ಜನಪಯೋಗಿ ಕಾರ್ಯಗಳನ್ನು ಮಾಡಿದಾಗಲೇ ಜನಮಾನಸದಲ್ಲಿ ಹಾಗೂ ಸಮಾಜದಲ್ಲಿ ಸ್ಮರಣೀಯವಾಗಿ ಬದುಕಲು ಸಾಧ್ಯ.

ಹಳಿಯಾಳದಲ್ಲಿ ಸ್ವಾಮಿ ವಿವೇಕಾನಂದ ಜಯಂತ್ಯುತ್ಸವ

ಕನ್ನಡಪ್ರಭ ವಾರ್ತೆ ಹಳಿಯಾಳ

ಜನಪಯೋಗಿ ಕಾರ್ಯಗಳನ್ನು ಮಾಡಿದಾಗಲೇ ಜನಮಾನಸದಲ್ಲಿ ಹಾಗೂ ಸಮಾಜದಲ್ಲಿ ಸ್ಮರಣೀಯವಾಗಿ ಬದುಕಲು ಸಾಧ್ಯ, ಅದಕ್ಕಾಗಿ ಜೀವಿತಾವಧಿಯಲ್ಲಿ ನಾವು ಮಾಡುವ ಕಾರ್ಯವು ಸ್ಮರಣೀಯವಾಗುವಂತೆ ಕಾಳಜಿ ಎಚ್ಚರವಹಿಸಿ ಹೆಜ್ಜೆಯಿಡಬೇಕು ಎಂದು ಬೆಂಗಳೂರಿನ ಗವಿಪುರಂನ ಗೋಸಾಯಿ ಮಹಾಸಂಸ್ಥಾನ ಮಠದ ಶ್ರೀ ಭವಾನಿ ದತ್ತ ಪೀಠದ ಮರಾಠ ಜಗದ್ಗುರು ಮಂಜುನಾಥ ಭಾರತಿ ಸ್ವಾಮೀಜಿ ಹೇಳಿದರು.

ಪಟ್ಟಣದ ಮರಾಠ ಭವನದಲ್ಲಿ ಜೀಜಾಮಾತಾ ಮಹಿಳಾ ಮಂಡಳ, ಗುರುಕುಲ ಪರಿವಾರ ಮತ್ತು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರಮಾತಾ ಜೀಜಾಬಾಯಿ ಹಾಗೂ ಸ್ವಾಮಿ ವಿವೇಕಾನಂದ ಜಯಂತ್ಯುತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸ್ವಾಮೀ ವಿವೇಕಾನಂದರ ಜೀವನ ಶೈಲಿ ಹಾಗೂ ಅವರು ನೀಡಿದ ಕರೆ ಉಠೊ-ಜಾಗೋ ಎಂಬ ಘೋಷಣೆಯು ನಮ್ಮನ್ನು ಕ್ರಿಯಾಶೀಲರನ್ನಾಗಿಸುವ ಮಂತ್ರವಾಗಲಿ ಎಂದ ಶ್ರೀಗಳು, ಪಾಶ್ಚಿಮಾತ್ಯ ಶೈಲಿ, ಸಂಸ್ಕೃತಿಗೆ ಮಾರು ಹೋಗಿರುವ ಯುವಜನಾಂಗವು ರೆಡಿಮೇಡ್ ಆಹಾರ, ಜಂಕ್ ಪುಡ್ ದಾಸರಾಗಿ ಬುದ್ಧಿನಾಶಕ್ಕೆ ಕಾರಣವಾಗುತ್ತಿದೆ. ಇದರಿಂದ ಯುವಜನತೆ ಇಂದು ಸಂಯಮ ಕಳೆದುಕೊಳ್ಳಲಾರಂಭಿಸಿದೆ. ಅದಕ್ಕಾಗಿ ಮಕ್ಕಳಿಗೆ ವಿದ್ಯೆಯ ಜೊತೆಗೆ ಸನಾತನ ಸಂಸ್ಕೃತಿಯ ಆಚಾರ, ವಿಚಾರಗಳ ಆಹಾರ ಪದ್ಧತಿಗಳ ಅರಿವನ್ನು ಮೂಡಿಸುವ ಕಾರ್ಯವನ್ನು ಪಾಲಕರು ತಮ್ಮ ಕುಟುಂಬದಲ್ಲಿ ಆರಂಭಿಸಬೇಕು ಎಂದರು.

ಮರಾಠ ಸಮಾಜದ ಯುವ ಮುಖಂಡ ಸಂಜು ಕೋಳುರ ಯುವ ಶಕ್ತಿ- ನಮ್ಮ ಸಮಾಜ ವಿಷಯದ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದ ಆಯೋಜಕ ಯೋಗರಾಜ ಮರಾಠೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿದ್ಯಾರ್ಥಿನಿಯರಾದ ಆದಿತಿ ರಾಮಕೃಷ್ಣ ಗೌಡ ಮತ್ತು ಅನುಪಮಾ ರಮೇಶ ಲೋಂಡಿಯವರಿಂದ ನೃತ್ಯಪ್ರದರ್ಶನ ನಡೆಯಿತು.

ಕಾರ್ಯಕ್ರಮದಲ್ಲಿ ದೆಹಲಿ ಹೊಟೇಲ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ರಾಷ್ಟ್ರಮಟ್ಟದಲ್ಲಿ ಎರಡು ಪ್ರಶಸ್ತಿ ಪಡೆದಿರುವ ಹಳಿಯಾಳದ ಯುವ ಉದ್ಯಮಿ ವಾಸವಿ ಸಮಾಜದ ಪ್ರಮುಖರಾದ ರಾಘವೇಂದ್ರ ಆನೆಗುಂದಿಯವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜೀಜಾಮಾತಾ ಮಹಿಳಾ ಸಂಘದ ಅಧ್ಯಕ್ಷೆ ಮಂಗಲಾ ಕಶೀಲಕರ, ಉಪನ್ಯಾಸಕ ಶಿಕ್ಷಣ ಚಿಂತಕ ಶಾಂತಾರಾಮ ಚಿಬುಲಕರ ಮಾತನಾಡಿದರು. ಶಿಕ್ಷಕರ ಸಂಘಟನೆ, ಸರ್ಕಾರಿ ನೌಕರರ ಸಂಘ, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಮತ್ತು ವಿವಿಧ ಸಂಘಟನೆಗಳ ಪ್ರಮುಖರು ಆಗಮಿಸಿದ್ದರು. ಶಿಕ್ಷಕಿ ಮತ್ತು ಸಾಹಿತಿ ಭಾರತಿ ನಲವಡೆ ಹಾಗೂ ಸುಧಾ ಲೋಂಡಿ ಹಾಗೂ ಮಹಾದೇವ ಗೌಡ ಕಾರ್ಯಕ್ರಮ ನಿರ್ವಹಿಸಿದರು.