ವೈದ್ಯರು ರೋಗಿಗಳಲ್ಲಿ ಆತ್ಮಸ್ಥೈರ್ಯ ತುಂಬಬೇಕು

| Published : Mar 25 2025, 12:49 AM IST

ವೈದ್ಯರು ರೋಗಿಗಳಲ್ಲಿ ಆತ್ಮಸ್ಥೈರ್ಯ ತುಂಬಬೇಕು
Share this Article
  • FB
  • TW
  • Linkdin
  • Email

ಸಾರಾಂಶ

Doctors should instill confidence in patients

-ಚಿಕ್ಕಮಗಳೂರಿನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಸಲಹೆ । ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಹೊರರೋಗಿಗಳ ವಿಭಾಗದ ಕಟ್ಟಡ ಉದ್ಘಾಟನೆ

-----

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬರುವ ಜನರಲ್ಲಿ ವೈದ್ಯರು ಹಾಗೂ ಕೆಳ ಹಂತದ ವರ್ಗ ಸೂಕ್ತ ರೀತಿಯಲ್ಲಿ ಸ್ಪಂದಿಸಿ ಅವರಲ್ಲಿ ಕಾಯಿಲೆ ಗುಣಮುಖವಾಗುವ ಬಗ್ಗೆ ಆತ್ಮಸ್ಥೈರ್ಯ ತುಂಬಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಅವರು ಹೇಳಿದರು.

ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಹೊರ ರೋಗಿಗಳ ವಿಭಾಗದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಗಿರುವ ಕಾಯಿಲೆಯಿಂದಾಗಿ ಗುಣಮುಖ ಆಗಬಹುದು ಎಂಬ ಭಾವನೆಯಿಂದ ರೋಗಿಗಳು ಆಸ್ಪತ್ರೆಗೆ ಬರುತ್ತಾರೆ. ಎಲ್ಲಾ ರೋಗಗಳಿಗೂ ಚಿಕಿತ್ಸೆ ನೀಡುವುದು ತುಂಬಾ ಕಷ್ಟದ ಕೆಲಸ. ಆದರೂ ರೋಗಿಗಳಲ್ಲಿ ಆತ್ಮಸ್ಥೈರ್ಯ ತುಂಬಿದರೆ ಅರ್ಧದಷ್ಟು ಕಾಯಿಲೆ ಗುಣಮುಖವಾಗುತ್ತದೆ ಎಂದರು.

ಯಾವುದೇ ರೋಗಿಗೆ ತೊಂದರೆ ಆದಲ್ಲಿ ಅವರ ಕುಟುಂಬಸ್ಥರು ಕೆಟ್ಟ ರೀತಿಯಲ್ಲಿ ವರ್ತಿಸುತ್ತಾರೆ. ಅಂತಹ ಸಂದರ್ಭದಲ್ಲಿ ವೈದ್ಯರು ತಾಳ್ಮೆ ಕಳೆದುಕೊಳ್ಳಬಾರದು. ಸಹನೆಯಿಂದ ವರ್ತಿಸಬೇಕು. ಬಡವರಿಗೂ ಗೌರವ ನೀಡಬೇಕು, ಅವರಿಗೂ ಒಳ್ಳೆಯ ಸೇವೆ ನೀಡಬೇಕು ಎಂದು ಹೇಳಿದರು.

ವೈದ್ಯರಿಗೆ ಹಾಗೂ ಪೋಲಿಸರಿಗೆ ಟೈಂ ಇರೋದಿಲ್ಲ, ದಿನದ 24 ಗಂಟೆಗಳ ಕಾಲ ಕೆಲಸ ಮಾಡುವ ಸಂದರ್ಭ ಬರುತ್ತದೆ. ಸಮಾಜ ಅವರಿಗೂ ಕೂಡ ಗೌರವ ಕೊಡಬೇಕು. ಅದೇ ರೀತಿ ಪೌರ ಸೇವಾ ನೌಕರರಿಗೂ ಕೊಡಬೇಕು ಎಂದರು.

ನಾವುಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೇವೆ. ಜನರಿಂದ ಆಯ್ಕೆಯಾಗಿದ್ದೇವೆ. ಸೇವೆ ಮಾಡುವ ಉದ್ದೇಶದಿಂದ ಈ ಕ್ಷೇತ್ರಕ್ಕೆ ಬರಬೇಕು. ಜನ ಸೇವೆ ನಮ್ಮ ಕರ್ತವ್ಯ ಆಗಬೇಕು. ಪ್ರಜೆಗೋಸ್ಕರ ಕೆಲಸ ಮಾಡಬೇಕು ಎಂದ ಸಚಿವರು, ಅಭಿವೃದ್ಧಿ ವಿಚಾರದಲ್ಲಿ ಪಕ್ಷ ಬೇಧ ಮಾಡಬಾರದು ಎಂದು ಕಿವಿ ಮಾತು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಮಾತನಾಡಿ, ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಎಜುಕೇಷನ್‌ ಹಬ್‌ ಮಾಡಲು ಪೂರಕವಾದ ವಾತಾವರಣ ಇದೆ. ಬೇಲೂರು- ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಸಮಗ್ರ ಯೋಜನಾ ವರದಿ ಸಿದ್ಧವಾಗಿದೆ.

ಬೇಲೂರು-ಹಾಸನ ರೈಲ್ವೆ ಕಾಮಗಾರಿಯನ್ನು ಚುರುಕುಗೊಳಿಸಬೇಕು. ಈ ಸಂಬಂಧ ರೈಲ್ವೆ ಸಚಿವರೊಂದಿಗೆ ಮಾತುಕತೆ ನೀಡಬೇಕು ಎಂದು ತಿಳಿಸಿದರು.

ಏರ್‌ ಸ್ಟ್ರೀಪ್‌ ನಿರ್ಮಾಣ ಮಾಡಬೇಕು. ಇದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಆಗಮಿಸಲಿದ್ದಾರೆ. ಜತೆಗೆ ಖಾಸಗಿ ವಿಮಾನಗಳು ಕೂಡ ಬಂದು ಹೋಗಲು ಅನುಕೂಲವಾಗಲಿದೆ ಎಂದರು.

ಚಿಕ್ಕಮಗಳೂರು ಮೆಡಿಕಲ್‌ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರ ಹುದ್ದೆಗಳು ಖಾಲಿ ಇವೆ. ಈ ಜಾಗದಲ್ಲಿ ಅತಿಥಿ ಉಪನ್ಯಾಸಕರನ್ನು ತುಂಬುವ ಕೆಲಸ ಸರ್ಕಾರ ಮಾಡುತ್ತಿದೆ. ಆದರೆ, ಎರಡು ಬಾರಿ ಪ್ರಕಟಣೆ ಹೊರಡಿಸಿದರೂ ನಿರೀಕ್ಷಿತ ಮಟ್ಟದಲ್ಲಿ ಅರ್ಜಿಗಳು ಬಂದಿಲ್ಲ. ಹಾಗಾಗಿ, ಖಾಯಂ ಆಗಿ ಹುದ್ದೆಗಳನ್ನು ತುಂಬಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್‌.ಡಿ. ತಮ್ಮಯ್ಯ ಮಾತನಾಡಿ, ಇಂದು ಹೊರ ರೋಗಿಗಳ ಕಟ್ಟಡ ಉದ್ಘಾಟನೆಯಾಗಿದೆ. ಮೆಡಿಕಲ್‌ ಕಾಲೇಜಿಗೆ ಹಣದ ಅವಶ್ಯಕತೆ ಇದ್ದುದರಿಂದ ಕಾಂಗ್ರೆಸ್‌ ಸರ್ಕಾರ ಬಂದ ನಂತರ 38 ಕೋಟಿ ರು. ಬಿಡುಗಡೆ ಮಾಡಲಾಗಿದೆ. ರಾಜ್ಯ ಸರ್ಕಾರ ಆರೋಗ್ಯ, ಶಿಕ್ಷಣದ ಕಡೆಗೆ ಹೆಚ್ಚಿನ ಒತ್ತು ನೀಡಿ ಅನುದಾನ ಬಿಡುಗಡೆ ಮಾಡುತ್ತಿದೆ ಎಂದರು.

ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿದರು. ಕಾರ್ಯಕ್ರಮದಲ್ಲಿ ಭದ್ರಾ ಕಾಡಾ ಅಧ್ಯಕ್ಷ ಡಾ. ಅಂಶುಮಂತ್‌, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಬಿ.ಎಚ್‌. ಹರೀಶ್‌, ಚಿಕ್ಕಮಗಳೂರು ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್‌, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ, ಜಿಲ್ಲಾ ಪಂಚಾಯ್ತಿ ಸಿಇಒ ಎಚ್‌.ಎಸ್‌. ಕೀರ್ತನಾ, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನ ಡೀನ್‌ ಡಾ. ಹರೀಶ್‌ ಉಪಸ್ಥಿತರಿದ್ದರು. ಡಾ. ಚಂದ್ರಶೇಖರ್‌ ಸಾಲಿಮಠ್‌ ಸ್ವಾಗತಿಸಿದರು. ಡಾ. ಲೋಹಿತ್‌ಕುಮಾರ್‌ ವಂದಿಸಿದರು.

----

ಪೋಟೋ: ಚಿಕ್ಕಮಗಳೂರಿನ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣ ಮಾಡಲಾದ ಹೊರರೋಗಿಗಳ ವಿಭಾಗದ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಉದ್ಘಾಟಿಸಿದರು. ಶಾಸಕ ಎಚ್‌.ಡಿ. ತಮ್ಮಯ್ಯ, ಟಿ.ಡಿ. ರಾಜೇಗೌಡ, ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ, ಬಿ.ಎಚ್‌. ಹರೀಶ್‌, ಡಾ.ಅಂಶುಮಂತ್‌, ಡಾ. ಹರೀಶ್‌, ಡಾ. ಮೋಹನ್‌ಕುಮಾರ್‌ ಇದ್ದರು.

ಫೈಲ್ ನೇಮ್‌ 24 ಕೆಸಿಕೆಎಂ 1