ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಲೋಕಸಭಾ ಚುನಾವಣೆಗೆ ಮತದಾನ ದಿನ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ನಿಯೋಜಿತ ಎಲ್ಲ ಅಧಿಕಾರಿ ಸಿಬ್ಬಂದಿ ಅತೀ ಜಾಗೃಕತೆಯಿಂದ ಕಾರ್ಯನಿರ್ವಹಿಸಬೇಕು. ಯಾವುದೇ ಲೋಪಗಳಿಗೆ ಆಸ್ಪದ ನೀಡದಂತೆ ನಿಗಾವಹಿಸುವಂತೆ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಜಿಪಂ ಸಿಇಒ ರಾಹುಲ ಶಿಂಧೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು, ಸೆಕ್ಟೆರ್ ಅಧಿಕಾರಿ ಹಾಗೂ ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳ ವೀಡಿಯೋ ಸಂವಾದ ಸಭೆಯಲ್ಲಿ ಮಾತನಾಡಿದ ಅವರು, ಮತದಾನ ದಿನ ಸೆಕ್ಟೆರ್ ಅಧಿಕಾರಿಗಳ ಪಾತ್ರ ಬಹುಮುಖ್ಯವಾಗಿರುತ್ತದೆ. ಮತದಾನ ಪ್ರಾರಂಭದಿಂದ ಮುಕ್ತಾಯದವರೆಗೂ ಸೆಕ್ಟರ್ ಅಧಿಕಾರಿಗಳು ಅತೀ ಜಾಗೃಕತೆಯಿಂದ ಚುನಾವಣಾ ಆಯೋಗದ ನಿರ್ದೇಶನಗಳನ್ವಯ ಕಾರ್ಯನಿರ್ವಹಿಸಬೇಕು. ಅಂದಿನ ವರದಿಗಳನ್ನು ನಿಗದಿತ ಸಮಯಕ್ಕೆ ಒದಗಿಸಬೇಕು. ಸೆಕ್ಟರ್ ಅಧಿಕಾರಿಗಳಿಗೆ ವಾಹನದ ಜೊತೆಗೆ ಶಸ್ತ್ರ ಸಜ್ಜಿತ ಪೊಲೀಸ್ ಭದ್ರತೆ ಒದಗಿಸುವಂತೆ ತಿಳಿಸಿದರು.
ಚುನಾವಣೆಗೆ ಸಂಬಂಧಿಸಿದ ದೂರುಗಳು ಬಂದಲ್ಲಿ ಕೂಡಲೇ ಕ್ರಮಕೈಗೊಳ್ಳಬೇಕು. ಚುನಾವಣೆಯ 72 ಹಾಗೂ 24 ಗಂಟೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೆಕು. ಮತಗಟ್ಟೆಗಳಲ್ಲಿ ಅಗತ್ಯ ಪೊಲೀಸ್ ಸಿಬ್ಬಂದಿ ನಿಯೋಜನೆ ಕುರಿತು ಚರ್ಚಿಸಿದರು.ಮತಗಟ್ಟೆ ಅಧಿಕಾರಿಗಳು, ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಆಯೋಜಿಸಲಾಗುವ ತರಬೇತಿ ದಿನದಂದು ಎಲ್ಲ ಅಧಿಕಾರಿ, ಸಿಬ್ಬಂದಿ ಕಡ್ಡಾಯವಾಗಿ ಮತದಾನ ಮಾಡುವಂತೆ ಅಗತ್ಯ ಕ್ರಮ ವಹಿಸಬೇಕು. ತರಬೇತಿ ಕೇಂದ್ರದಲ್ಲಿ ತೆರೆಯಲಾಗುವ ಮತಗಟ್ಟೆಗಳಲ್ಲಿ ಮತದಾನದ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಚುನಾವಣೆ ಕಾರ್ಯಕ್ಕೆ ನಿಯೋಜಿತ ಅಗತ್ಯ ಸೇವೆಗಳಡಿ ಬರುವ ಅಧಿಕಾರಿ, ಸಿಬ್ಬಂದಿಗೆ ಮತದಾನ ಮಾಡಲು ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಅವಕಾಶ ಕಲ್ಪಿಸಲಾಗಿರುತ್ತದೆ ಎಂದು ತಿಳಿಸಿದರು.
ವಿಕಲಚೇತನರು ಮತಗಟ್ಟೆಗಳಿಗೆ ಆಗಮಿಸಲು ವಾಹನ, ಗಾಲಿ ಕುರ್ಚಿ ಸೌಲಭ್ಯಗಳ ಕುರಿತು ಮನವಿ ಸಲ್ಲಿಸಿದಲ್ಲಿ ಅಂತಹ ವಿಕಲಚೇತನ ಮತದಾರರಿಗೆ ಸೌಲಭ್ಯ ಒದಗಿಸಿ. ಈ ಕುರಿತು ಎಂಆರ್ ಡಬ್ಲ್ಯೂಗಳಿಗಂದ ವರದಿ ಪಡೆದು ವಿಕಲಚೇತನ ಮತದಾರರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸುವಂತೆ ತಿಳಿಸಿದರು.ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಕರ ಮಾತನಾಡಿ, ಚುನಾವಣೆಗೆ ಸಂಬಂಧಿಸಿದಂತೆ ಮಸ್ಟರಿಂಗ್ ಹಾಗೂ ಡಿ ಮಸ್ಟರಿಂಗ್ ಕಾರ್ಯಗಳು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳ್ಳಬೇಕು. ಸಹಾಯಕ ಚುನಾವಣಾಧಿಕಾರಿಗಳು ಪ್ರತಿ 2 ಗಂಟೆಗಳ ವರದಿಯನ್ನು ನಿಗದಿತ ಕಾಲಮಿತಿಯೊಳಗೆ ಸಲ್ಲಿಸಬೇಕು. ಮತದಾನ ದಿನದಂದು ಸೆಕ್ಟರ್ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವುದರ ಮೂಲಕ ತಮ್ಮ ವ್ಯಾಪ್ತಿಯ ಎಲ್ಲ ಮತಗಟ್ಟೆಗಳಿಗೆ ತಲುಪಿರುವ ಹಾಗೂ ನಿರ್ಗಮಿಸಿರುವ ಕುರಿತು ವರದಿ ಸಲ್ಲಿಸಬೇಕು ಎಂದು ಸೆಕ್ಟರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಚಿಕ್ಕೋಡಿ ಲೋಕಸಭಾ ಚುನಾವಣಾಧಿಕಾರಿಗಳ ಕಚೇರಿಯ ಸಹಾಯಕ ಚುನಾವಣಾಧಿಕಾರಿ ಬಸವರಾಜ ಅಡವಿಮಠ, ಚಿಕ್ಕೋಡಿ ಉಪವಿಭಾಗಾಧಿಕಾರಿ ಮೆಹಬೂಬಿ, ಚಿಕ್ಕೋಡಿ ತಹಸೀಲ್ದಾರ್ ಚಿದಂಬರ ಕುಲಕರ್ಣಿ ಸೇರಿದಂತೆ ಚಿಕ್ಕೋಡಿ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು, ತಹಸೀಲ್ದಾರ್‌ರು, ಸೆಕ್ಟರ್ ಅಧಿಕಾರಿಗಳು, ವಿವಿಧ ಸಮಿತಿಯ ನೋಡಲ್ ಅಧಿಕಾರಿಗಳು ಹಾಜರಿದ್ದರು.