ಅಭಿವೃದ್ಧಿ ಯೋಜನೆಗಳಿಂದ ಮೀನುಗಾರರಿಗೆ ನಷ್ಟವಾದರೆ ಸೂಕ್ತ ಪರಿಹಾರ ನೀಡಬೇಕು. ಸಣ್ಣ ದೋಣಿಗಳಿಗೆ ಪ್ರತ್ಯೇಕ ಜೆಟ್ಟಿ ನಿರ್ಮಿಸಬೇಕು.

ಹೊನ್ನಾವರ: ಕರಾವಳಿಯಲ್ಲಿ ಕೈಗೊಳ್ಳುವ ಅಭಿವೃದ್ಧಿ ಯೋಜನೆಗಳಿಂದ ಸಾಂಪ್ರದಾಯಿಕ ಹಾಗೂ ಸಣ್ಣ ಪ್ರಮಾಣದ ಮೀನುಗಾರರ ಬದುಕಿಗೆ ತೊಂದರೆಯಾಗಬಾರದು. ಯಾವುದೇ ಯೋಜನೆ ರೂಪಿಸುವ ಮುನ್ನ ಸ್ಥಳೀಯ ಮೀನುಗಾರರ ಅಭಿಪ್ರಾಯ ಪಡೆಯಬೇಕು ಎಂದು ಹೊನ್ನಾವರದಲ್ಲಿ ನಡೆದ ಮೀನುಗಾರರ ಸಮಾಲೋಚನಾ ಸಭೆಯಲ್ಲಿ ಆಗ್ರಹಿಸಲಾಯಿತು.ಮೀನುಗಾರರ ಸಮಾಲೋಚನಾ ಸಭೆಯಲ್ಲಿ ಮೀನುಗಾರರು ತಮ್ಮ ವಿವಿಧ ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ಹೊನ್ನಾವರದಲ್ಲಿ ಪ್ರಸ್ತಾಪಿತ ಬಂದರು ಯೋಜನೆಯಿಂದ ಸಾಂಪ್ರದಾಯಿಕ ಮೀನುಗಾರಿಕೆಗೆ ತೊಂದರೆಯಾಗುವ ಆತಂಕ ವ್ಯಕ್ತಪಡಿಸಿದರು. ಬಂದರು ನಿರ್ಮಾಣ, ಸಮುದ್ರದ ಹೂಳೆತ್ತುವಿಕೆ ಹಾಗೂ ತಡೆಗೋಡೆ ಕಾಮಗಾರಿಗಳಿಂದ ಮೀನುಗಾರಿಕಾ ಪ್ರದೇಶ ಮತ್ತು ದೋಣಿಗಳ ಸಂಚಾರಕ್ಕೆ ಅಡ್ಡಿಯಾಗಬಹುದು ಎಂದು ತಿಳಿಸಿದರು.ಅಭಿವೃದ್ಧಿ ಯೋಜನೆಗಳಿಂದ ಮೀನುಗಾರರಿಗೆ ನಷ್ಟವಾದರೆ ಸೂಕ್ತ ಪರಿಹಾರ ನೀಡಬೇಕು. ಸಣ್ಣ ದೋಣಿಗಳಿಗೆ ಪ್ರತ್ಯೇಕ ಜೆಟ್ಟಿ ನಿರ್ಮಿಸಬೇಕು. ಬಂದರು ಅಭಿವೃದ್ಧಿ ಸಮಿತಿಗಳಲ್ಲಿ ಮೀನುಗಾರರ ಪ್ರತಿನಿಧಿಗಳಿಗೂ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಕಾರವಾರ ನೌಕಾನೆಲೆಯ ಸುತ್ತಮುತ್ತಲಿನ ಸಮುದ್ರ ಪ್ರದೇಶಗಳಲ್ಲಿ ಮೀನುಗಾರಿಕೆಗೆ ವಿಧಿಸಿರುವ ನಿರ್ಬಂಧಗಳನ್ನು ಮರುಪರಿಶೀಲಿಸಬೇಕು. ಭದ್ರತೆಗೆ ತೊಂದರೆಯಾಗದಂತೆ ಸಾಂಪ್ರದಾಯಿಕ ಮೀನುಗಾರರಿಗೆ ಮೀನು ಹಿಡಿಯಲು ಅವಕಾಶ ನೀಡಬೇಕು. ನೌಕಾಪಡೆಯ ಅಭ್ಯಾಸ ಹಾಗೂ ವಿಶೇಷ ಸಂದರ್ಭಗಳಲ್ಲಿ ಮೀನುಗಾರಿಕೆಗೆ ನಿರ್ಬಂಧ ವಿಧಿಸುವುದರಿಂದ ಉಂಟಾಗುವ ಆದಾಯ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.ಬುಲ್ ಟ್ರಾಲಿಂಗ್ ಮತ್ತು ಲೈಟ್ ಫಿಶಿಂಗ್‌ನಂತಹ ವಿಧಾನಗಳಿಂದ ಮೀನು ಸಂಪತ್ತಿಗೆ ಹಾನಿಯಾಗುತ್ತಿದ್ದು, ಇವುಗಳಿಗೆ ಕಡಿವಾಣ ಹಾಕಬೇಕು. ಮೀನುಗಾರಿಕಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕಾರವಾರದ ಹಾರವಾಡದಲ್ಲಿರುವ ಫಿಶ್‌ಮೀಲ್ ಕಾರ್ಖಾನೆಯಿಂದ ಪರಿಸರಕ್ಕೆ ಹಾನಿಯಾಗುತ್ತಿರುವ ಆರೋಪದ ಬಗ್ಗೆ ತನಿಖೆ ನಡೆಸಬೇಕು ಎಂಬ ಬೇಡಿಕೆಯೂ ಕೇಳಿಬಂತು.ಸಭೆಯನ್ನು ಹೊನ್ನಾವರದ ಸ್ನೇಹಕುಂಜ ಟ್ರಸ್ಟ್ ಮತ್ತು ಬೆಂಗಳೂರಿನ ದಕ್ಷಿಣ ಫೌಂಡೇಶನ್ ಸಂಸ್ಥೆಗಳು ಆಯೋಜಿಸಿದ್ದವು. ನ್ಯಾಷನಲ್ ಫೆಡರೇಶನ್ ಆಫ್ ಸ್ಮಾಲ್- ಸ್ಕೇಲ್ ಫಿಶ್‌ವರ್ಕರ್ಸ್ ಹಾಗೂ ನ್ಯಾಷನಲ್ ಫಿಶ್‌ವರ್ಕರ್ಸ್ ಫೋರಮ್ ಬೆಂಬಲ ನೀಡಿದ್ದವು. ಕರ್ನಾಟಕ ಮೀನುಗಾರಿಕಾ ಇಲಾಖೆಯ ಪ್ರತಿನಿಧಿಗಳೂ ಭಾಗವಹಿಸಿದ್ದರು.

ಕರಾವಳಿಯ ಅಭಿವೃದ್ಧಿ ಯೋಜನೆಗಳು ಮೀನುಗಾರರ ಬದುಕು ಮತ್ತು ಪರಿಸರಕ್ಕೆ ಪೂರಕವಾಗಿರಬೇಕು. ಮೀನುಗಾರರ ಅಭಿಪ್ರಾಯಕ್ಕೆ ಆದ್ಯತೆ ನೀಡಿ, ಅವರ ಜೀವನೋಪಾಯ ಮತ್ತು ಭವಿಷ್ಯದ ಭದ್ರತೆಯನ್ನು ಕಾಪಾಡಬೇಕು ಎಂಬುದು ಸಭೆಯ ಒಟ್ಟಾರೆ ಒತ್ತಾಯವಾಗಿತ್ತು.