ಮತ ಎಣಿಕೆ ಕಾರ್ಯ ಎಚ್ಚರಿಕೆಯಿಂದ ನಿರ್ವಹಿಸಿ: ಡಿಸಿ

| Published : May 29 2024, 12:53 AM IST

ಸಾರಾಂಶ

ಹಿಂದೆ ಎಷ್ಟೇ ಬಾರಿ ಮತ ಎಣಿಕೆಯ ಕರ್ತವ್ಯ ನಿರ್ವಹಿಸಿದ್ದರೂ ಪ್ರತಿಯೊಂದು ಚುನಾವಣೆ ಮತ್ತು ಮತ ಎಣಿಕೆ ಕಾರ್ಯವು ಒಂದಕ್ಕಿಂತ ವಿಭಿನ್ನವಾಗಿದ್ದು, ಸಿಬ್ಬಂದಿ ಮತ ಎಣಿಕೆ ಕಾರ್ಯವನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಬೇಕು ಎಂದು ಡಿಸಿ ಗಂಗೂಬಾಯಿ ಮಾನಕರ ತಿಳಿಸಿದರು.

ಕಾರವಾರ: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಜೂ. 4ರಂದು ನಡೆಯುವ ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಮತ ಎಣಿಕೆ ಸಂದರ್ಭದಲ್ಲಿ ಯಾವುದೇ ತಪ್ಪುಗಳಾಗದಂತೆ ತಮ್ಮ ಕರ್ತವ್ಯವನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.

ಕುಮಟಾದ ಹಾಲಕ್ಕಿ ಒಕ್ಕಲಿಗರ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಮತ ಎಣಿಕೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಚುನಾವಣೆಯ ಅತ್ಯಂತ ಪ್ರಮುಖ ಮತ್ತು ಅಂತಿಮ ಹಂತವಾದ ಮತ ಎಣಿಕೆ ಕಾರ್ಯವು ಇಡೀ ಚುನಾವಣೆ ಪ್ರಕ್ರಿಯೆಯ ಮಹತ್ವದ ಘಟ್ಟವಾಗಿದ್ದು, ಕ್ಷೇತ್ರದ ಜನಪ್ರತಿಯೊಬ್ಬರನ್ನು ಆಯ್ಕೆ ಮಾಡುವ ಈ ಪ್ರಕ್ರಿಯೆಯಲ್ಲಿ ಮತ ಎಣಿಕೆ ಸಿಬ್ಬಂದಿ ಯಾವುದೇ ಗೊಂದಲ, ಆತುರ, ಒತ್ತಡಗಳಿಗೆ ಒಳಗಾಗದೇ, ನಿಖರವಾದ ಫಲಿತಾಂಶವನ್ನು ನೀಡಲು ಅನುಕೂಲವಾಗುವಂತೆ ಅತ್ಯಂತ ಜವಾಬ್ದಾರಿಯುತವಾಗಿ ಮತ ಎಣಿಕೆ ಕಾರ್ಯವನ್ನು ನಿರ್ವಹಿಸಬೇಕು ಎಂದರು.

ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಿರುವ ಸಿಬ್ಬಂದಿ ತಮಗೆ ನಿಗದಿಪಡಿಸಿದ ಅವಧಿಗೆ ಸರಿಯಾಗಿ ಮತ ಎಣಿಕೆ ಕೇಂದ್ರಕ್ಕೆ ಹಾಜರಾಗಿ ತಮ್ಮ ಟೇಬಲ್ ಬಳಿ ಕರ್ತವ್ಯ ನಿರ್ವಹಿಸುವಂತೆ ಹಾಗೂ ಪ್ರತಿ ಹಂತದ ಮತ ಎಣಿಕೆಯ ವಿವರಗಳನ್ನು ಕೇಂದ್ರದಲ್ಲಿ ಹಾಜರಿರುವ ಅಭ್ಯರ್ಥಿಗಳು ಮತ್ತು ಅವರ ಏಜೆಂಟರ್‌ಗಳಿಗೆ ಯಾವುದೇ ಗೊಂದಲಕ್ಕೆ ಒಳಗಾಗದಂತೆ ತಿಳಿಸುವುದರ ಮೂಲಕ ಸಕಾಲದಲ್ಲಿ ನಿಖರ ಫಲಿತಾಂಶ ನೀಡಲು ಅನುಕೂಲವಾಗುವಂತೆ ಕಾರ್ಯ ನಿರ್ವಹಿಸಬೇಕು.

ಹಿಂದೆ ಎಷ್ಟೇ ಬಾರಿ ಮತ ಎಣಿಕೆಯ ಕರ್ತವ್ಯ ನಿರ್ವಹಿಸಿದ್ದರೂ ಪ್ರತಿಯೊಂದು ಚುನಾವಣೆ ಮತ್ತು ಮತ ಎಣಿಕೆ ಕಾರ್ಯವು ಒಂದಕ್ಕಿಂತ ವಿಭಿನ್ನವಾಗಿದ್ದು, ಸಿಬ್ಬಂದಿ ಮತ ಎಣಿಕೆ ಕಾರ್ಯವನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಬೇಕು. ಮತಗಳನ್ನು ಸ್ಪಷ್ಟವಾಗಿ ಕ್ರೋಡಿಕರಿಸಿ, ಅಭ್ಯಥಿಗಳು ಮತ್ತು ಅವರ ಏಜೆಂಟರುಗಳಿಂದ ಯಾವುದೇ ಆಕ್ಷೇಪಣೆಗಳು ಬಾರದಂತೆ ಎಚ್ಚರವಹಿಸುವಂತೆ ಹಾಗೂ ಯಾವುದೇ ರೀತಿಯ ಗೊಂದಲಗಳು ಕಂಡುಬಂದಲ್ಲಿ ತಕ್ಷಣ ಆಯಾ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಗಮನಕ್ಕೆ ತರಬೇಕು ಎಂದರು.

ಮತ ಎಣಿಕೆ ಕಾರ್ಯದ ಕುರಿತಂತೆ ಚುನಾವಣಾ ಆಯೋಗ ನೀಡಿರುವ ನಿರ್ದೇಶನಗಳ್ನು ಎಲ್ಲ ಸಿಬ್ಬಂದಿ ಚಾಚೂ ತಪ್ಪದೇ ಪಾಲಿಸುವಂತೆ ತಿಳಿಸಿದ ಅವರು, ಇವಿಎಂಗಳಲ್ಲಿನ ಮತ ಎಣಿಕೆ ಮತ್ತು ಪೋಸ್ಟಲ್ ಬ್ಯಾಲೆಟ್‌ಗಳ ಎಣಿಕೆಯ ಕುರಿತಂತೆ ಯಾವುದೇ ಗೊಂದಲಗಳಿದ್ದಲ್ಲಿ ತರಬೇತಿ ಸಮಯದಲ್ಲಿ ಬಗೆಹರಿಸಿಕೊಳ್ಳುವಂತೆ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಇದ್ದರು.