ಮೊಬೈಲ್‌ ದಾಸ್ಯದಿಂದ ಹೊರಬರಲು ಯೋಗ ಮಾಡಿ

| Published : May 13 2024, 12:03 AM IST

ಸಾರಾಂಶ

ಶಿಕ್ಷಣದೊಂದಿಗೆ ಮಕ್ಕಳಿಗೆ ಸಂಸ್ಕಾರವನ್ನೂ ಕಲಿಸುವ ಅಗತ್ಯವಿದೆ. ಯುವಜನತೆ ಮಾದಕ ವ್ಯಸನಿಗಳಾಗುವುದನ್ನು ತಪ್ಪಿಸಲು ಅವರು ನಿರಂತರ ಯೋಗಾಭ್ಯಾಸದಲ್ಲಿ ಪಾಲ್ಗೊಳ್ಳಲು ಪ್ರೇರಣೆ ನೀಡಬೇಕು.

ಕನ್ನಡಪ್ರಭ ವಾರ್ತೆ ಮುಳಬಾಗಿಲುಆಧುನಿಕತೆ ಹೆಸರಿನಲ್ಲಿ ಯುವ ಜನತೆ ಮೊಬೈಲ್‌ಗೆ ದಾಸರಾಗಿ ಮಾನಸಿಕ ಸ್ವಾಸ್ಥ್ಯವನ್ನು ಕಳೆದುಕೊಳ್ಳುತ್ತಿರುವುದು ಕಳವಳಕಾರಿಯಾಗಿದ್ದು, ಇದನ್ನು ತಪ್ಪಿಸಲು ನಿತ್ಯ ಯೋಗಾಭ್ಯಾಸದಲ್ಲಿ ಪಾಲ್ಗೊಳ್ಳಲು ಪೋಷಕರು ಪ್ರೇರಣೆ ನೀಡಬೇಕು ಎಂದು ಡಿವೈಎಸ್ಪಿ ನಂದಕುಮಾರ್ ಅಭಿಪ್ರಾಯಪಟ್ಟರು. ನಗರದ ಶ್ರೀ ಶಾರದಾ ವಿದ್ಯಾಪೀಠದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮಕ್ಕಳ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಶಿಕ್ಷಣಕ್ಕಿಂತ ಸಂಸ್ಕಾರ ಮುಖ್ಯ

ಮಕ್ಕಳು ಶಿಸ್ತು, ಸಹನೆಯಿಂದ ಉತ್ತಮ ಶಿಕ್ಷಣವನ್ನು ಪಡೆದು ಜೀವನ ರೂಪಿಸಿಕೊಂಡು ಭವಿಷ್ಯದ ಸುಭದ್ರ ದೇಶವನ್ನು ನಿರ್ಮಿಸಬಹುದು ಎಂದ ಅವರು, ಶಿಕ್ಷಣಕ್ಕಿಂತ ಸಂಸ್ಕಾರ ಇಂದು ಅಗತ್ಯವಾಗಿದೆ, ವಿದ್ಯಾವಂತರೇ ಇಂದು ಹೆಚ್ಚಿನ ಸಂಖ್ಯೆಯಲ್ಲಿ ದಾರಿ ತಪ್ಪುತ್ತಿರುವುದನ್ನು ಕಾಣುತ್ತಿದ್ದೇವೆ, ಭಯೋತ್ಪಾದನೆ ನಡೆಸಿ ಸಿಕ್ಕಿಬಿದ್ದವರಲ್ಲಿ ಅನೇಕರು ಇಂಜಿನಿಯರಿಂಗ್ ಓದಿದವರು ಎಂಬುದು ಆತಂಕಕಾರಿ ವಿಷಯ ಎಂದರು.ಆದ್ದರಿಂದ ಶಿಕ್ಷಣದೊಂದಿಗೆ ಮಕ್ಕಳಿಗೆ ಸಂಸ್ಕಾರವನ್ನೂ ಕಲಿಸುವ ಅಗತ್ಯವಿದೆ ಎಂದ ಅವರು, ಯುವಜನತೆ ಮಾದಕ ವ್ಯಸನಿಗಳಾಗುವುದನ್ನು ತಪ್ಪಿಸಲು ಅವರು ನಿರಂತರ ಯೋಗಾಭ್ಯಾಸದಲ್ಲಿ ಪಾಲ್ಗೊಳ್ಳಲು ಪ್ರೇರಣೆ ನೀಡಬೇಕು, ಯೋಗದಿಂದ ಮಕ್ಕಳಲ್ಲಿ ಉತ್ತಮ ಆರೋಗ್ಯದ ಜತೆಗೆ ಒಳ್ಳೆಯ ನಡತೆಯನ್ನೂ ಕಾಣಬಹುದಾಗಿದೆ ಎಂದರು.ನಿತ್ಯ ಯೋಗಾಭ್ಯಾಸ ಮಾಡಿ

ಸೌಪರ್ಣಿಕ ವಲಯದ ಸಂಚಾಲಕ ಸುಂದರಾಚಾರಿ ಅಣ್ಣ ಮಾತನಾಡಿ, ನಿತ್ಯ ಯೋಗಾಭ್ಯಾಸದಿಂದ ಅರಿಷಡ್ವರ್ಗಗಳನ್ನು ನಿಗ್ರಹಿಸಿ ಆತ್ಮ ಸಾಕ್ಷಾತ್ಕಾರವನ್ನು ಹೊಂದಬಹುದು, ಆದ್ದರಿಂದ ಸಮಿತಿಯು ನಾಗರಿಕರಿಗೆ ಅಕ್ಷರ ಆರೋಗ್ಯ ಆಧ್ಯಾತ್ಮವನ್ನು ಉಚಿತವಾಗಿ ನೀಡುತ್ತಿದೆ. ಸಮಿತಿಯ ಸೌಲಭ್ಯಗಳನ್ನು ಬಳಸಿಕೊಂಡು ವಿಶಾಲ ಮನೋಭಾವನೆ, ಸದ್ಭಕ್ತಿಯೊಂದಿಗೆ ಸತ್ಪ್ರಜೆಗಳಾಗಬೇಕು ಮಾನಸಿಕ ಒತ್ತಡ ನಿರ್ಮೂಲನೆ ಮಾಡಲು ತಾಳ್ಮೆ ಸಹನೆ ಹೊಂದಲು ಗೌತಮ ಬುದ್ಧ ಹಾಗೂ ಶಿಷ್ಯ ಆನಂದನ ಪ್ರಸಂಗವನ್ನು ವಿವರಿಸಿದರು. ಶಿಬಿರದಲ್ಲಿ ಪಡೆದ ಶಿಕ್ಷಣವನ್ನು ಜೀವನದಲ್ಲಿ ಅನುಷ್ಠಾನಗೊಳಿಸಿಕೊಳ್ಳಬೇಕು ಎಂದರು.ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಡಾ ಜನಾರ್ಧನ್ ಅಣ್ಣ ಮಾತನಾಡಿ, ಮಗು ಕುಟುಂಬದ ಸದಸ್ಯರನ್ನು ಗೌರವಿಸಿ ಆರೋಗ್ಯ ಕಾಪಾಡಿಕೊಂಡು ನೈಜ ಸಾತ್ವಿಕ ಆಹಾರವನ್ನು ಸೇವಿಸಿ ಆದರ್ಶ ಜೀವನವನ್ನು ನಡೆಸಿದಾಗ ಆತ್ಮವಿಶ್ವಾಸ ತಾನಾಗಿಯೇ ಸೃಷ್ಟಿಯಾಗುತ್ತದೆ ಎಂದರು. ಸೇವಾ ಮನೋಬಾವ ಬೆಳೆಸಿಕೊಳ್ಳಿ

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಹಿರಿಯರಾದ ನಾರಾಯಣಪ್ಪ ಅಣ್ಣ ಮಾತನಾಡಿ, ಪ್ರತಿಯೊಬ್ಬರು ಸೇವಾ ಮನೋಭಾವನೆಯನ್ನು ಹೊಂದಿ ಪರೋಪಾಕಾರಿಯಾದಾಗ ಮಾತ್ರ ನಮ್ಮ ಜನ್ಮಕ್ಕೆ ಸಾರ್ಥಕತೆ ಸಿಗುತ್ತದೆ ಎಂದರು. ಪ್ರಾಂತ ಸಂಚಾಲಕ ಮಾರ್ಕಂಡಯ್ಯ, ಜಿಲ್ಲಾ ಸಂಚಾಲಕ ರಮೇಶ್, ಬಾಗೇಪಲ್ಲಿ ತಾಲೂಕು ಸಂಚಾಲಕ ಮುನಿರಾಜ, ಮುಖ್ಯ ಶಿಕ್ಷಕಿ ಚೈತ್ರ ಇದ್ದರು.