ನಮ್ಮ ತಾಲೂಕು ನೀರಾವರಿ ಪ್ರದೇಶವಾಗಿದ್ದು, ಕೆರೆಗಳನ್ನು ತುಂಬಿಸುವಂತಹ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಲ್ಲಿ ಕ್ರಿಯಾಶಕ್ತಿಯ ಕೊರತೆ ಇದೆ
ಹಗರಿಬೊಮ್ಮನಹಳ್ಳಿ: ಸತಿ-ಪತಿಗಳು ಪರಸ್ಪರ ಪ್ರೀತಿಸುವ ಹೃದಯಗಳು, ಯಾರಿಗೆ ನೋವು ಆದರೂ ಇಬ್ಬರಿಗೂ ಎಂದು ಅರ್ಥಮಾಡಿಕೊಂಡು ಸುಖೀ ದಾಂಪತ್ಯ ಜೀವನ ನಡೆಸಿ ಎಂದು ಚಿತ್ರರಂಗದ ಹಿರಿಯ ನಟಿ ಭಾರತಿ ಡಾ.ವಿಷ್ಣುವರ್ಧನ್ ಹಾರೈಸಿದರು.ತಾಲೂಕಿನ ಪುಣ್ಯಕ್ಷೇತ್ರ ನಂದಿಪುರದಲ್ಲಿ ಶ್ರೀಗುರು ದೊಡ್ಡ ಬಸವೇಶ್ವರ ೪೨ನೇ ರಥೋತ್ಸವ ನಿಮ್ಮಿತ್ತ ಶ್ರೀಮಠ ಮತ್ತು ಶ್ರೀಗುರು ದೊಡ್ಡಬಸವೇಶ್ವರ ಫೌಂಡೇಶನ್ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ೧೬ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಚರಂತಾರ್ಯಶ್ರೀ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿ, ನವ ವಧುಗಳಿಗೆ ಪಾಲಕರನ್ನು ಪೋಷಿಸುವ ಜವಾಬ್ದಾರಿ ಇರುತ್ತದೆ ಎಂಬ ಕಿವಿಮಾತು ಹೇಳಿದರು.
ಬಿಜೆಪಿ ಮುಖಂಡ ಬಲ್ಲಾಹುಣಸಿ ರಾಮಣ್ಣ ಮಾತನಾಡಿ, ನಮ್ಮ ತಾಲೂಕು ನೀರಾವರಿ ಪ್ರದೇಶವಾಗಿದ್ದು, ಕೆರೆಗಳನ್ನು ತುಂಬಿಸುವಂತಹ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಲ್ಲಿ ಕ್ರಿಯಾಶಕ್ತಿಯ ಕೊರತೆ ಇದೆ ಎಂದು ದೂರಿದರು. ಆದರೆ, ಮಠದ ಡಾ.ಮಹೇಶ್ವರ ಶ್ರೀಗಳು ಸಮಾಜಿಕ ಕಾಳಜಿಯನ್ನು ಹೊಂದಿದ್ದು, ರೈಲ್ವೆ ಹೋರಾಟಗಳಿಗೆ ಮತ್ತು ನೀರಾವರಿ ಯೋಜನೆಗಳ ಹೋರಾಟಗಳಿಗೆ ಬಲವರ್ಧನೆ ನೀಡಿದ್ದಾರೆ ಎಂದು ಶ್ಲಾಘಿಸಿದರು.ಕಲಬುರುಗಿಯ ವಿಶ್ರಾಂತ ಪ್ರಾಧ್ಯಾಪಕ ಡಾ.ಬಿ.ಸಿ. ಮಹಾಬಲೇಶ್ವರಪ್ಪ ಮಾತನಾಡಿದರು. ಸಮಾರಂಭದಲ್ಲಿ ೨೯ ನೂತನ ವಧು- ವರರು ಸಪ್ತಪದಿ ತುಳಿದರು. ಸಾಧಕರಿಗೆ ಗುರು ಚರಂತಾರ್ಯಶ್ರೀ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಸಮಾಜ ಸೇವಕಿ ವಾಣಿ ಕೆ.ನೇಮರಾಜ ನಾಯ್ಕ್ ಸಮಾರಂಭವನ್ನು ಉದ್ಘಾಟಿಸಿದರು. ಮರಿಯಮ್ಮನಹಳ್ಳಿ ಮಲ್ಲಿಕಾರ್ಜುನ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಂಪಸಾಗರ ಮಹಾದೇವ ತಾತ ಮಠದ ಶಿವಲಿಂಗ ರುದ್ರಮುನಿ ಸ್ವಾಮೀಜಿ, ಕೊಟ್ಟೂರಿನ ಡಾ.ಸಿದ್ದಲಿಂಗ ಶಿವಚಾರ್ಯ, ಹನಸಿ ಮಠದ ಸೋಮಶಂಕರ ಸ್ವಾಮೀಜಿ, ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ, ಕೂಡ್ಲಿಗಿ ಹಿರೇಮಠದ ಪ್ರಶಾಂತ, ಸಾಗರ ಶಿವಾಚಾರ್ಯ ಸ್ವಾಮೀಜಿ, ಹಿರೇಮಲ್ಲಿನ ಕೇರಿಯ ಚನ್ನಬಸವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ಕೀರ್ತಿ ಡಾ.ವಿಷ್ಣುವರ್ಧನ್, ಬನ್ನಿಗೋಳು ಯಂಕಣ್ಣ, ಬಿಜೆಪಿ ತಾಲೂಕು ಅಧ್ಯಕ್ಷ ಬೆಣಕಲ್ ಪ್ರಕಾಶ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಮಂಜುನಾಥ ಹಿರೇಮಠ್, ವಿ.ಕನಕಪ್ಪ, ಶಾರದ ಮಂಜುನಾಥ, ಕರಿಬಸವನಗೌಡ, ಎಚ್.ಎಂ.ಗುರುಬಸರಾಜ್ ಹಾಗೂ ಯಮನಪ್ಪ ಮತ್ತಿತರರಿದ್ದರು.