳಿಗೆ ಬುಧವಾರ ಭೇಟಿ ನೀಡಿ, ನವಲಗುಂದ ಶಂಕರ ಕಾಲೇಜಿನಲ್ಲಿ ನಡೆದ ತರಬೇತಿಯಲ್ಲಿ ಭಾಗವಹಿಸಿ ಮಾತನಾಡಿದರು.
ತರಬೇತಿಯಲ್ಲಿ ಇವಿಎಂ ಮತ್ತು ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಸರಿಯಾದ ತಿಳಿವಳಿಕೆ ಪಡೆದುಕೊಳ್ಳಿ. ಯಾವುದೇ ರೀತಿಯಲ್ಲಿ ಚುನಾವಣಾ ಕರ್ತವ್ಯ ಲೋಪವಾಗದಂತೆ ಕರ್ತವ್ಯ ನಿರ್ವಹಿಸಿ. ಚುನಾವಣಾ ಪ್ರಕ್ರಿಯೆಯಲ್ಲಿ ಮತದಾನ ದಿನ ಬಹು ಮುಖ್ಯವಾಗಿದೆ. ಅಂದು ಮತಗಟ್ಟೆ ಅಧ್ಯಕ್ಷಾಧಿಕಾರಿಗಳು ಮತ್ತು ಅವರ ತಂಡ ಮೈಯಲ್ಲ ಕಣ್ಣಾಗಿ ಕೆಲಸ ಮಾಡಬೇಕು. ಚುನಾವಣಾ ಆಯೋಗ ನೀಡಿರುವ ಎಲ್ಲ ನಿಯಮಗಳನ್ನು ತಪ್ಪದೇ ಪಾಲಿಸಬೇಕು ಎಂದರು.ಮತದಾನ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ಚುನಾವಣಾ ಸಿಬ್ಬಂದಿಗಳಿಗೆ ಜಿಪಿಎಸ್ ಇರುವ ವಾಹನ ನೀಡಲಾಗುವುದು. ಗೊತ್ತುಪಡಿಸಿದ ವಾಹನದಲ್ಲಿ ಮತ್ತು ನಿಗದಿತ ಮಾರ್ಗದಲ್ಲಿ ಸಂಚರಿಸಬೇಕು. ಪೊಲೀಸ್ ಬಂದೋಬಸ್ತ್ ಇರುತ್ತದೆ. ಮತದಾನದ ಹಿಂದಿನ ದಿನ ಮತ್ತು ಮತದಾನ ಮುಗಿದ ನಂತರ ಮತಗಟ್ಟೆ ಸಿಬ್ಬಂದಿ ತಮಗೆ ಗೊತ್ತುಪಡಿಸಿದ ವಾಹನದಲ್ಲಿ ತೆರಳಬೇಕು. ಬೇರೆ ವಾಹನಗಳಲ್ಲಿ ತೆರಳಲು ಅವಕಾಶವಿಲ್ಲ. ಚುನಾವಣೆ ದಿನ ಯಾವುದೇ ಅಹಿತಕರ ಘಟನೆ ಜರುಗದಂತೆ ಮುನ್ನೆಚ್ಚರಿಕೆ ಇರಲಿ. ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ ಕರ್ತವ್ಯ ನಿರ್ವಹಿಸಿ ಎಂದು ಹೇಳಿದರು.
ನಂತರ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಅಂಚೆ ಮತದಾನ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತರಬೇತಿಗೆ ಬಂದಿರುವ ಸಿಬ್ಬಂದಿಗಳಿಗೆ ಊಟದ ವ್ಯವಸ್ಥೆ ಮಾಡಿರುವ ಸ್ಥಳಕ್ಕೆ ಭೇಟಿ ನೀಡಿದರು.ಈ ಸಂದರ್ಭದಲ್ಲಿ ನವಲಗುಂದ ಸಹಾಯಕ ಚುನಾವಣಾಧಿಕಾರಿ ದೇವರಾಜ ಆರ್, ತರಬೇತಿ ನೋಡಲ್ ಅಧಿಕಾರಿ ಚನ್ನಪ್ಪ ಎ, ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ, ರಾಜು ಮಾವರಕರ ಸೇರಿದಂತೆ ವಿವಿಧ ಅಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು ಇದ್ದರು.