ವಸತಿ ಯೋಜನೆ ಅನುಷ್ಠಾನದಲ್ಲಿ ನಿರ್ಲಕ್ಷ್ಯ ಮಾಡದಿರಿ: ಶಾಸಕ ದೇಶಪಾಂಡೆ

| Published : Nov 26 2024, 12:50 AM IST

ಸಾರಾಂಶ

ವಸತಿ ಯೋಜನೆಯು ಬಡವರ ಯೋಜನೆಯಾಗಿದೆ. ಈ ಯೋಜನೆಯಲ್ಲಿ ನಿರ್ಲಕ್ಷ್ಯ, ವಿಳಂಬ ಧೋರಣೆ ಸಲ್ಲದು ಎಂದು ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.

ಹಳಿಯಾಳ: ಅಧಿಕಾರಿಗಳು ಸಂಬಂಧಪಟ್ಟ ಇಲಾಖೆಯ ಮೇಲಧಿಕಾರಿಗಳು ಮತ್ತು ಸಂಬಂಧಿತ ಸಿಬ್ಬಂದಿಗಳೊಂದಿಗೆ ಸಂಪರ್ಕಿಸದೇ ಯಾವುದೇ ಪ್ರಸ್ತಾವನೆಯ ಫೈಲುಗಳು ಮುಂದೆ ಹೋಗುವುದಿಲ್ಲ. ಅದಕ್ಕಾಗಿ ಅಧಿಕಾರಿಗಳು ಆದಷ್ಟು ಮೇಲಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು ಪ್ರಸ್ತಾವನೆಗಳಿಗೆ ಮಂಜೂರಾತಿಯನ್ನು ಪಡೆಯಬೇಕೆಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆಯವರು ಸಲಹೆ ನೀಡಿದರು.

ಸೋಮವಾರ ಹಳಿಯಾಳದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಆಯೋಜಿಸಿದ್ದ ತಾಲೂಕು ಗ್ರಾಮೀಣ ವಸತಿ ಯೋಜನೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಸತಿ ಯೋಜನೆ ಸೇರಿದಂತೆ ಇತರೆ ಕಾಮಗಾರಿಗಳ ಯೋಜನೆಗಳ ಪ್ರಸ್ತಾವನೆಗಳು ಯಾವ ಹಂತದಲ್ಲಿವೆ? ನೀವು ಕಳಿಸಿದ ಫೈಲುಗಳ ಎಲ್ಲಿ ತಡೆ ಹಿಡಿಯಲಾಗಿದೆ ಎಂಬ ಸಮಗ್ರ ಮಾಹಿತಿಯನ್ನು ನನ್ನ ಗಮನಕ್ಕೆ ತನ್ನಿ ಎಂದರು.

ವಸತಿ ಯೋಜನೆಯು ಬಡವರ ಯೋಜನೆಯಾಗಿದೆ. ಈ ಯೋಜನೆಯಲ್ಲಿ ನಿರ್ಲಕ್ಷ್ಯ, ವಿಳಂಬ ಧೋರಣೆ ಸಲ್ಲದು ಎಂದರು. ಅಧಿಕಾರಿಗಳು ಮತ್ತು ಪಿಡಿಒಗಳು ಹೆಚ್ಚಿನ ಆಸಕ್ತಿ ವಹಿಸಿ ಕೆಲಸ ಮಾಡಬೇಕು ಎಂದರು.

ತಾಪಂ ಇಒ ಸತೀಶ್ ಆರ್. ಅವರು ತಾಲೂಕು ವಸತಿ ಯೋಜನೆ ಪ್ರಗತಿ ಮಂಡಿಸಿ, ತಾಲೂಕಿನಲ್ಲಿ 925 ಮನೆಗಳು ವಸತಿ ಯೋಜನೆಗೆ ಮಂಜೂರಾಗಿವೆ. ಅದರಲ್ಲಿ 861 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಉಳಿದ 64 ಮನೆಗಳನ್ನು ತಾಪಂಗೆ ವಾಪಸ್‌ ನೀಡಲಾಗಿದೆ ಎಂದರು.

ನಂತರ ಶಾಸಕರು ಆಯಾ ಗ್ರಾಪಂ ಪಿಡಿಒಗಳ ಬೇಡಿಕೆಯಂತೆ ಬಾಕಿ ಉಳಿದ ಮನೆಗಳನ್ನು ಹಂಚಿ, ರಾಜೀವ ಗಾಂಧಿ ವಸತಿ ಯೋಜನೆಯ ಎಂಡಿ ಅವರೊಂದಿಗೆ ಪೋನ್ ಮೂಲಕ ಚರ್ಚಿಸಿ ತಾಲೂಕಿನ ವಸತಿ ಯೋಜನೆಗೆ ತಕ್ಷಣ ಮಂಜೂರಾತಿಯನ್ನು ನೀಡಬೇಕೆಂದು ಸೂಚಿಸಿದರು. ಪಿಡಿಒಗಳು ತಮ್ಮ ಗ್ರಾಪಂ ವ್ಯಾಪ್ತಿಯ ವಸತಿ ಯೋಜನೆಯ ಪ್ರಗತಿಯನ್ನು ಮಂಡಿಸಿದರು.

ಸಭೆಯಲ್ಲಿ ಜೋಯಿಡಾ ದಾಂಡೇಲಿ ಇಒ ಭಾರತಿ, ಹಳಿಯಾಳ ತಹಸೀಲ್ದಾರ್‌ ಪ್ರವೀಣಕುಮಾರ ಹುಚ್ಚಣ್ಣನವರ, ದಾಂಡೇಲಿ ತಹಸೀಲ್ದಾರ್‌ ಶೈಲೇಶ್ ಪರಮಾನಂದ ಹಾಗೂ ಇತರ ಅಧಿಕಾರಿಗಳಿದ್ದರು. ಸ.ಪ್ರ.ದ. ಕಾಲೇಜಿನಲ್ಲಿ ಎಂಕಾಂ ಪ್ರವೇಶ ಆರಂಭ

ಯಲ್ಲಾಪುರ: ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ವಾಣಿಜ್ಯಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ೨೦೨೪- ೨೫ನೇ ಶೈಕ್ಷಣಿಕ ಸಾಲಿನ ಎಂಕಾಂ ಪ್ರಥಮ ವರ್ಷದ ತರಗತಿಗೆ ವಿಶ್ವವಿದ್ಯಾಲಯದಿಂದ ಕೌನ್ಸೆಲಿಂಗ್ ಮೂಲಕ ಹಲವು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.ಈಗ ವಿಶ್ವವಿದ್ಯಾಲಯವು ಕಾಲೇಜು ಹಂತದಲ್ಲಿ ಎಂಕಾಂ ಪ್ರಥಮ ವರ್ಷದ ತರಗತಿಗೆ ಪ್ರವೇಶ ನೀಡಲು ಅವಕಾಶ ಕಲ್ಪಿಸಿದ್ದು, ಎಂಕಾಂ ವ್ಯಾಸಂಗ ಮಾಡಲು ಆಸಕ್ತಿ ಇರುವ ವಿದ್ಯಾರ್ಥಿಗಳು ಡಿ. ೩ರ ಒಳಗಾಗಿ ಸ್ನಾತಕೋತ್ತರ ವಿಭಾಗದ ಸಂಚಾಲಕ ಶರತ್ ಕುಮಾರ್(ಮೊ. ೮೭೨೨೪೨೦೯೨೮) ಅವರನ್ನು ಸಂಪರ್ಕಿಸಲು ಕೋರಲಾಗಿದೆ ಎಂದು ಪ್ರಾಚಾರ್ಯ ಡಾ. ಆರ್.ಡಿ. ಜನಾರ್ದನ ತಿಳಿಸಿದ್ದಾರೆ.