ಯಾರೋ ಕಟ್ಟಿದ ಗೂಡಲ್ಲಿ ಸರ್ಕಾರ ನಡೆಸೋಕೆ ನೀವೆ ಬೇಕಾ

| Published : Aug 25 2025, 01:00 AM IST

ಸಾರಾಂಶ

ದೇವನಹಳ್ಳಿ: ವಿಧಾನಸಭೆಯ ಕಲಾಪದಲ್ಲಿ ಮುಖ್ಯಮಂತ್ರಿಗಳು ಜನತಾದಳದ ಬಗ್ಗೆ ಲಘುವಾಗಿ ಮಾತಾಡಿದ್ದಕ್ಕೆ ಪ್ರತಿ ಉತ್ತರವಾಗಿ ನಮ್ಮ ಮನೆಯ ಮುಂದೆ ಅಧಿಕಾರಕ್ಕಾಗಿ ಸಹಕಾರ ಕೇಳಿ ಬಂದವರು ನೀವು ಈಗ ಜನತಾಪಕ್ಷವೇ ಒಂದೆರಡು ಸೀಟುಗಳು ಪಡೆದು ಕಣ್ಮರೆಯಾಗಲಿದೆ ಎಂದಿದ್ದೀರಿ. ಆದರೆ ಯಾರೋ ಕಟ್ಟಿದ ಗೂಡಲ್ಲಿ ಆಡಳಿತ ಮಾಡೋಕೆ ನೀವೆ ಬೇಕಾ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು.

ದೇವನಹಳ್ಳಿ: ವಿಧಾನಸಭೆಯ ಕಲಾಪದಲ್ಲಿ ಮುಖ್ಯಮಂತ್ರಿಗಳು ಜನತಾದಳದ ಬಗ್ಗೆ ಲಘುವಾಗಿ ಮಾತಾಡಿದ್ದಕ್ಕೆ ಪ್ರತಿ ಉತ್ತರವಾಗಿ ನಮ್ಮ ಮನೆಯ ಮುಂದೆ ಅಧಿಕಾರಕ್ಕಾಗಿ ಸಹಕಾರ ಕೇಳಿ ಬಂದವರು ನೀವು ಈಗ ಜನತಾಪಕ್ಷವೇ ಒಂದೆರಡು ಸೀಟುಗಳು ಪಡೆದು ಕಣ್ಮರೆಯಾಗಲಿದೆ ಎಂದಿದ್ದೀರಿ. ಆದರೆ ಯಾರೋ ಕಟ್ಟಿದ ಗೂಡಲ್ಲಿ ಆಡಳಿತ ಮಾಡೋಕೆ ನೀವೆ ಬೇಕಾ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು.

ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ "ಡಿಜಿಟಲ್ ಸದಸ್ಯತ್ವ ನೋಂದಣಿ ಮತ್ತು ಜನರೊಂದಿಗೆ ಜನತಾದಳ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆಯ ಸಂಪೂರ್ಣ ಆಶೀರ್ವಾದ ಪಡೆದ ಕಾಂಗ್ರೆಸ್ ಸರ್ಕಾರ ಸಮರ್ಪಕವಾಗಿ ಪಂಚ ಗ್ಯಾರಂಟಿಗಳನ್ನು ನೀಡಲು ವಿಫಲವಾಗಿದ್ದಾರೆ. ಮುಖ್ಯಮಂತ್ರಿ ಸೀಟು ಭದ್ರವಾಗಿರುವರೆಗೂ ಮಾತ್ರ ಕಾಂಗ್ರೆಸ್. ಬಡವರ ಪರ ದಲಿತರ ಪರ ಎನ್ನುವ ಕಾಂಗ್ರೆಸ್ ಸರ್ಕಾರ ಎಸ್‌ಟಿಪಿ/ಟಿಎಸ್‌ಪಿ ಹಣ ನುಂಗಿ ನೀರು ಕುಡಿದಿದೆ. ವಾಲ್ಮೀಕಿ ನಿಗಮದ ಹಣ ೮೭ ಕೋಟಿ ಲಪಟಾಯಿಸಿದ್ದಾರೆ. ಒಟ್ಟಾರೆ ಕಾಂಗ್ರೆಸ್ ಪಕ್ಷದಲ್ಲಿರುವ ಸಮಸ್ಯೆಗಳನ್ನು ಮೊದಲು ಸರಿಪಡಿಸಿಕೊಳ್ಳಿ ಎಂದು ಹೇಳಿದರು.

ಚುನಾವಣೆಯ ಏಳು ಬೀಳು ಏನೇ ಇರಲಿ ನನ್ನನ್ನು ನಂಬಿದ ಕಾರ್ಯಕರ್ತರನ್ನು ಎಂದಿಗೂ ಕೈ ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ನಿಮ್ಮ ಹೋರಾಟದ ಫಲ ದೊರೆಯಲಿದೆ. ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಮಿತ್ರ ಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಆಡಳಿತಕ್ಕೆ ತರಬೇಕು ಎಂಬ ಆಶಯದೊಂದಿಗೆ ಹೋರಾಡುತ್ತಿರುವ ನಿಸರ್ಗ ನಾರಾಯಣಸ್ವಾಮಿಯವರಿಗೆ ಅಭಿನಂದನೆ ತಿಳಿಸಿ ಶುಭ ಹಾರೈಸಿದರು.

ರಾಜ್ಯದ ಜನತೆಗೆ ಮುಖ್ಯವಾದ ವಿಷಯ ಕುಮಾರಣ್ಣ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ನಿಜ, ಆತಂಕ ಬೇಡ. ಈಗ ಸಂಪೂರ್ಣ ಆರೋಗ್ಯವಾಗಿದ್ದಾರೆ. ಅವರ ಪರವಾಗಿ ರಾಜ್ಯದ ಜನತೆಯ ಸೇವೆ ಮಾಡಲು ಹೋರಾಡಲು ನಾನು ಸದಾ ಸಿದ್ದ. ಅವರ ೧೪ ತಿಂಗಳ ಕಾರ್ಯವೈಖರಿ ನಾಡಿನ ಜನರ ಹೃದಯದಲ್ಲಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಬಹುಮತದ ಮೂಲಕ ಶಕ್ತಿ ತುಂಬಲಿದ್ದಾರೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಕುಮಾರಣ್ಣ ಅವರ ಪರವಾಗಿ ರಾಜ್ಯಾದ್ಯಂತ ಪಕ್ಷ ಸಂಘಟನೆಗಾಗಿ ಪರ್ಯಟನೆ ಮಾಡುತ್ತಿರುವ ನಿಖಿಲ್ ಕುಮಾರಸ್ವಾಮಿಗೆ ನಾವೆಲ್ಲರೂ ಸೇರಿ ಸಹಕರಿಸೋಣ. ಈ ಜನಸಾಗರವೇ ನಮಗೆ ಶಕ್ತಿ, ಮುಂಬರುವ ಚುನಾವಣೆಗಳಲ್ಲಿ ಮತ್ತೇ ಬಹುಮತ ನೀಡುವುದರ ಮೂಲಕ ಶಕ್ತಿ ತುಂಬಲಿದ್ದಾರೆ ಎಂದು ಹೇಳಿದರು.

ನಿಖಿಲ್ ಕುಮಾರಸ್ವಾಮಿಗೆ ಕ್ಷೇತ್ರದ ಗಣ್ಯರಿಂದ ಬೃಹತ್ ಹಣ್ಣಿನ ಹಾರಗಳಿಂದ ಅದ್ದೂರಿ ಸ್ವಾಗತ ಕೋರಿ ಕೆಂಪೇಗೌಡ ಸರ್ಕಲ್‌ನಿಂದ ಮೈದಾನದ ವೇದಿಕೆವರೆಗೂ ಮೆರವಣಿಗೆ ನಡೆಸಲಾಯಿತು. ವೇದಿಕೆಯಲ್ಲಿ ನಿಖಿಲ್‌ಗೆ ಜೆಡಿಎಸ್‌ ಕಾರ್ಯಕರ್ತರು ಬೆಳ್ಳಿ ಕತ್ತಿ ನೀಡಿ ಗೌರವಿಸಿದರು.

ಸಮಾವೇಶದಲ್ಲಿ ಮಾಜಿ ಸಚಿವ ಪುಟ್ಟರಾಜು, ಶಿಡ್ಲಘಟ್ಟ ಶಾಸಕ ರವಿಕುಮಾರ್, ಮಾಜಿ ಶಾಸಕ ಶ್ರೀನಿವಾಸಮೂರ್ತಿ, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ತಾಲೂಕು ಅಧ್ಯಕ್ಷ ಆರ್.ಮುನೇಗೌಡ , ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ, ಜಿಲ್ಲಾ ಸಂಚಾಲಕ ವಕೀಲ ಮುನಿರಾಜು, ಯುವ ಘಟಕದ ಅಧ್ಯಕ್ಷ ಟಿ.ರವಿ, ಕುಂದಾಣ ಹೋಬಳಿ ಅಧ್ಯಕ್ಷ ಮನಗೊಂಡನಹಳ್ಳಿ ಜಗದೀಶ್, ವಿಜಯಪುರ ಹೋಬಳಿ ಪುರ ಕೃಷ್ಣಪ್ಪ, ತೂಬಗೆರೆ ಹೋಬಳಿ ಜಗನ್ನಾಥ್ ಆಚಾರಿ, ಮುಖಂಡರಾದ ಹುರುಳಗುರ್ಕಿ ಶ್ರೀನಿವಾಸ್, ಕಾಮೇನಹಳ್ಳಿ ರಮೇಶ್, ಮಂಡಿಬೆಲೆ ರಾಜಣ್ಣ, ಮಂಜುನಾಥ್ ಹಾಗೂ ಸಹಸ್ರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

೨೪ ದೇವನಹಳ್ಳಿ ೦೧ ಚಿತ್ರಸುದ್ದಿ:

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿಗೆ ಕ್ಷೇತ್ರದ ಗಣ್ಯರ ವತಿಯಿಂದ ಬೃಹತ್ ಹಣ್ಣಿನ ಹಾರಗಳಿಂದ ಅದ್ಧೂರಿ ಸ್ವಾಗತ ಕೋರಿ ಕೆಂಪೇಗೌಡ ಸರ್ಕಲ್‌ನಿಂದ ಮೈದಾನದ ವೇದಿಕೆಯವರೆಗೂ ಮೆರವಣಿಗೆ ನಡೆಸಲಾಯಿತು.

೨೪ ದೇವನಹಳ್ಳಿ ೦೨ ಚಿತ್ರಸುದ್ದಿ :

ದೇವನಹಳ್ಳಿಯಲ್ಲಿ ಜನರೊಂದಿಗೆ ಜನತಾದಳ ಕಾರ್ಯಕ್ರಮಕ್ಕೆದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಉದ್ಘಾಟಿಸಿದರು.