ಹಾಲು, ಭೂಮಿ ‍ವಿಷಯಕ್ಕೆ ಕೈಹಾಕಬೇಡಿ

| Published : Jul 13 2024, 01:33 AM IST

ಸಾರಾಂಶ

ರಾಜ್ಯದ ರೈತರ, ದಲಿತರ, ಬಡವರ ಬೆಂಬಲದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಎಲ್ಲರಿಗೂ ದ್ರೋಹ ಬಗೆದಿದೆ. ಕೃಷಿ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆ ಹಿಂಪಡೆದಿಲ್ಲ. ಸರ್ಕಾರಕ್ಕೆರೈತರ ಮೇಲೆ ಕಾನೂನಿನ ಗದಾ ಪ್ರಹಾರ ಮಾಡುವುದನ್ನು ನಿಲ್ಲಿಸಬೇಕು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಹಾಲು ಖರೀದಿ ದರ ಇಳಿಕೆ ಹಾಗು ಕೃಷಿ ಭೂಮಿ ಸ್ವಾಧೀನ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಟ್ರ್ಯಾಕ್ಟರ್ ರ್‍ಯಾಲಿ ನಡೆಸಿ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿತು.

ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆಗೆ ಅವಕಾಶ ಕೊಡದ ಕಾರಣ ಜಿಲ್ಲಾಡಳಿತ ಭವನದ ಮುಂದೆ ಹಾಲಾಗಿದ್ದ ಬ್ಯಾರಿಕೇಡ್ ,ಗೇಟ್ ಗಳನ್ನು ಮತ್ತು ಬೆಂಗಾವಲಿಗೆ ನಿಯೋಜಿಸಿದ್ದ ಪೋಲೀಸರನ್ನು ಬಲವಂತದಿಂದ ತಳ್ಳಿದ ರೈತರು ಭವನದ ಆವರಣ ಪ್ರವೇಶಿಸಿದರು. ಈ ವೇಳೆ ಪೋಲಿಸರು ಮತ್ತು ರೈತರ ನಡುವೆ ವಾಗ್ವಾದ ಹಾಗೂ ತಳ್ಳಾಟ ನೂಕಾಟ ನಡೆದು ಕೆಲ ಕಾಲ ಪರಿಸ್ಥಿತಿ ಉದ್ವಿಗ್ನ ಗೊಂಡಿತ್ತು.

ಜಿಲ್ಲಾಡಳಿತ ಭವನಕ್ಕೆ ನುಗ್ಗಿದ ರೈತರು

ಬಂದೋಬಸ್ತಿಗೆ ನಿಯೋಜಿಸಿದ್ದ ಪೊಲೀಸರು ರೈತರನ್ನು ತಡೆಗಟ್ಟಲು ಸಾಕಷ್ಟು ಶ್ರಮಿಸಿದರು. ಆದರೆ ರೈತರ ಸಂಖ್ಯೆ ಹೆಚ್ಚಾಗಿದ್ದಿದ್ದುದರಿಂದ ರೈತರು ಜಿಲ್ಲಾಡಳಿತ ಭವನದ ಆವರಣ ಪ್ರವೇಶಿಸುವಲ್ಲಿ ಯಶಸ್ವಿಯಾದರು.

ಜಿಲ್ಲೆಯ ಶಿಡ್ಲಘಟ್ಟ ತಾಲೂಕು ಜಂಗಮಕೋಟೆ ಹೋಬಳಿ, ಚಿಕ್ಕಬಳ್ಳಾಪುರ ತಾಲೂಕು ನಂದಿ ಹೋಬಳಿ ಇಡೀ ಜಿಲ್ಲೆಯಲ್ಲಿ ರೈತರ ಫಲವತ್ತಾದ ಕೃಷಿ ಭೂಮಿಗಳನ್ನು ಕೈಗಾರಿಕಾ ಹೆಸರಿನಲ್ಲಿ ಭೂಸ್ವಾಧೀನ ಮಾಡುತ್ತಿರುವುದನ್ನು ವಿರೋಧಿಸಿ ಹಾಗೂ ಎಚ್ ಎನ್ ವ್ಯಾಲಿ ಮತ್ತು ಕೆ ಸಿ ವ್ಯಾಲಿ ನೀರು ಜಿಲ್ಲೆಯ ಎಲ್ಲಾ ಕೆರೆಗಳಿಗೂ ಸಮರ್ಪಕವಾಗಿ ಹರಿಸಬೇಕೆಂದು ರೈತರು ಒತ್ತಾಯಿಸಿದರು.

ಇನ್ಸ್‌ಪೆಕ್ಟರ್‌ ಮೇಲೆ ಹಲ್ಲೆಗೆ ಯತ್ನ

ರೈತರು ಮತ್ತು ಒಂದು ಟ್ರ್ಯಾಕ್ಟರ್ ಜಿಲ್ಲಾಡಳಿತ ಭವನದ ಆವರಣ ಪ್ರವೇಶಿಸಿದ ಸಂದರ್ಭದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಮಂಜುನಾಥ್ ರ ಮೇಲೆ ರೈತನೊಬ್ಬ ಕೈ ಮಾಡಲು ಮುಂದಾದಾಗ ಪೊಲೀಸರು ಆ ರೈತನನ್ನು ವಶಕ್ಕೆ ಪಡೆಯಲೆತ್ನಿಸಿದರು. ಆಗ ರೈತರು ಮತ್ತು ಪೊಲೀಸರ ನಡುವೆ ತಳ್ಳಾಟ ನೂಕಾಟ ನಡೆಯಿತು. ಈ ವೇಳೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ರಾಜ್ಯದ ರೈತರ, ದಲಿತರ, ಬಡವರ ಬೆಂಬಲದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಎಲ್ಲರಿಗೂ ದ್ರೋಹ ಬಗೆದಿದೆ. ಕೃಷಿ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆ ಹಿಂಪಡೆದಿಲ್ಲ. ಕೈಗಾರಿಕರಣದ ಹೆಸರಲ್ಲಿ ರೈತರ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಂದು ಉದ್ಯಮಿಗಳಿಗೆ ಮತ್ತು ಶ್ರೀಮಂತರಿಗೆ ಮಾರಾಟ ಮಾಡುವ ಬ್ರೋಕರ್ ಕೆಲಸವನ್ನು ಕೆಐಡಿಬಿ ಮಾಡುತ್ತಿದೆ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ರೈತರ ಮೇಲೆ ಕಾನೂನಿನ ಗದಾ ಪ್ರಹಾರ ಮಾಡುವುದನ್ನು ನಿಲ್ಲಿಸಬೇಕು ಎಂದರು.

ಹಾಲು, ಭೂಮಿಗೆ ಕೈಹಾಕಬೇಡಿಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಗ್ಯಾರಂಟಿ ನೀಡುವುದಾಗಿ ಅಧಿಕಾರಕ್ಕೆ ಬಂದಿರಿ, ಅರ್ಧಂಬರ್ಧ ಗ್ಯಾರಂಟೀ ನೀಡುತ್ತಿದ್ದೀರಿ. ಇದು ಸಾಧನೆ ಅಲ್ಲ, ನಿಮ್ಮದು ಜೀರೋ ಅಭಿವೃದ್ದಿಯಾಗಿದೆ. ರೈತರ ಬಗ್ಗೆ ಗಂಭೀರತೆ ಇರಲಿ, ರೈತರು ಹೇಳುವುದನ್ನು ಗಮನವಿಟ್ಟು ಕೇಳಿಕೊಳ್ಳಿ, ರೈತರ ಜಮೀನು ಮತ್ತು ಹಾಲಿನ ಹಣಕ್ಕೆ ಕೈ ಹಾಕ ಬೇಡಿ ರೈತರನ್ನು ಬದುಕಲು ಬಿಡಿ ಎಂದು ಆಕ್ರೋಷ ಹೊರ ಹಾಕಿದರು. ಮೂಡಾ: ಸಿಬಿಐ ತನಿಖೆಗೆ ವಹಿಸಿ

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪತ್ನಿಯ ಹೆಸರಲ್ಲಿ ಮೂಡಾದಲ್ಲಿ ಉಚಿತವಾಗಿ ಸೈಟು ಪಡೆದು ಯಾಕೆ ಹಗರಣ ಮಾಡಿ ಕೊಂಡಿದ್ದಾರೂ ಗೊತ್ತಿಲ್ಲಾ. ವಾಲ್ಮೀಕಿ ನಿಗಮದ ಹಗರಣದಲ್ಲಿ ದೊಡ್ಡ ಲೂಟಿ ಮಾಡಿದೆ. ಮೂಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಕಾರ್ಯಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ,ಉಪಾಧ್ಯಕ್ಷ ಹೊಸಕೋಟೆ ಕೆಂಚೇಗೌಡ,ರಾಜ್ಯ ಪ್ರಧಾನ ಕಾರ್ಯದರ್ಶಿ ಕೋಲಾರ ವೀರಭದ್ರ ಸ್ವಾಮಿ,ಜಿಲ್ಲಾಧ್ಯಕ್ಷ ಎಚ್.ಪಿ. ರಾಮನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಜಿಲ್ಲಾ ಉಪಾಧ್ಯಕ್ಷ ವೀರಾಪುರ ಮುನಿ ನಂಜಪ್ಪ,ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷ ಮರಳುಕುಂಟೆ ರಾಮಾಂಜನಪ್ಪ ,ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್ ,ಚಿಕ್ಕಬಳ್ಳಾಪುರ ತಾಲೂಕು ಕಾರ್ಯದರ್ಶಿ ನೆಲಮಾಕನಹಳ್ಳಿ ಗೋಪಾಲ್, ಚಿಕ್ಕಬಳ್ಳಾಪುರ ತಾಲೂಕು ಉಪಾಧ್ಯಕ್ಷ ಕೊಳವನಹಳ್ಳಿ ಅಶ್ವತಪ್ಪ, ಮತ್ತಿತರರು ಇದ್ದರು.