ಖಾಸಗಿ ವ್ಯಕ್ತಿಯ ನಿವಾಸದಲ್ಲಿ ದಾಖಲೆ, ತನಿಖೆಗೆ ಮುಂದಾದ ಕಂದಾಯ ಇಲಾಖೆ

| Published : Sep 11 2025, 12:03 AM IST

ಖಾಸಗಿ ವ್ಯಕ್ತಿಯ ನಿವಾಸದಲ್ಲಿ ದಾಖಲೆ, ತನಿಖೆಗೆ ಮುಂದಾದ ಕಂದಾಯ ಇಲಾಖೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪಳ ಜಿಲ್ಲೆ ಮಾತ್ರವಲ್ಲದೆ ಸ್ವಾತಂತ್ರ್ಯ ಪೂರ್ವದಲ್ಲಿನ ಹಾಗೂ ಹೈದರಾಬಾದ್‌ ನಿಜಾಮನ ಆಡಳಿದಲ್ಲಿನ ಕಂದಾಯ ಇಲಾಖೆಯ ಕೈ ಬರಹದ ದಾಖಲೆ, ನಕಾಶೆ ಸೇರಿದಂತೆ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ದಾಖಲೆ ದೊರಕಿವೆ ಎಂದು ಹೇಳಲಾಗುತ್ತಿದೆ.

ಸೋಮರಡ್ಡಿ ಅಳವಂಡಿಕೊಪ್ಪಳ:

ತಹಸೀಲ್ದಾರ್‌ ಕಚೇರಿ, ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಇರಬೇಕಾದ ದಾಖಲೆ ಖಾಸಗಿ ವ್ಯಕ್ತಿಯ ಮನೆಯಲ್ಲಿ ಇರುವ ಕುರಿತು ಮಾಹಿತಿ ದೊರೆತ ಹಿನ್ನೆಲೆ ಮಂಗಳವಾರ ತಾಲೂಕಿನ ಕಿನ್ನಾಳದ ಪರಶುರಾಮ ಚಿತ್ರಗಾರ ಮನೆ ಮೇಲೆ ದಾಳಿ ನಡೆಸಿದ್ದ ಕಂದಾಯ ಇಲಾಖೆ ಅಧಿಕಾರಿಗಳು ಅಲ್ಲಿರುವ ದಾಖಲೆ ನೋಡಿ ಹೌಹಾರಿದ್ದಾರೆ. ಪರಿಶೀಲನೆ ವೇಳೆ ಸಾಕಷ್ಟು ದಾಖಲೆ ದೊರಕಿದ್ದು ಸತ್ಯಾಸತ್ಯತೆ ಅರಿಯಲು ಸಮಗ್ರ ತನಿಖೆಗೆ ಮುಂದಾಗಿದ್ದಾರೆ.

ಕೊಪ್ಪಳ ಜಿಲ್ಲೆ ಮಾತ್ರವಲ್ಲದೆ ಸ್ವಾತಂತ್ರ್ಯ ಪೂರ್ವದಲ್ಲಿನ ಹಾಗೂ ಹೈದರಾಬಾದ್‌ ನಿಜಾಮನ ಆಡಳಿದಲ್ಲಿನ ಕಂದಾಯ ಇಲಾಖೆಯ ಕೈ ಬರಹದ ದಾಖಲೆ, ನಕಾಶೆ ಸೇರಿದಂತೆ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ದಾಖಲೆ ದೊರಕಿವೆ ಎಂದು ಹೇಳಲಾಗುತ್ತಿದೆ. ಸರ್ಕಾರಿ ಕಚೇರಿಯಲ್ಲಿ ಅಗತ್ಯ ದಾಖಲೆ ಸಿಗದಿದ್ದರೆ ರೈತರು ಪರಶುರಾಮ ಚಿತ್ರಗಾರ ಮನೆಗೆ ಹೋಗಿ ಹಣ ನೀಡಿ ಪಡೆದುಕೊಳ್ಳುತ್ತಿದ್ದರು. ಈ ದಾಖಲೆ ಆಧರಿಸಿಯೇ ಕಂದಾಯ ಇಲಾಖೆಯಲ್ಲಿ ಕೆಲಸಗಳು ಆಗುತ್ತಿದ್ದವು.

ನೂರಾರು ಎಕರೆ ಗೋಲ್‌ಮಾಲ್‌:

ದಾಖಲೆ ಪರಿಶೀಲನೆ ವೇಳೆ ಕೇವಲ ಪರಶುರಾಮ ದಾಖಲೆ ಮಾತ್ರ ನೀಡುತ್ತಿರಲಿಲ್ಲ. ಗೋಮಾಳ ಭೂಮಿ, ಸರ್ಕಾರದ ಭೂಮಿ ಮಾಹಿತಿ ಪಡೆದು ಇನ್ನಾರದೋ ಹೆಸರಿಗೆ ನೂರಾರು ಎಕರೆ ವರ್ಗಾಯಿಸಿರುವ ಕುರಿತು ಕಂದಾಯ ಇಲಾಖೆ ಅಧಿಕಾರಿಗಳು ಪತ್ತೆ ಮಾಡುತ್ತಿದ್ದಾರೆ. ನೂರಾರು ವರ್ಷಗಳಿಂದ ಒಂದೇ ಹೆಸರಿನಲ್ಲಿ ದಾಖಲೆ ಹುಡುಕಿ ಅನುಭೋಗದಲ್ಲಿ ಇರದೆ ಇರುವ ಭೂಮಿಯ ಮಾಹಿತಿ ಪಡೆದು ಅದನ್ನು ಅನ್ಯರಿಗೆ ವರ್ಗಾಯಿಸಲಾಗಿದೆ ಎಂದು ಹೇಳಲಾಗುತ್ತಿದೆ. ಜತೆಗೆ ಇಂತಹ ಭೂಮಿಯನ್ನು ಮಾರಾಟ ಮಾಡಿ ಕೋಟಿ ಕೋಟಿ ಹಣ ಸಂಪಾದಿಸಿದ್ದಾರೆಂಬ ಆರೋಪವು ಕೇಳಿಬಂದಿದೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿರುವ ಕಂದಾಯ ಇಲಾಖೆ, ಪ್ರತಿ ದಾಖಲೆಯನ್ನು ಪರಿಶೀಲಿಸುತ್ತಿದ್ದಾರೆ.

ದಾಖಲೆ ಬಂದಿದ್ದು ಹೇಗೆ?

ಸರ್ಕಾರಿ ಇಲಾಖೆಯಲ್ಲೂ ಸಿಗದ ಸ್ವಾತಂತ್ರ್ಯ ಪೂರ್ವದ ಹಾಗೂ ನಂತರದ ದಾಖಲೆಗಳು ಪರಶುರಾಮನಿಗೆ ಸಿಕ್ಕಿದ್ದಾದರೂ ಎಲ್ಲಿ ಎನ್ನುವುದು ನಿಗೂಢವಾಗಿದೆ. ಹೀಗಾಗಿ ಈತನ ವಿರುದ್ಧ ಪ್ರಕರಣ ದಾಖಲಿಸಿ ಸಮಗ್ರ ತನಿಖೆ ನಡೆಸಲು ಕಂದಾಯ ಇಲಾಖೆ ಮುಂದಾಗಿದೆ. ಇಲ್ಲಿ ದೊರೆತಿರುವ ದಾಖಲೆಗಳ ಸತ್ಯಾಸತ್ಯತೆ ಅರಿಯುವುದು ಸವಾಲಾಗಿದ್ದು ಜಿಲ್ಲಾಡಳಿತ ರಾಜ್ಯ ಕಂದಾಯ ಇಲಾಖೆಯ ನೆರವು ಪಡೆಯಲು ಮುಂದಾಗಿದೆ. ಇದರ ಹಿಂದೆ ಕೊಪ್ಪಳದಲ್ಲಿ ದೊಡ್ಡ ಜಾಲವೇ ಇದೆ. ಕಳೆದ 10 ವರ್ಷಗಳಿಂದ ಈ ಜಾಲ ಭಾರೀ ಅಕ್ರಮ ನಡೆಸಿದ್ದು ನೂರಾರು ಎಕರೆಯನ್ನು ಪರಭಾರೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆಯೂ ತನಿಖೆಯಾಗುವ ಅಗತ್ಯವಿದೆ.ಕಿನ್ನಾಳದ ಪರುಶರಾಮ ಚಿತ್ರಗಾರ ನಿವಾಸಲ್ಲಿ ಪತ್ತೆಯಾಗಿರುವ ದಾಖಲೆಗಳ ಪರಿಶೀಲನೆ ನಡೆದಿದ್ದು ಸತ್ಯಾಸತ್ಯತೆ ಅರಿಯಬೇಕಿದೆ. ಅವರ ಮನೆಗೆ ಆ ದಾಖಲೆ ಹೇಗೆ ಹೋಗಿವೆ ಎನ್ನುವದು ತನಿಖೆಯಲ್ಲಿ ಗೊತ್ತಾಗಲಿದೆ. ಈ ಕುರಿತು ದೂರು ದಾಖಲಿಸಿ ಕಾನೂನು ರೀತಿಯ ಕ್ರಮಕೈಗೊಳ್ಳಲಾಗುವುದು.

ಡಾ. ಸುರೇಶ ಇಟ್ನಾಳ, ಜಿಲ್ಲಾಧಿಕಾರಿ ಕೊಪ್ಪಳ