ಸಾರಾಂಶ
ಹುಬ್ಬಳ್ಳಿ:
ವೈದ್ಯಕೀಯ ಸೀಟು ಸಿಕ್ಕರೂ ದುಡ್ಡಿನ ಸಮಸ್ಯೆಯಿಂದ ಪ್ರವೇಶಕ್ಕೆ ಪರದಾಡುತ್ತಿದ್ದ ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿಯ ಶಿಕ್ಷಣದ ಜವಾಬ್ದಾರಿಯನ್ನು ವೈದ್ಯರೇ ಹೊತ್ತಿದ್ದಾರೆ! ಹುಬ್ಬಳ್ಳಿಯ ಕೆಎಂಸಿ ಕೂಡ ವಿದ್ಯಾರ್ಥಿಯ ಓದಿಗೆ ಅಗತ್ಯ ನೆರವು ನೀಡುವುದಾಗಿ ವಾಗ್ದಾನ ಮಾಡಿದೆ. ಈ ಮೂಲಕ ''''''''ಕನ್ನಡಪ್ರಭ'''''''' ಪ್ರಕಟಿಸಿದ್ದ ವರದಿಗೆ ಭಾರೀ ಸ್ಪಂದನೆ ಸಿಕ್ಕಿದೆ.ಕೊಪ್ಪಳ ಜಿಲ್ಲೆಯ ಬೇಳೂರು ಗ್ರಾಮದ ಪ್ರಕಾಶ ತಳವಾರ ಈತನಿಗೆ ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ವೈದ್ಯಕೀಯ ಸೀಟ್ ಸಿಕ್ಕಿತ್ತು. ಈತ ಹಿರೇಸಿಂದೋಗಿ ಮೊರಾರ್ಜಿ ಶಾಲೆಯಲ್ಲಿ ಪಿಯುಸಿ ಓದಿದ್ದಾನೆ. ಪಿಯುಸಿಯಲ್ಲಿ ಶೇ. 92 ಅಂಕ ಪಡೆದಿದ್ದ ಈತ, ಎಂಬಿಬಿಎಸ್ ಪ್ರವೇಶಕ್ಕೂ ಅರ್ಹತೆ ಪಡೆದಿದ್ದ. ಹುಬ್ಬಳ್ಳಿಯಲ್ಲಿನ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ (ಕೆಎಂಸಿಆರ್‌ಐ)ಯಲ್ಲಿ ಸೀಟು ಸಿಕ್ಕಿದೆ. ಆದರೆ, ಮನೆಯಲ್ಲಿ ಬಡತನ ಇರುವುದರಿಂದ ಪಾಲಕರಿಗೆ ಪ್ರವೇಶ ಕೊಡಿಸುವ ಶಕ್ತಿ ಇರಲಿಲ್ಲ.
ಇಲ್ಲಿನ ಕಿಮ್ಸ್‌ನಲ್ಲಿ ತಜ್ಞ ವೈದ್ಯರಾಗಿರುವ ಡಾ. ರಾಜಶೇಖರ ದ್ಯಾಬೇರಿ ಸೇರಿದಂತೆ ಅವರ ವೈದ್ಯಕೀಯ ರಂಗದಲ್ಲಿರುವ ಸ್ನೇಹಿತರು ಈ ವಿದ್ಯಾರ್ಥಿಗೆ ನೆರವು ನೀಡಲು ಮುಂದೆ ಬಂದಿದ್ದಾರೆ.ಕೆಎಂಸಿಆರ್‌ಐನಲ್ಲಿ ಶನಿವಾರ ಏರ್ಪಡಿಸಿದ್ದ ವರದಿಗಾರರ ಆರೋಗ್ಯ ಶಿಬಿರದಲ್ಲಿ ವಿದ್ಯಾರ್ಥಿಗೆ ಆಹ್ವಾನ ನೀಡಲಾಗಿತ್ತು. ವೇದಿಕೆಯ ಮೇಲೆ ವಿದ್ಯಾರ್ಥಿಯನ್ನು ಕರೆದು ಹೂವು ನೀಡಿ ಸಂಸ್ಥೆಯ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ, ಪ್ರಾಚಾರ್ಯ ಡಾ. ಈಶ್ವರ ಹೊಸಮನಿ, ತಜ್ಞ ವೈದ್ಯ ಡಾ. ರಾಜಶೇಖರ ದ್ಯಾಬೇರಿ ಅಭಿನಂದಿಸಿದರು. ಬಳಿಕ ಡಾ. ಕಮ್ಮಾರ ಮಾತನಾಡಿ, ದುಡ್ಡಿನ ಕಾರಣದಿಂದ ಯಾವ ವಿದ್ಯಾರ್ಥಿಯೂ ಶಿಕ್ಷಣವನ್ನು ಮೊಟಕುಗೊಳಿಸಬಾರದು. ವಿದ್ಯಾರ್ಥಿ ಇಲ್ಲಿ ಪ್ರವೇಶ ಪಡೆಯಲಿ. ಅದಕ್ಕೆ ಬೇಕಾದ ನೆರವನ್ನು ಸಂಸ್ಥೆಯ ವತಿಯಿಂದ ಮಾಡಲಾಗುವುದು ಎಂದರು.
ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಈಶ್ವರ ಹೊಸಮನಿ ಮಾತನಾಡಿ, ವಿದ್ಯಾರ್ಥಿಗೆ ಶಿಕ್ಷಣ, ವಸತಿಗೂ ಇಲ್ಲಿ ಅಗತ್ಯ ನೆರವು ನೀಡಲಾಗುವುದು ಎಂದರು. ತಜ್ಞ ವೈದ್ಯ ಡಾ. ರಾಜಶೇಖರ ದ್ಯಾಬೇರಿ, ತಾವೂ ಸೇರಿದಂತೆ ತಮ್ಮ ಸ್ನೇಹಿತರೆಲ್ಲರೂ ವಿದ್ಯಾರ್ಥಿಯ ನೆರವಿಗೆ ಮುಂದಾಗಿದ್ದೇವೆ. ಓದಿಗೆ ಸಮಸ್ಯೆಯಾಗದಂತೆ ಎಷ್ಟೇ ದುಡ್ಡು ಖರ್ಚಾಗಲಿ ಅಗತ್ಯ ನೆರವು, ಸಹಕಾರ ನೀಡಲಾಗುವುದು. ವಿದ್ಯಾರ್ಥಿಗೆ ನೆರವು ನೀಡಲು ಬೆಂಗಳೂರಲ್ಲಿರುವ ತಮ್ಮ ಸ್ನೇಹಿತರು ಮುಂದೆ ಬಂದಿದ್ದಾರೆ ಎಂದು ಘೋಷಿಸಿದರು. ಅಲ್ಲದೇ, ''''''''ಕನ್ನಡಪ್ರಭ'''''''' ಪತ್ರಿಕೆ ಈತನ ಪರಿಸ್ಥಿತಿಯ ಬಗ್ಗೆ ಬೆಳಕು ಚೆಲ್ಲಿತ್ತು. ಇಂಥ ಸಾಮಾಜಿಕ ಕಳಕಳಿಯ ವರದಿಗಳು ಬಂದರೆ ಬಡವರಿಗೆ ಸಾಕಷ್ಟು ಅನುಕೂಲವಾಗುತ್ತದೆ ಎಂದರು.ಈಗಾಗಲೇ ಸೀಟು ಸಿಕ್ಕಿರುವ ಪ್ರಕಾಶನಿಗೆ ಸೆ. 5ರೊಳಗೆ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಪ್ರವೇಶ ಪಡೆಯುವಂತೆ ನಿರ್ದೇಶಕರು, ಪ್ರಾಚಾರ್ಯರು, ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಆತ ಸೆ. 3 ಅಥವಾ 4ರಂದು ಪ್ರವೇಶ ಪಡೆಯಲಿದ್ದಾನೆ.
ಬಳಿಕ ಹಾಸ್ಟೆಲ್ ವಾರ್ಡನ್ ಅವರಿಗೂ ವಿದ್ಯಾರ್ಥಿಯನ್ನು ಪರಿಚಯಿಸಲಾಯಿತು. ಅಲ್ಲೂ ಆತನಿಗೆ ನೆರವು ನೀಡಲು ವಾರ್ಡನ್ ತಿಳಿಸಿದರು.