ಸಾರಾಂಶ
ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ಫಾದರ್ ಮುಲ್ಲರ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ಮತ್ತು ಫಾದರ್ ಮುಲ್ಲರ್ ಕಾಲೇಜ್ ಆಫ್ ಫಿಸಿಯೋಥೆರಫಿಯ ಪದವಿ ಪ್ರದಾನ ಸಮಾರಂಭ ನಡೆಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ವೈದ್ಯರಿಗೆ ಮುಂದಿನ ದಿನಗಳು ಸುಲಭವಾಗಿಲ್ಲ. ಕಠಿಣ ಸನ್ನಿವೇಶಗಳು ಓರ್ವ ಶ್ರೇಷ್ಠ ವ್ಯಕ್ತಿಯನ್ನಾಗಿ ರೂಪಿಸಲಿದೆ. ಪರಿಶ್ರಮವೇ ಜೀವನದ ಸಾಧನೆಗೆ ನಾಂದಿಯಾಗಲಿದೆ. ಓರ್ವ ಉತ್ತಮ ವೈದ್ಯ ನಿರಂತರ ಕಲಿಕೆಯಲ್ಲಿರುತ್ತಾನೆ ಎಂದು ಬೆಂಗಳೂರಿನ ರಾಜೀವ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ ಇದರ ಕುಲಪತಿ ಡಾ. ಭಗವಾನ್ ಬಿ.ಸಿ. ಹೇಳಿದರು.ಅವರು ಶುಕ್ರವಾರ ಇಲ್ಲಿನ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ಫಾದರ್ ಮುಲ್ಲರ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ಮತ್ತು ಫಾದರ್ ಮುಲ್ಲರ್ ಕಾಲೇಜ್ ಆಫ್ ಫಿಸಿಯೋಥೆರಫಿಯ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಎಐ ತಂತ್ರಜ್ಞಾನ ನಮ್ಮನ್ನು ಬೆದರಿಸಲು ಬಂದಿರುವುದಲ್ಲ. ಬದಲಾಗಿ ಹೊಸ ಅವಿಷ್ಕಾರ ಮಾಡಲು ಅವಕಾಶವನ್ನು ಕಲ್ಪಿಸಿದೆ. ಆತ್ಮ ವಿಶ್ವಾಸಹೊಂದಿರುವ ಜತೆಗೆ ನಿರಂತರ ಅಧ್ಯಯನವನ್ನು ತಮ್ಮದಾಗಿಸಬೇಕು ಎಂದರು.ಮಿನಿಸ್ಟ್ರಿ ಆಫ್ ಪೆಟ್ರೋಲಿಯಂ ಆ್ಯಂಡ್ ನ್ಯಾಚುರಲ್ ಗ್ಯಾಸ್‌ನ ಸೀನಿಯರ್ ಮೆಡಿಕಲ್ ಸ್ಪೆಷಲಿಸ್ಟ್ ಡಾ.ರಾಜೀವ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಪಡೆದಿರುವುದು ಕೇವಲ ಪದವಿಯಲ್ಲ. ಜೀವನದ ಮಹತ್ವದ ಜವಾಬ್ದಾರಿಯಾಗಿದೆ. ತಮ್ಮ ಕಠಿಣ ಅಭ್ಯಾಸ ಹಾಗೂ ನಿರಂತರ ಪರಿಶ್ರಮದ ಫಲವಾಗಿದೆ. ಇದರಲ್ಲಿ ಸಮರ್ಪಣೆ, ಸೇವಾ ಭಾವನೆಯ ಅವಶ್ಯಕತೆ ಈ ಜವಾಬ್ದಾರಿ ನಿಭಾಯಿಸಲು ಅಗತ್ಯವಿದೆ.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಹಾಗೂ ಫಾದರ್ ಮುಲ್ಲರ್ ಸಂಸ್ಥೆಗಳ ಅಧ್ಯಕ್ಷ ರೆ.ಫಾ. ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಮಾತನಾಡಿ, ಪದವಿ ಪಡೆದ ವಿದ್ಯಾರ್ಥಿಗಳು ತನ್ನ ಜವಾಬ್ದಾರಿ ಅರಿತುಕೊಂಡು ರೋಗಿಗಳ ಆರೈಕೆಗಾಗಿ ನಿಟ್ಟಿನಲ್ಲಿ ಶ್ರಮಿಸಬೇಕು. ಶಿಕ್ಷಣ ಸಂಸ್ಥೆಯಲ್ಲಿ ಕಲಿತಿರುವ ವಿಚಾರಗಳೊಂದಿಗೆ ಸಮಾಜದ ಸೇವೆಗೆ ಮುಂದಾಗಬೇಕು. ಪದವಿಯಲ್ಲಿ ಓದಿರುವ ವಿಚಾರಗಳು ಮುಂದೆ ನೀಜ ಜೀವನದಲ್ಲಿ ಅನುಭವಕ್ಕೆ ಬರಲಿದೆ ಎಂದರು. ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕ ರೆ.ಫಾ. ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಪ್ರಸ್ತಾವಿಸಿ ಸ್ವಾಗತಿಸಿದರು. ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆಯ ಆಡಳಿತಾಧಿಕಾರಿ ರೆ.ಫಾ.ಸಿಲ್ವೆಸ್ಟರ್ ವಿನ್ಸೆಂಟ್ ಲೋಬೊ ವಂದಿಸಿದರು.ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ರೆ.ಫಾ. ಅಜಿತ್ ಮಿನೇಜಸ್ ವಾರ್ಷಿಕ ವರದಿ ಮಂಡಿಸಿದರು.ನಿಯೋಜಿತ ನಿರ್ದೇಶಕ ರೆ.ಫಾ.ಫಾವುಸ್ತಿನ್ ಲೂಕಸ್ ಲೋಬೊ, ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ರೆ.ಫಾ.ಜಾರ್ಜ್ ಜೀವನ್ ಸಿಕ್ವೇರಾ, ಸಹಾಯಕ ಆಡಳಿತಾಧಿಕಾರಿ ರೆ.ಫಾ. ಡೊನಾಲ್ಡ್ ನೀಲೇಶ್ ಕ್ರಾಸ್ತಾ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಡೀನ್ ಡಾ.ಅಂಟೊನಿ ಸಿಲ್ವನ್ ಡಿಸೋಜಾ, ವೈದ್ಯಕೀಯ ಅಧೀಕ್ಷಕ ಡಾ.ಉದಯ್ ಕುಮಾರ್, ಅಲೈಡ್ ಹೆಲ್ತ್ ಸೈನ್ಸ್ ಪ್ರಾಂಶುಪಾಲ ಡಾ. ಹಿಲ್ಡಾ ಡಿ’ಸೋಜಾ, ಕಾಲೇಜ್ ಆಫ್ ಫಿಸಿಯೋಥೆರಫಿಯ ಪ್ರಾಂಶುಪಾಲೆ ಪ್ರೊ. ಚರಿಶ್ಮಾ ಡಿಸಿಲ್ವಾ ಇದ್ದರು.