ಬಳ್ಳಾರಿ: ಗಮಕ ಕಲಾನಿಧಿ ಜೋಳದರಾಶಿ ದೊಡ್ಡನಗೌಡರ 31ನೇ ವಾರ್ಷಿಕ ಪುಣ್ಯಸ್ಮರಣೆ ಕಾರ್ಯಕ್ರಮ ನಗರದ ರಾಘವ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ದೊಡ್ಡನಗೌಡರ ಜೀವನಸಾಧನೆ ಕುರಿತು ಮಾತನಾಡಿದ ರಾಘವ ಮೆಮೋರಿಯಲ್ ಅಸೋಸಿಯೇಷನ್ ನ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ.ಪೊಂಪನಗೌಡ, ಕನ್ನಡ ಸಾಹಿತ್ಯ, ರಂಗಭೂಮಿ ಹಾಗೂ ಗಮಕ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿದ ಮಹನೀಯರಲ್ಲಿ ಜೋಳದರಾಶಿ ದೊಡ್ಡನಗೌಡರು ಪ್ರಮುಖರು. ನವೋದಯ ಕಾಲದ ಸಾಹಿತ್ಯ ಪರಂಪರೆಯಲ್ಲಿ ತಮ್ಮದೇ ಆದ ಸ್ಥಾನ ನಿರ್ಮಿಸಿಕೊಂಡಿದ್ದ ಅವರು, ಕನ್ನಡ ಮತ್ತು ತೆಲುಗು ಉಭಯ ಭಾಷೆಗಳಲ್ಲೂ ಅಪಾರ ಪಾಂಡಿತ್ಯ ಹೊಂದಿದ್ದ ಅಪರೂಪದ ಪ್ರತಿಭಾವಂತರಾಗಿದ್ದರು. ಸಾಹಿತ್ಯ, ಸಂಗೀತ, ಗಮಕ, ನಾಟಕ ಹಾಗೂ ಧಾರ್ಮಿಕ ಚಿಂತನೆಗಳನ್ನು ಸಮನ್ವಯಗೊಳಿಸಿದ ಅವರ ಜೀವನವೇ ಒಂದು ಸಾಂಸ್ಕೃತಿಕ ಚಳವಳಿಯಂತಿತ್ತು ಎಂದು ತಿಳಿಸಿದರು.

ಗ್ರಾಮೀಣ ಹಿನ್ನೆಲೆಯಿಂದ ಹೊರಹೊಮ್ಮಿದ ದೊಡ್ಡನಗೌಡರು ಆಧುನಿಕ ಶಿಕ್ಷಣದ ಹೆಚ್ಚಿನ ಅವಕಾಶಗಳಿಲ್ಲದ ಕಾಲಘಟ್ಟದಲ್ಲೇ ಸ್ವಯಂಪ್ರೇರಿತ ಅಧ್ಯಯನದ ಮೂಲಕ ಜ್ಞಾನಾರ್ಜನೆ ಮಾಡಿದರು. ಸಾಹಿತ್ಯ ಮತ್ತು ಕಲೆಯ ಮೇಲಿನ ಅಪಾರ ಆಸಕ್ತಿ ಅವರನ್ನು ಜನಮನಗಳಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಿತು. ನಾಟಕ ರಚನೆ, ಅಭಿನಯ ಹಾಗೂ ನಿರ್ದೇಶನದಲ್ಲಿ ಅವರು ತೋರಿದ ಸಾಮರ್ಥ್ಯ ಅಪಾರವಾಗಿತ್ತು. ತಮ್ಮದೇ ನಾಟಕ ಕಂಪೆನಿಯನ್ನು ಸ್ಥಾಪಿಸಿ ರಾಜ್ಯದಾದ್ಯಂತ ಸಂಚರಿಸಿ ಕನ್ನಡ ರಂಗಭೂಮಿಯನ್ನು ಜನಸಾಮಾನ್ಯರ ಮನೆಮಾತಾಗಿಸಲು ಅಪಾರವಾಗಿ ಶ್ರಮಿಸಿದರು.

ಗಮಕ ಕ್ಷೇತ್ರದಲ್ಲಿಯೂ ದೊಡ್ಡನಗೌಡರ ಸಾಧನೆ ಅನನ್ಯವಾಗಿತ್ತು. ಮಹಾಭಾರತ, ರಾಮಾಯಣ ಸೇರಿದಂತೆ ಹಲವು ಪೌರಾಣಿಕ ಕೃತಿಗಳನ್ನು ಗಮಕ ಶೈಲಿಯಲ್ಲಿ ಜನರಿಗೆ ತಲುಪಿಸುವ ಮೂಲಕ ಸಾಹಿತ್ಯದ ಸವಿಯನ್ನು ಜನಮನಗಳಲ್ಲಿ ಮೂಡಿಸಿದರು. ಅವರ ಧ್ವನಿಯ ಮಧುರತೆ ಮತ್ತು ಅರ್ಥಪೂರ್ಣ ನಿರೂಪಣೆ ಶ್ರೋತೃಗಳನ್ನು ಆಕರ್ಷಿಸುತ್ತಿತ್ತು. ಸಾಹಿತ್ಯವನ್ನು ಕೇವಲ ಪುಸ್ತಕಗಳೊಳಗೆ ಸೀಮಿತಗೊಳಿಸದೇ ಜನರ ಬದುಕಿನ ಭಾಗವನ್ನಾಗಿಸಲು ಅವರು ಮಾಡಿದ ಪ್ರಯತ್ನಗಳು ಗಮನಾರ್ಹವಾಗಿವೆ ಎಂದು ತಿಳಿಸಿದರಲ್ಲದೆ, ಗೌಡರು ಬಳ್ಳಾರಿ ರಾಘವರ ಶಿಷ್ಯರಾಗಿದ್ದರು ಎಂಬುದೇ ಹೆಮ್ಮೆಯ ಸಂಗತಿ ಹೇಳಿದರು. ರಾಘವ ಮೆಮೋರಿಯಲ್ ಅಸೋಸಿಯೇಷನ್ ನ ಪದಾಧಿಕಾರಿಗಳು ಹಾಗೂ ದೊಡ್ಡನಗೌಡರ ಕುಟುಂಬ ಸದಸ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅಸೋಸಿಯೇಷನ್ ನ ಗೌರವಾಧ್ಯಕ್ಷ ಕೆ.ಚನ್ನಪ್ಪ, ಅಧ್ಯಕ್ಷ ಕೆ.ಕೋಟೇಶ್ವರ ರಾವ್, ಉಪಾಧ್ಯಕ್ಷ ಬಾಣಾಪುರ ರಮೇಶ ಗೌಡ, ಖಜಾಂಚಿ ಪಿ.ಧನಂಜಯ, ಕೆ.ಪೊಂಪನ ಗೌಡ,


ಬಿ.ಭಾಸ್ಕರ ನಾಯ್ಡು , ಜಿ.ಆರ್.ವೆಂಕಟೇಶಲು, ಕೆ.ಶ್ಯಾಮಸುಂದರ್, ಟಿ.ಜಿ ವಿಠಲ್, ಪಿ.ಶ್ರೀನಿವಾಸಲು, ರಾಮಬ್ರಹಂ, ಕುರುಬರ ಸಂಘದ ಅಧ್ಯಕ್ಷ ಪಿ.ಎಲ್ ಗಾದಿಲಿಂಗನ ಗೌಡ, ಎಂ.ರಾಮಾಂಜನೇಯಲು, ಶೇಷ ರೆಡ್ಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು, ರಮಣಪ್ಪ ಭಜಂತ್ರಿ ಉಪಸ್ಥಿತರಿದ್ದರು.

ಎಸ್ .ಪಿ ಹೊಂಬಳ ಗದಗ ಅವರು ಗಮಕ ವಾಚನ ಮಾಡಿದರು. ಎನ್.ಪ್ರಕಾಶ್ ಹಾಗೂ ಪಿ.ಎಂ.ನಟರಾಜ್ ಕಾರ್ಯಕ್ರಮ ನಿರ್ವಹಿಸಿದರು.

ರಾಘವ ಮೆಮೋರಿಯಲ್ ಅಸೋಸಿಯೇಷನ್ ಕಾರ್ಯಕ್ರಮ ಸಂಘಟಿಸಿತ್ತು.