ನನ್ನನ್ನು ಟೀಕೆ ಮಾಡುವುದು ಜೆಡಿಎಸ್‌ನವರಿಗೆ ಚಾಳಿಯಾಗಿದೆ. ಅವರಂತೆ ನಾನು ಟೀಕೆ ಮಾಡುವುದಕ್ಕೆ ಹೋಗುವುದಿಲ್ಲ. ಅಭಿವೃದ್ಧಿ ಮೂಲಕವೇ ಉತ್ತರ ನೀಡುತ್ತೇನೆ. ನಾನು ೧೯೯೯ರಿಂದ ಚುನಾವಣೆಯಿಂದ ಸೋಲು-ಗೆಲುವು ಎರಡನ್ನೂ ಕಂಡಿದ್ದೇನೆ. ಸಮಾನವಾಗಿ ಸ್ವೀಕರಿಸಿದ್ದೇನೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ವಿರೋಧಿಗಳು ಮಾಡುವ ಟೀಕೆಗಳಿಗೆ ಕಾರ್ಯಕರ್ತರು ಹೆದರಬಾರದು, ಕಣ್ಣೀರು ಹಾಕಬಾರದು. ನಾನು ಮಾಡಿರುವ ಅಭಿವೃದ್ಧಿ ಕೆಲಸಗಳು ತಾಲೂಕಿನುದ್ದಕ್ಕೂ ಮಾತನಾಡುತ್ತಿವೆ. ಅವುಗಳನ್ನು ಮುಂದಿಟ್ಟುಕೊಂಡು ಧೈರ್ಯವಾಗಿ ತಕ್ಕ ಉತ್ತರ ನೀಡುವಂತೆ ಸಚಿವ ಎನ್.ಚಲುವರಾಯಸ್ವಾಮಿ ಕಾರ್ಯಕರ್ತರಿಗೆ ತಿಳಿಸಿದರು.ಪಟ್ಟಣದ ಮಂಡ್ಯ ವೃತ್ತದಲ್ಲಿ ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ ಸ್ವೀಕರಿಸಿ ಮಾತನಾಡಿ, ನನ್ನನ್ನು ಟೀಕೆ ಮಾಡುವುದು ಜೆಡಿಎಸ್‌ನವರಿಗೆ ಚಾಳಿಯಾಗಿದೆ. ಅವರಂತೆ ನಾನು ಟೀಕೆ ಮಾಡುವುದಕ್ಕೆ ಹೋಗುವುದಿಲ್ಲ. ಅಭಿವೃದ್ಧಿ ಮೂಲಕವೇ ಉತ್ತರ ನೀಡುತ್ತೇನೆ. ನಾನು ೧೯೯೯ರಿಂದ ಚುನಾವಣೆಯಿಂದ ಸೋಲು-ಗೆಲುವು ಎರಡನ್ನೂ ಕಂಡಿದ್ದೇನೆ. ಸಮಾನವಾಗಿ ಸ್ವೀಕರಿಸಿದ್ದೇನೆ. ಜನರು ಕೊಟ್ಟ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳದೆ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದೇನೆ. ಜನಸೇವೆ ಮಾಡುತ್ತಾ ಬಂದಿದ್ದೇನೆ. ಅದರ ಫಲದಿಂದಾಗಿಯೇ ನಾಲ್ಕು ಬಾರಿ ಸಚಿವನಾಗುವ ಅವಕಾಶ ಸಿಕ್ಕಿದೆ ಎಂದರು.
೧೯೯೯ರ ಚುನಾವಣೆಯಲ್ಲಿ ದೇವೇಗೌಡರು, ಕುಮಾರಸ್ವಾಮಿ, ಸಿದ್ದರಾಮಯ್ಯ, ಎಚ್.ಡಿ.ರೇವಣ್ಣ ಸೇರಿದಂತೆ ಎಲ್ಲರೂ ಸೋತಿದ್ದರು. ಮಂಡ್ಯದಲ್ಲಿ ಸ್ಪರ್ಧಿಸಿದ್ದ ನಾಲ್ಕು ಮಂದಿ ಠೇವಣಿ ಕಳೆದುಕೊಂಡಿದ್ದರು. ಆಗ ನನ್ನನ್ನು ಗೆಲ್ಲಿಸಿದ್ದ ನಾಗಮಂಗಲ ಕ್ಷೇತ್ರದ ಜನರು. ಇದು ಜನರು ಕೊಟ್ಟ ಭಿಕ್ಷೆಯೇ ಹೊರತು ಜನತಾದಳ ನೀಡಿದ ಭಿಕ್ಷೆಯಲ್ಲ ಎಂದು ನೇರವಾಗಿ ಹೇಳಿದರು.ನಾನು ಅಧಿಕಾರಕ್ಕಾಗಿ ಜನರು ಹಾಗೂ ನನ್ನ ಕಾರ್ಯಕರ್ತರ ಮನೆ ಬಾಗಿಲಿಗೆ ಹೋಗುತ್ತೇನೆಯೇ ಹೊರತು ಬೇರೆಯವರ ಮನೆ ಬಾಗಿಲಿಗೆ ಹೋಗುವುದಿಲ್ಲ. ಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ನಾಯಕನಾಗಲು ಸಾಧ್ಯವಿಲ್ಲ. ಜನಸೇವೆ ಮಾಡಿದಾಗಲಷ್ಟೇ ನಿಜವಾದ ನಾಯಕನಾಗಲು ಸಾಧ್ಯ. ನಾನು ಮಾಡಿರುವ ಕೆಲಸಗಳಿಗೆ ಕ್ಷೇತ್ರದಲ್ಲಿ ಸಾಕಷ್ಟು ಸಾಕ್ಷಿಗುಡ್ಡೆಗಳಿವೆ. ವಿರೋಧಿಗಳು ಮಾಡಿರುವ ಅಭಿವೃದ್ಧಿಯ ಒಂದು ಸಾಕ್ಷಿಗುಡ್ಡೆ ತೋರಿಸಲಿ ನೋಡೋಣ ಎಂದು ಸವಾಲು ಹಾಕಿದರು.
ನಾನಿನ್ನೂ ೧೫ ವರ್ಷ ರಾಜಕಾರಣದಲ್ಲಿರುತ್ತೇನೆ. ಕ್ಷೇತ್ರದ ಜನರ ಸೇವೆಯನ್ನು ಗುರಿಯಾಗಿಸಿಕೊಂಡು ನಾನು ಕೆಲಸ ಮಾಡುತ್ತೇನೆ. ಕ್ಷೇತ್ರದ ಜನರು ಮತ್ತು ಕಾರ್ಯಕರ್ತರು ನನಗೆ ಶಕ್ತಿಯನ್ನು ಕೊಡಬೇಕು. ಇಂದಿನ ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹ ಕಂಡು ವಿರೋಧಿ ಪಾಳಯದಲ್ಲಿ ನಡುಕ ಹುಟ್ಟಿದೆ. ಅವರಲ್ಲಿ ಕೆಲವರು ನಮ್ಮ ಕಡೆ ಬರುವುದಕ್ಕೂ ಮುಂದಾಗಿರಬಹುದು. ನಮ್ಮ ಕಡೆಗೆ ಬಂದರೆ ಅವರನ್ನು ಸ್ನೇಹದಿಂದಲೇ ಸ್ವೀಕರಿಸಿ. ನಿಮ್ಮ ಬೆಳವಣಿಗೆಗೆ ನಾನು ಜೊತೆಯಾಗಿರುತ್ತೇನೆ. ಅವರನ್ನು ಸೇರಿಸಿಕೊಂಡಾಕ್ಷಣ ನಿಮ್ಮನ್ನು ದೂರ ಮಾಡುತ್ತೇನೆಂಬ ಭಯ ಬೇಡ. ನಿಮಗೇ ಏನೇ ಸಮಸ್ಯೆ ಕಷ್ಟಗಳಿದ್ದರೂ ನಾನು ನಿಮ್ಮ ಜೊತೆಯಲ್ಲಿರುತ್ತೇನೆ ವಿಶ್ವಾಸದ ಮಾತುಗಳನ್ನಾಡಿದರು.ವೈಮನಸ್ಸು, ಭಿನ್ನಾಭಿಪ್ರಾಯ, ಅಸೂಯೆ, ದ್ವೇಷ ಎಲ್ಲವನ್ನೂ ಬದಿಗಿಟ್ಟು ಒಗ್ಗಟ್ಟಿನಿಂದ ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ನಮ್ಮಲ್ಲಿರುವ ದೋಷಗಳು ವಿರೋಧಿಗಳಿಗೆ ಲಾಭವಾಗಬಾರದು. ೨೦೨೮ರ ಚುನಾವಣೆಯಲ್ಲೂ ಇದೇ ರೀತಿಯ ಒಗ್ಗಟ್ಟನ್ನು ಪ್ರದರ್ಶಿಸಿ ನನ್ನ ಗೆಲುವಿಗೆ ಸಹಕಾರಿಯಾಗಿ ನಿಲ್ಲುವಂತೆ ಮನವಿ ಮಾಡಿದರು.
ಅಧಿಕಾರ ಸಿಗುವುದು ಮುಖ್ಯವಲ್ಲ. ಸಿಕ್ಕ ಅಧಿಕಾರನ್ನು ಉಪಯೋಗಿಸಿಕೊಂಡು ಅಭಿವೃದ್ಧಿ ಕೆಲಸಗಳನ್ನು ಮಾಡುವ ತಾಕತ್ತು ಪ್ರದರ್ಶಿಸಬೇಕು. ಆಗ ಅಧಿಕಾರ ಸಿಕ್ಕಿದ್ದಕ್ಕೂ ಸಾರ್ಥಕತೆ ದೊರಕುತ್ತದೆ. ನನಗೆ ಸಿಕ್ಕಿರುವ ಅಧಿಕಾರದ ಅವಕಾಶಗಳನ್ನು ಅಭಿವೃದ್ಧಿ ಕಾರ್ಯಗಳಲ್ಲಿ ಸಮರ್ಪಕವಾಗಿ ತೊಡಗಿಸಿದ್ದೇನೆ. ಇನ್ನಷ್ಟು ಶಕ್ತಿಯನ್ನು ಕೊಟ್ಟರೆ ಮತ್ತಷ್ಟು ಕೆಲಸ ಮಾಡುವುದಕ್ಕೆ ಸ್ಫೂರ್ತಿ ದೊರಕಲಿದೆ ಎಂದರು.ಇನ್ನು ಮುಂದೆ ಪ್ರತಿ ಶನಿವಾರ ಬೆಳಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ನಾಗಮಂಗಲ ಕ್ಷೇತ್ರದಲ್ಲೇ ಇರಲು ಸಂಕಲ್ಪ ಮಾಡಿದ್ದೇನೆ. ಇಡೀ ದಿನ ಕಾರ್ಯಕರ್ತರು ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸಲು ನಿರ್ಧರಿಸಿದ್ದೇನೆ. ಅಧಿವೇಶನ, ಸಂಪುಟ ಸಭೆ ಸೇರಿದಂತೆ ಇನ್ನಿತರ ಕೆಲಸದ ಒತ್ತಡಗಳಿದ್ದರೆ ಕೆಲವೊಮ್ಮೆ ಬರಲಾಗುವುದಿಲ್ಲ. ಉಳಿದಂತೆ ಕ್ಷೇತ್ರದಲ್ಲೇ ಇದ್ದು ಎಲ್ಲರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ, ಕೆಎಂಎಫ್ ನಿರ್ದೇಶಕ ಎನ್.ಅಪ್ಪಾಜಿಗೌಡ, ಸಚಿವರ ಸಹೋದರ ಲಕ್ಷ್ಮೀಕಾಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ರಾಜೇಶ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಮೂಡ್ಲಿಗೌಡ, ಸುನೀಲ್, ಮನ್‌ಮುಲ್ ಅಧ್ಯಕ್ಷ ಜವರೇಗೌಡ, ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಎಚ್.ಟಿ.ಕೃಷ್ಣೇಗೌಡ, ಸೇರಿದಂತೆ ಇತರರಿದ್ದರು.