ಸಾರಾಂಶ
ಚನ್ನಪಟ್ಟಣ: ನಗರದ ಉಪನೋಂದಣಾಧಿಕಾರಿ ಕಚೇರಿಗೆ ಸೋಮವಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಶ್ಮಿ ಮಹೇಶ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳೆದ ವಾರವಷ್ಟೇ ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್ ಇಲ್ಲಿನ ಉಪನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸೋಮವಾರ ತಾಲೂಕಿನ ವಿವಿಧೆಡೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಶ್ಮಿ ಮಹೇಶ್ ಸಬ್‌ರಿಜಿಸ್ಟ್ರಾರ್ ಕಚೇರಿಗೂ ದಿಢೀರ್ ಎಂದು ಭೇಟಿ ನೀಡಿ ಪರಿಶೀಲಿಸಿದರು.ಉಪನೋಂದಣಾಧಿಕಾರಿ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ, ಕಡತಗಳ ವಿಲೇವಾರಿಯಲ್ಲಿ ವಿಳಂಬ, ಲಂಚಾವತಾರದ ಬಗ್ಗೆ ದೂರುಗಳು ಕೇಳಿ ಬಂದಿತ್ತು. ಇದರಿಂದ ಜನರಿಗೆ ಸಾಕಷ್ಟು ತೊಂದರೆಗಳು ಆಗುತ್ತಿರುವ ದೂರಗಳ ಬಂದ ಹಿನ್ನೆಲೆಯಲ್ಲಿ ಕಳೆದ ವಾರ ಜಿಲ್ಲಾಧಿಕಾರಿ ಅವಿನಾಶ್ ಮನೆನ್ ರಾಜೇಂದ್ರನ್ ದಿಢೀರ್ ಎಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಇದರೊಂದಿಗೆ ಅವರು ಕಚೇರಿಗೆ ಬಂದಿದ್ದ ಸಾರ್ವಜನಿಕರ ಸಮಸ್ಯೆ ಸಹ ಆಲಿಸಿದ್ದರು. ಈ ವೇಳೆ ಅವರಿಗೆ ಕಚೇರಿಯಲ್ಲಿರುವ ಸಮಸ್ಯೆಗಳು ಅವರ ಗಮನಕ್ಕೆ ಬಂದಿತ್ತು. ಇಲ್ಲಿ ಕಂಡು ಬಂದ ಸಮಸ್ಯೆಗಳ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಶ್ಮಿ ಮಹೇಶ್ ಸಬ್‌ರಿಜಿಸ್ಟರ್ ಕಚೇರಿಗೆ ಭೇಟಿ ನೀಡಿದ ಪರಿಶೀಲನೆ ನಡೆಸಿದ್ದಾರೆ.ಈ ಉಸ್ತುವಾರಿ ಕಾರ್ಯದರ್ಶಿ ಭೇಟಿ ವೇಳೆಯು ಸಹ ಕಚೇರಿಯ ಒಳಭಾಗದಲ್ಲಿ ಕೆಲ ಮಧ್ಯವರ್ತಿಗಳು ಓಡಾಡುತ್ತಿದ್ದು ಕಂಡು ಬಂದಿದೆ. ಇದನ್ನು ಗಮನಿಸಿ ರಶ್ಮಿ ಮಹೇಶ್, ಸಿಡಿಮಿಡಿಗೊಂಡಿದ್ದಾರೆ.
ಇದರೊಂದಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಮಾತನಾಡಿದ ರಶ್ಮಿ ಮಹೇಶ್, ಸಾರ್ವಜನಿಕರ ಕೆಲಸ ಕಾರ್ಯಗಳನ್ನು ತ್ವರಿತವಾಗಿ ಮಾಡಿಕೊಡಲು ಆದ್ಯತೆ ನೀಡಿ. ಯಾವುದೇ ಕಾರಣಕ್ಕೂ ಸಾರ್ವಜನಿಕರನ್ನು ಅಲೆದಾಡಿಸಬೇಡಿ. ಕಚೇರಿಯ ಕಿಷ್ಕಿಂದೆಯಿಂದ ಕೂಡಿದ್ದು, ಇದರಿಂದ ಸಮಸ್ಯೆಯಾಗುತ್ತಿರುವುದು ಅರಿವಿಗೆ ಬಂದಿದೆ. ಕಚೇರಿ ಸ್ಥಳಾಂತರದ ಸಂಬಂಧ ಪ್ರಸ್ತಾವನೆ ಇದ್ದು, ಇದನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ.ಇದಕ್ಕೂ ಮೊದಲು ತಾಲೂಕು ಪಿಟಿಎಸ್ ಬಳಿ ನಿರ್ಮಿಸಲು ಉದ್ದೇಶಿಸಿರುವ ಹೈಟೆಕ್ ರೇಷ್ಮೆ ಮಾರುಕಟ್ಟೆ ಜಾಗ, ಬೈರಾಪಟ್ಟಣ ಬಳಿಯ ಮಾವು ಸಂಸ್ಕರಣಾ ಘಟಕ ಹಾಗೂ ತಾಲೂಕು ಕಚೇರಿಗೂ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಶ್ಮಿ ಮಹೇಶ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ, ಸಿಇಓ ದಿಗ್ವಿಜಯ್ ಬೋಡ್ಕೆ, ತಹಸೀಲ್ದಾರ್ ಮಹೇಂದ್ರ ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.ಪೋಟೊ೨೯ಸಿಪಿಟಿ೨,೩:ಚನ್ನಪಟ್ಟಣದ ಉಪನೋಂದಣಾಧಿಕಾರಿ ಕಚೇರಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಶ್ಮಿ ಮಹೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.