ವೈದ್ಯೆ ರೇಪ್‌ : ಚಿಕ್ಕಮಗಳೂರಿನಲ್ಲಿ ಮೌನ ಪ್ರತಿಭಟನಾ ಮೆರವಣಿಗೆ

| Published : Aug 25 2024, 01:49 AM IST

ವೈದ್ಯೆ ರೇಪ್‌ : ಚಿಕ್ಕಮಗಳೂರಿನಲ್ಲಿ ಮೌನ ಪ್ರತಿಭಟನಾ ಮೆರವಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಕೋಲ್ಕಾತ್ತದ ಮೆಡಿಕಲ್‌ ಕಾಲೇಜಿನ ತರಬೇತಿ ವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಇನ್ನರ್‌ ವ್ಹೀಲ್‌ ಕ್ಲಬ್‌ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಶನಿವಾರ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಮಹಿಳೆಯರು ತಾಲೂಕು ಕಚೇರಿಯಿಂದ ಆಜಾದ್‍ ಪಾರ್ಕ್ ವೃತ್ತದವರೆಗೆ ಶಾಂತಿಯುತ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿ ನೊಂದ ಯುವತಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

- ಕಪ್ಪುವಸ್ತ್ರ ಧರಿಸಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು । ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಲು ಒತ್ತಾಯ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕೋಲ್ಕಾತ್ತದ ಮೆಡಿಕಲ್‌ ಕಾಲೇಜಿನ ತರಬೇತಿ ವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಇನ್ನರ್‌ ವ್ಹೀಲ್‌ ಕ್ಲಬ್‌ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಶನಿವಾರ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಮಹಿಳೆಯರು ತಾಲೂಕು ಕಚೇರಿಯಿಂದ ಆಜಾದ್‍ ಪಾರ್ಕ್ ವೃತ್ತದವರೆಗೆ ಶಾಂತಿಯುತ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿ ನೊಂದ ಯುವತಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಮೌನ ಮೆರವಣಿಗೆಯಲ್ಲಿ ಭಾರತೀಯ ವೈದ್ಯಕೀಯ ಸಂಘ, ಟೌನ್ ಮಹಿಳಾ ಸಮಾಜ, ಒಕ್ಕಲಿಗರ ಮಹಿಳಾ ಸಂಘ, ಚಿಕ್ಕಮಗಳೂರು ರೌಂಡ್ ಟೇಬಲ್, ಶ್ರೀ ವಾಸವಿ ಮಹಿಳಾ ಮಂಡಳಿ, ವಿಪ್ರ ಮಹಿಳಾ ಘಟಕ, ಕನ್ನಡಸೇನೆ, ರೈತ ಸಂಘ, ಗ್ರೀನ್ ಇಂಡಿಯಾ ಸೇರಿದಂತೆ 28 ಸಂಘಟನೆಗಳ ಮುಖಂಡರು ಕಪ್ಪು ವಸ್ತ್ರ ಧರಿಸಿ ಮೆರವಣಿಗೆಯಲ್ಲಿ ಸಾಗಿ ವೈದ್ಯೆ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಇನ್ನರ್ ವ್ಹೀಲ್‌ ಕ್ಲಬ್‌ ಅಧ್ಯಕ್ಷೆ ಶಾಲಿನಿ ನಾಗೇಶ್, ಹತ್ಯೆಗೊಳಗಾದ ವೈದ್ಯೆ ಭವಿಷ್ಯದಲ್ಲಿ ಉನ್ನತ ವ್ಯಾಸಂಗ ಪೂರೈಸಿ ಅತ್ಯುತ್ತಮ ವೈದ್ಯರಾಗುವ ಆಕಾಂಕ್ಷೆ ಇದೀಗ ನೂಚ್ಚು ನೂರಾಗಿದೆ. ಈ ಪ್ರಕರಣದಿಂದ ಹೆಣ್ಣು ಮಕ್ಕಳ ಪಾಲಕರು ವೈದ್ಯಕೀಯ ವೃತ್ತಿಗೆ ತಮ್ಮ ಮಕ್ಕಳನ್ನು ಸೇರ್ಪಡೆಗೊಳಿಸಲು ಭಯ ಭೀತರಾಗಿದ್ದಾರೆ ಎಂದು ಹೇಳಿದರು.

ಮೊಂಬತ್ತಿ ಹಚ್ಚಿ ಶ್ರದ್ದಾಂಜಲಿ ಕೋರುವ ಬದಲು ಅತ್ಯಾಚಾರಿಗಳನ್ನು ಸಜೀವ ದಹನ ಮಾಡಬೇಕು. ದಯೆ, ದಾಕ್ಷಿಣ್ಯಕ್ಕೆ ಎಡೆ ಮಾಡಿಕೊಡಬಾರದು. ರಾಜಕೀಯ ರಾಜೀ ಮಾಡದೇ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಲು ವಿಳಂಭ ಧೋರಣೆ ಅನುಸರಿಸಿದರೆ ಬಂಗಾಳದಲ್ಲಿ ನಡೆದಿರುವ ಪ್ರಕರಣ ಮುಂದೊಂದು ದಿನ ರಾಜ್ಯದಲ್ಲಿ ಸಂಭವಿಸಲಿದೆ ಎಂದು ಎಚ್ಚರಿಕೆ ನೀಡಿದರು.

ಪ್ರಸ್ತುತ ಹೆಣ್ಣು ಮಕ್ಕಳು ಸ್ನೇಹಿತರ ಜೊತೆ ಓಡಾಡುವ ವೇಳೆ ಜಾಗೃತರಾಗಿರಬೇಕು. ಪಾಲಕರು ಕೂಡಾ ಮಕ್ಕಳು ಎಲ್ಲಿದ್ದಾರೆಂಬ ಮಾಹಿತಿಯನ್ನು ಅರಿಯಲು ಮುಂದಾಗಬೇಕು. ಹೆಣ್ಣು ಮಕ್ಕಳ ಜಾಗೃತೆ ದೃಷ್ಟಿಯಿಂದ ಪ್ರತಿನಿತ್ಯ ಯಾರೊಂದಿಗೆ ಭೇಟಿ ಮಾಡುತ್ತಾರೆ ಎಂಬ ಸಂಪೂರ್ಣ ಮಾಹಿತಿಯನ್ನು ಮಕ್ಕಳ ಪಾಲಕರು ಹೊಂದಬೇಕು ಎಂದು ಹೇಳಿದರು.

ಇನ್ನರ್‌ ವ್ಹೀಲ್‌ ಕ್ಲಬ್‌ ಉಪಾಧ್ಯಕ್ಷೆ ನಯನಾ ಸಂತೋಷ್ ಮಾತನಾಡಿ, ಹೆಣ್ಣು ಮಕ್ಕಳು ಮೊಬೈಲ್‍ಗಳಲ್ಲಿ ಆ್ಯಪ್‍ಗಳನ್ನು ಡೌನ್‍ ಲೋಡ್ ಮಾಡುವಂತೆ, ಪೊಲೀಸ್ ಇಲಾಖೆ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಬೇಕು, ಜೊತೆಗೆ ಮೊಬೈಲ್‍ನ ಲೋಕೇಶನ್‍ನನ್ನು ಆನ್‍ ಮಾಡಿ ಕೊಂಡರೆ ಸಂಕಷ್ಟದ ಸಮಯದಲ್ಲಿ ಕಂಡು ಹಿಡಿಯಲು ಸಾಧ್ಯ ಎಂದು ಹೇಳಿದರು.

ಈ ಅತ್ಯಾಚಾರ ಪ್ರಕರಣದಿಂದ ದೇಶದ ಹೆಣ್ಣು ಮಕ್ಕಳು ವೈದ್ಯಕೀಯ ವೃತ್ತಿ ಎಂದರೆ ಗಾಬರಿಗೊಂಡಿದ್ದಾರೆ. ಸಣ್ಣಪುಟ್ಟ ಬದುಕು ಕಟ್ಟಿಕೊಂಡು ತಜ್ಞ ವೈದ್ಯರಾಗಬೇಕೆಂಬ ಕನಸಿನ ಹೆಜ್ಜೆಯನ್ನಿಡುವ ಹೆಣ್ಣು ಮಕ್ಕಳು ಪಾಲಕರನ್ನು ಆಸೆ ಈಡೇರಿಸಲು ಮುಂದಾಗುತ್ತಾರೆ. ಈ ಅಮಾನವೀಯ ಕೃತ್ಯದಿಂದ ಅದೆಷ್ಟೋ ವೈದ್ಯಕೀಯ ಸೇವೆಯಲ್ಲಿ ನಿರತರಾದವರು ವೃತ್ತಿಯನ್ನೇ ತ್ಯಜಿಸುತ್ತಿದ್ದಾರೆ ಎಂದರು.

ಇನ್ನರ್‌ ವ್ಹೀಲ್‌ ಕ್ಲಬ್‌ ಸದಸ್ಯೆ ಶರ್ಮಿಳಾ ಮಾತನಾಡಿ, ಹೆಣ್ಣಿಗೆ ಚ್ಯುತಿ ತರುವ ಅತ್ಯಾಚಾರಿಗಳನ್ನು ಹೊರ ದೇಶದಂತೆ ನಡು ರಸ್ತೆಯಲ್ಲಿ ಶಿಕ್ಷೆಗೆ ಗುರಿಪಡಿಸಿದರೆ, ಯಾವುದೇ ವ್ಯಕ್ತಿ ಇಂಥ ಪೈಶಾಚಿಕ ಕೃತ್ಯ ಎಸಗಲು ಸಾಧ್ಯವಿಲ್ಲ. ಅಲ್ಲದೇ ನೊಂದ ವೈದ್ಯರ ಸಾಂತ್ವಾನಕ್ಕೆ ಪ್ರತಿಭಟನೆ ನಡೆಸುತ್ತಿರುವುದು ಬೇಸರದ ಸಂಗತಿ. ಹೀಗಾಗಿ ಈ ರೀತಿ ಕೃತ್ಯ ಮರುಕಳಿಸದಂತೆ ಸರ್ಕಾರಗಳು ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಇನ್ನರ್‌ ವ್ಹೀಲ್‌ ಕ್ಲಬ್‌ ಸದಸ್ಯೆ ಸಂಗೀತಾ ಮಾತನಾಡಿ, ಕಣ್ಣಿಗೆ ಕಾಣುವಷ್ಟು ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಆದೆಷ್ಟೋ ಪ್ರಕರಣಗಳು ಕಣ್ಮರೆಯಾಗಿವೆ. ಈಚೆಗೆ ಹಕ್ಕಿಪಿಕ್ಕಿ ಜನಾಂಗದ ಯುವತಿ ಮೇಲೆ ಅತ್ಯಾಚಾರವಾಗಿದೆ. ಅದರಂತೆ ಅನೇಕ ಪ್ರಕರಣಗಳು ಅಲ್ಲಲ್ಲಿಯೇ ಮುಚ್ಚಿ ಹೋಗುತ್ತಿದೆ. ಇದರಿಂದ ಶೋಷಣೆಗೆ ಒಳಗಾಗುವುದು ಕೇವಲ ಹೆಣ್ಣು. ಹೀಗಾಗಿ ಹೆಣ್ಣಿನ ರಕ್ಷಣೆಯನ್ನು ಕೇವಲ ಸರ್ಕಾರ ಮಾತ್ರವಲ್ಲದೇ ಹೆತ್ತವರು ಕಾಳಜಿ ಹೊಂದಬೇಕು ಎಂದು ಹೇಳಿದರು.

ಇದೇ ವೇಳೆ ಮೌನ ಮೆರವಣಿಗೆ ಆಜಾದ್‍ ಪಾರ್ಕ್ ವೃತ್ತದಲ್ಲಿ ಸಮಾವೇಶಗೊಂಡ ಬಳಿಕ ಟಿಎಂಎಸ್ ಶಾಲಾ ವಿದ್ಯಾರ್ಥಿ ಗಳಿಂದ ವೈದ್ಯ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವ ಸಂಭವಿಸುವ ಅನಾಹುತಗಳ ಬಗ್ಗೆ ಸಾಂಕೇತಿಕವಾಗಿ ನಾಟಕದ ಮೂಲಕ ಪ್ರದರ್ಶನಗೊಳಿಸಿದರು.

ಈ ಸಂದರ್ಭದಲ್ಲಿ ಐಎಂಎ ಅಧ್ಯಕ್ಷ ಡಾ. ಚೈತನ್ಯ ಸವೂರ್, ಕಾರ್ಯದರ್ಶಿ ಡಾ. ಕಾರ್ತೀಕ್ ವಿಜಯ್, ರೌಂಡ್ ಟೇಬಲ್ ಅಧ್ಯಕ್ಷ ರಾಷ್ಟ್ರೀತ್, ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ, ವಕೀಲರಾದ ತೇಜಸ್ವಿ, ಮಮತಾ, ಕನ್ನಡಸೇನೆ ಮುಖಂಡರಾದ ಜಯಪ್ರಕಾಶ್, ಹುಣಸೇಮಕ್ಕಿ ಲಕ್ಷ್ಮಣ್, ಕಳವಾಸೆ ರವಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಮಹಿಳಾ ಬಳಗ ಹಾಗೂ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.

24 ಕೆಸಿಕೆಎಂ 1

ಕೋಲ್ಕಾತ್ತದ ಮೆಡಿಕಲ್‌ ಕಾಲೇಜಿನ ತರಬೇತಿ ವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಇನ್ನರ್‌ ವ್ಹೀಲ್‌ ಕ್ಲಬ್‌ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಶನಿವಾರ ಚಿಕ್ಕಮಗಳೂರಿನಲ್ಲಿ ಮೌನ ಪ್ರತಿಭಟನಾ ಮೆರವಣಿಗೆ ನಡೆಯಿತು.