ಸಾರಾಂಶ
ಎರಡೂವರೆ ಗಂಟೆಯಲ್ಲಿ ಒಂದು ಎಕರೆ ಜಮೀನನ್ನು ನಾಟಿ ಮಾಡಿದ ಸಿಬ್ಬಂದಿ, ಕೊನೆಯಲ್ಲಿ ಸ್ವಲ್ಪಹೊತ್ತು ಹಗ್ಗ ಜಗ್ಗಾಟವನ್ನೂ ನಡೆಸಿ ಸಂಭ್ರಮಿಸಿದರು. ಇದರಿಂದ ಬರುವ ಭತ್ತವನ್ನು ಬಳಸಿ ಆಸ್ಪತ್ರೆಯ ಸಿಬ್ಬಂದಿಗೆ ಮೂರು ತಿಂಗಳಿಗಾಗುವಷ್ಟು ಅಕ್ಕಿಯನ್ನು ಉತ್ಪಾದಿಸಲಾಗುತ್ತದೆ.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಪರೀಕದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ - ಸೌಖ್ಯವನ ಸಂಸ್ಥೆಗೆ ಒಳಪಟ್ಟ ಶ್ರೀ ಶ್ರೀನಿವಾಸ ದೇವರ ಒಂದು ಎಕರೆ ಗದ್ದೆಯನ್ನು 10ನೇ ವರ್ಷ ಭಾನುವಾರ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮತ್ತು 85 ಸಿಬ್ಬಂದಿ ಕೂಡಿಕೊಂಡು ತಾವೇ ಬೆಳೆಸಿದ ನೇಜಿ (ಬತ್ತದ ಸಸಿ) ನಾಟಿ ಮಾಡಿದರು.ಒಂದು ತಿಂಗಳಿನಿಂದ ನೇಜಿ ತಯಾರಿ ನಡೆಸಿ, ಈ ದಿನ ದೇವಸ್ಥಾನದ ಅರ್ಚಕ ಶ್ರೀನಿವಾಸ ದೇವರ ತೀರ್ಥ ಪ್ರಸಾದವನ್ನು ಶಾಸ್ತ್ರದಂತೆ ಗದ್ದೆಗೆ ಪ್ರೋಕ್ಷಣೆ ಮಾಡುವ ಮೂಲಕ ಚಾಲನೆಗೊಳಿಸಿದರು.
ಸರಿ ಸುಮಾರು ಎರಡೂವರೆ ಗಂಟೆಯಲ್ಲಿ ಒಂದು ಎಕರೆ ಜಮೀನನ್ನು ನಾಟಿ ಮಾಡಿದ ಸಿಬ್ಬಂದಿ, ಕೊನೆಯಲ್ಲಿ ಸ್ವಲ್ಪಹೊತ್ತು ಹಗ್ಗ ಜಗ್ಗಾಟವನ್ನೂ ನಡೆಸಿ ಸಂಭ್ರಮಿಸಿದರು. ಇದರಿಂದ ಬರುವ ಭತ್ತವನ್ನು ಬಳಸಿ ಆಸ್ಪತ್ರೆಯ ಸಿಬ್ಬಂದಿಗೆ ಮೂರು ತಿಂಗಳಿಗಾಗುವಷ್ಟು ಅಕ್ಕಿಯನ್ನು ಉತ್ಪಾದಿಸಲಾಗುತ್ತದೆ.ಪ್ರತೀ ಬಾರಿಯ ಈ ಕೃಷಿ ಕಾರ್ಯಕ್ರಮಕ್ಕೆ ಬೆಂಬಲವಾಗಿ ಎಲ್ಲರಿಗೂ ಉಪಹಾರದ ವ್ಯವಸ್ಥೆಯನ್ನು ಉಡುಪಿಯ ಗುತ್ತಿಗೆದಾರ ನಂದ ಕುಮಾರ್ ಅವರ ವತಿಯಿಂದ ಮಾಡಲಾಗಿತ್ತು. ಆಸ್ಪತ್ರೆಯ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಅವರು ಸಂಪೂರ್ಣ ಉಸ್ತುವಾರಿ ವಹಿಸಿಕೊಂಡಿದ್ದರು.