ಸಾರಾಂಶ
ಜೆ.ಎನ್. ವೈದ್ಯಕೀಯ ಮಹಾವಿದ್ಯಾಲಯದ 1971ರಿಂದ 1990ರವರೆಗಿನ ಹಳೆಯ ವಿದ್ಯಾರ್ಥಿಗಳು ಗುರುಸ್ಮರಣೆಗಾಗಿ ಕಾಲೇಜಿನ ಗ್ರಂಥಾಲಯದ ಮುಂದೆ ಪ್ರತಿಷ್ಠಾಪಿಸಿದ ಕಾಲೇಜಿನ ಮಾಜಿ ಪ್ರಾಚಾರ್ಯ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಜಿ. ದೇಸಾಯಿ ಅವರ ಪ್ರತಿಮೆಯನ್ನು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಜೆ.ಎನ್. ವೈದ್ಯಕೀಯ ಮಹಾವಿದ್ಯಾಲಯದ 1971ರಿಂದ 1990ರವರೆಗಿನ ಹಳೆಯ ವಿದ್ಯಾರ್ಥಿಗಳು ಗುರುಸ್ಮರಣೆಗಾಗಿ ಕಾಲೇಜಿನ ಗ್ರಂಥಾಲಯದ ಮುಂದೆ ಪ್ರತಿಷ್ಠಾಪಿಸಿದ ಕಾಲೇಜಿನ ಮಾಜಿ ಪ್ರಾಚಾರ್ಯ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಜಿ. ದೇಸಾಯಿ ಅವರ ಪ್ರತಿಮೆಯನ್ನು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಉದ್ಘಾಟಿಸಿದರು.ನಂತರ ನಡೆದ ಗುರುವಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದಿನ ವೈದ್ಯರ ಪ್ರಾಮಾಣಿಕತೆ, ಕಾಯಕ ಗೌರವ, ನಿಷ್ಠೆಯನ್ನು ಇಂದಿನ ವೈದ್ಯರು ರೂಢಿಸಿಕೊಳ್ಳಬೇಕು. ವೈದ್ಯ ವೃತ್ತಿಯ ಪಾವಿತ್ರ್ಯತೆ ಅರಿತು ರೋಗಿಗಳ ಸಾರ್ವಜನಿಕರ ನಂಬಿಕೆಗೆ ಭಂಗವನ್ನುಂಟು ಮಾಡಲಾಗದು. ರೋಗಿಗಳ ಭಾವನಾತ್ಮಕ ವ್ಯಕ್ತಿತ್ವವನ್ನು ಗೌರವಿಸುವ ವೈದ್ಯ ಮಾತ್ರ ನಿಜವಾದ ವೈದ್ಯನಾರಾಯಣ ಎಂದು ಅಭಿಪ್ರಾಯಪಟ್ಟರು.
ಚಿಕ್ಕಮಕ್ಕಳ ತಜ್ಞವೈದ್ಯ ಡಾ.ದೇಸಾಯಿ, ಡಾ.ದೇಸಾಯಿ ಅವರು ಮಕ್ಕಳ ಮನಶಾಸ್ತ್ರವನ್ನು ಅರಿತಿದ್ದರು. ಮಕ್ಕಳೊಂದಿಗೆ ಬೆರೆಯುವಲ್ಲಿ ನಿಷ್ಣಾತರಾಗಿದ್ದರು. ನಾಡು ಕಂಡ ಅಪರೂಪದ ವೈದ್ಯಕೀಯ ಶಿಕ್ಷಕರಾಗಿದ್ದು, ವೃತ್ತಿಯ ಘನತೆ ಗೌರವ ಎತ್ತಿಹಿಡಿದಿದ್ದರು. ಸತತ 13 ವರ್ಷಗಳ ಕಾಲ ಕೆಎಲ್ಇ ಸಂಸ್ಥೆಯ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತ ಮಹಾವಿದ್ಯಾಲಯವನ್ನು ಉತ್ತುಂಗಕ್ಕೆ ಕೊಂಡೊಯ್ದರು. ಪ್ರಾಧ್ಯಾಪಕ ಮತ್ತು ವಿದ್ಯಾರ್ಥಿಗಳನ್ನು ಸಂಶೋಧನಾ ಪ್ರಕ್ರಿಯೆಗೆ ಅಣಿಗೊಳಿಸಿದ ಅವರ ಕಟ್ಟನಿಟ್ಟಿನ ಆಡಳಿತ ನಿರ್ವಹಣೆ ಮತ್ತು ಉತ್ಕೃಷ್ಟ ಬೋಧನೆ ಎಲ್ಲರಿಗೂ ಮಾದರಿ ಎಂದು ಶ್ಲಾಘಿಸಿದರು.ಅಥಣಿ ಮೂಲದ ಅಮೆರಿಕ ನಿವಾಸಿ ಹಾಗೂ ದಾನಿಗಳಾದ ಡಾ.ಸಂಪತಕುಮಾರ ಶಿವಣಗಿ ಮಾತನಾಡಿ, ಈ ಭಾಗದಲ್ಲಿ ಕೆಎಲ್ಇ ಸಂಸ್ಥೆ ಇರದಿದ್ದರೆ ಶಿಕ್ಷಣ ಪಡೆಯುವುದು ತುಂಬಾ ದುಸ್ತರವಾಗುತ್ತಿತ್ತು. ಇಂದು ಈ ಭಾಗದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ರಾಂತಿಯಾಗಿದ್ದರೆ ಅದು ಕೆಎಲ್ಇ ಸಂಸ್ಥೆಯಿಂದ ಮಾತ್ರ ಆಗಿದೆ. ಶಿಕ್ಷಣದ ದಾಸೋಹದ ಮೂಲಕ ಈ ನಾಡಿನಲ್ಲಿ ಸಾಮಾಜಿಕ ಸುಧಾರಣೆಗೆ ಕಾರಣವಾಯಿತು. ಡಾ.ಪ್ರಭಾಕರ ಕೋರೆ ಅವರ ಕಾರ್ಯವೈಖರಿ ಹಾಗೂ ದೂರದೃಷ್ಟಿಯ ಫಲವಾಗಿ ಕೆಎಲ್ಇ ಸಂಸ್ಥೆ ಇಂದು ವಿಶ್ವದಲ್ಲಿ ಖ್ಯಾತಿ ಗಳಿಸಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಡಾ.ಸಂಪತಕುಮಾರ ಹಾಗೂ ಡಾ. ಉದಯಾ ಶಿವಣಗಿ ದಂಪತಿಯನ್ನು ಸತ್ಕರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ, ಸಂಸ್ಥೆಯ ನಿರ್ದೇಶಕ ಡಾ.ವಿ.ಎಸ್. ಸಾಧುನವರ, ಡಾ.ಎಚ್.ಬಿ. ರಾಜಶೇಖರ, ಡಾ.ವಿ.ಡಿ. ಪಾಟೀಲ, ಕಾಹೆರ ಉಪಕುಲಪತಿ ಡಾ.ನಿತಿನ ಗಂಗಣೆ, ಜೆಎನ್ಎಂಸಿ ಪ್ರಾಚಾರ್ಯೆ ಡಾ.ಎನ್.ಎಸ್. ಮಹಾಂತಶೆಟ್ಟಿ ಉಪಪ್ರಾಚಾರ್ಯ ಡಾ.ವಿ.ಎಂ. ಪಟ್ಟಣಶೆಟ್ಟಿ, ಡಾ.ರಾಜೇಶ ಪವಾರ ಇತರರು ಉಪಸ್ಥಿತರಿದ್ದರು.