ವೈದ್ಯೆ ಹತ್ಯೆ: ನಿರ್ಮಲ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಜಾಥಾ

| Published : Aug 20 2024, 12:47 AM IST

ವೈದ್ಯೆ ಹತ್ಯೆ: ನಿರ್ಮಲ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಜಾಥಾ
Share this Article
  • FB
  • TW
  • Linkdin
  • Email

ಸಾರಾಂಶ

ಕೋಲ್ಕತ್ತಾದಲ್ಲಿ ನಡೆದಿರುವ ವೈದ್ಯ ವಿದ್ಯಾರ್ಥಿನಿ ಮೇಲಿನ ದೌರ್ಜನ್ಯ, ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ಭದ್ರಾವತಿ ಹಳೇನಗರದ ನಿರ್ಮಲ ಆಸ್ಪತ್ರೆಯಿಂದ ಮೇಣದ ಬತ್ತಿಯೊಂದಿಗೆ ನಗರದ ಮುಖ್ಯ ರಸ್ತೆಗಳಲ್ಲಿ ಜಾಥಾ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಭದ್ರಾವತಿ

ಪಶ್ಚಿಮ ಬಂಗಾಳ ಕೊಲ್ಕತ್ತಾ ನಗರದಲ್ಲಿ ನಡೆದಿರುವ ವೈದ್ಯ ವಿದ್ಯಾರ್ಥಿನಿ ಮೇಲಿನ ದೌರ್ಜನ್ಯ, ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ಹಳೇನಗರದ ನಿರ್ಮಲ ಆಸ್ಪತ್ರೆಯಿಂದ ಮೇಣದ ಬತ್ತಿಯೊಂದಿಗೆ ನಗರದ ಮುಖ್ಯ ರಸ್ತೆಗಳಲ್ಲಿ ಜಾಥಾ ನಡೆಸಲಾಯಿತು.ಪೊಲೀಸ್ ನಗರ ವೃತ್ತ ನಿರೀಕ್ಷಕ ಶ್ರೀಶೈಲ ಕುಮಾರ್ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಆಸ್ಪತ್ರೆ ಆವರಣದಿಂದ ಆರಂಭಗೊಂಡ ಜಾಥಾ ತಾಲೂಕು ಕಚೇರಿ ರಸ್ತೆ ಮೂಲಕ ರಂಗಪ್ಪ ವೃತ್ತ, ಮಾಧವಚಾರ್ ವೃತ್ತ, ಹಾಲಪ್ಪ ವೃತ್ತ, ಅಂಬೇಡ್ಕರ್ ವೃತ್ತ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮತ್ತು ಹೊಸ ಸೇತುವೆ ಮಾರ್ಗವಾಗಿ ಪುನಃ ಆಸ್ಪತ್ರೆ ಆವರಣ ತಲುಪಿತು.

ಆಸ್ಪತ್ರೆ ವೈದ್ಯರು, ಸಿಬ್ಬಂದಿ, ನರ್ಸಿಂಗ್ ವಿದ್ಯಾರ್ಥಿಗಳು ಫಲಕ ಹಿಡಿದು ಘೋಷಣೆ ಹಾಕುವ ಮೂಲಕ ಸಾಗಿದರು. ನಂತರ ಮಾತನಾಡಿದ ಆಸ್ಪತ್ರೆಯ ಸುಪೀರಿಯರ್ ವಿಲ್ಮಾ, ವೈದ್ಯಕೀಯ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲೂ ಈ ಕ್ಷೇತ್ರದಲ್ಲಿ ೨೪ ಗಂಟೆಗಳ ಕರ್ತವ್ಯ ನಿರ್ವಹಣೆ ಅನಿವಾರ್ಯವಾಗಿದೆ. ಮಹಿಳಾ ಸಿಬ್ಬಂದಿ, ವೈದ್ಯರು ಮತ್ತು ದಾದಿಯರು ರಾತ್ರಿ ಪಾಳಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಪ್ರಕರಣ ಇದೀಗ ದೇಶಾದ್ಯಂತ ಭಯದ ವಾತಾವರಣ ಉಂಟು ಮಾಡಿದೆ. ರಾತ್ರಿ ಪಾಳಯದಲ್ಲಿ ಕರ್ತವ್ಯ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಮಹಿಳೆಯರಿಗೆ ಹೆಚ್ಚಿನ ರಕ್ಷಣೆ ಅಗತ್ಯವಿದೆ ಎಂದರು.

ಆಸ್ಪತ್ರೆಯ ಆರೋಗ್ಯ ಅಧಿಕಾರಿ ಸಿಸ್ಟರ್ ಗ್ಲಾಡಿಸ್ ಪಿಂಟೊ, ಆಡಳಿತ ಅಧಿಕಾರಿ ಹಿಲರಿ, ನರ್ಸಿಂಗ್ ಮೇಲ್ವಿಚಾರಕಿ ವಿನ್ಸಿ, ಹಿರಿಯ ವೈದ್ಯೆ ರೆಜಿನಾ, ದಾದಿಯರಾದ ಶೋಭನ, ತೆರೇಸಾ, ಬರ್ನಿ, ನಿರ್ಮಲ, ಮಂಜು, ಡಯಾನ ಸೇರಿದಂತೆ ಸಿಬ್ಬಂದಿ, ನರ್ಸಿಂಗ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.