ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಇಲ್ಲಿನ ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ 19ನೇ ವರ್ಷದ ನವರಾತ್ರಿ ಮಹೋತ್ಸವವು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ನೇತೃತ್ವದಲ್ಲಿ ವೈಭವದಿಂದ ನೆರವೇರುತ್ತಿದ್ದು, ದಿನನಿತ್ಯವೂ ಭಕ್ತರ ದಂಡು ಆಗಮಿಸುತ್ತಿದೆ.ಕ್ಷೇತ್ರದಲ್ಲಿ ನಿತ್ಯವೂ ಜೋಡಿ ಚಂಡಿಕಾಯಾಗ, ದುರ್ಗಾ ನಮಸ್ಕಾರ ಪೂಜೆ, ವಿಜಯದಶಮಿ ಪರ್ವಕಾಲದಲ್ಲಿ ತ್ರಿಶಕ್ತಿ ಮಹಾಯಾಗ, ಬಲಿ ಉತ್ಸವ, ರಂಗ ಪೂಜಾ ಮಹೋತ್ಸವ, ನಿರಂತರ ಅನ್ನಸಂತರ್ಪಣೆ, ಸಾಂಸ್ಕೃತಿಕ ವೈಭವಗಳಿಗೆ ಕ್ಷೇತ್ರವು ಸಾಕ್ಷಿಯಾಗುತ್ತಿದೆ.
ದೇವಿಯ ದರ್ಶನಕ್ಕೆ ಪ್ರಾತಃ ಕಾಲದಿಂದಲೇ ಭಕ್ತರು ಹರಿದು ಬರುತ್ತಿದ್ದಾರೆ. ದಿನಂಪ್ರತಿ 5 ಸಾವಿರಕ್ಕೂ ಮಿಕ್ಕಿದ ಭಕ್ತರು ಕ್ಷೇತ್ರ ಸಂದರ್ಶಿಸಿದರೆ, 3 ಸಾವಿರಕ್ಕೂ ಮಿಕ್ಕಿದ ಭಕ್ತರು ಅನ್ನಪ್ರಸಾದ ಸ್ವೀಕರಿಸುತ್ತಿದ್ದಾರೆ.ಮಂಗಳವಾರ ಚೆನೈನ ವಾಸುದೇವನ್ ದಂಪತಿ ಹಾಗೂ ಮಿಹಿಕಾ ವಿರಾಜ್ ಶೆಟ್ಟಿ ದಂಪತಿಯಿಂದ ಚಂಡಿಕಾಯಾಗ, ಸಾಲಿಗ್ರಾಮ ವಿಪ್ರ ಮಹಿಳಾ ಭಜನಾ ಮಂಡಳಿ, ಕಡಿಯಾಳಿ ಮಹಿಷಮರ್ದಿನಿ ಭಜನಾ ಮಂಡಳಿಯಿಂದ ಭಜನೆ, ಗಾನಶ್ರೀ ಸ್ಕೂಲ್ ಆಫ್ ಮ್ಯೂಸಿಕ್ ನಿಂದ ಸುಗಮ ಸಂಗೀತ, ದರ್ಪಣ ಡ್ಯಾನ್ಸ್ ಎಕಾಡೆಮಿಯಿಂದ ಅಭಿರಾಮ ಭಾಮ ನಾಟ್ಯ ಸಂಗೀತ ಉತ್ಸವ, ಬೈಲೂರು ಸಂಜೀವ ಪೂಜಾರಿ ಮತ್ತು ಮನೆಯವರಿಂದ ದುರ್ಗಾ ನಮಸ್ಕಾರ ಪೂಜೆ ನೆರವೇರಿತು.
ಮಧ್ಯಾಹ್ನ ತನ್ವಿ, ಸಮನ್ವಿ, ಅಮೃತ, ಆಶ್ಲೇಷ, ಅದಿತಿ ಮೆಹೆಂದಳೆ, ಸಾನ್ವಿ, ಅನ್ನಪೂರ್ಣೆ ಅವರಿಂದ ನೃತ್ಯಸೇವೆ ನೆರವೇರಿತು.ಊರುಪರವೂರುಗಳಿಂದ ಅಸಂಖ್ಯಾ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಿದ್ದು, ಅವರಿಗೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದೆ. ಸೇವಾರ್ಥಿಗಳಿಗೆ, ನೃತ್ಯಾರ್ಥಿಗಳಿಗೆ ವಿಶೇಷ ಗೌರವ ದೊರಕುತ್ತಿದೆ. ಕ್ಷೇತ್ರದ ಮಹಾಅನ್ನಪ್ರಸಾದ ಏಕಕಾಲದಲ್ಲಿ ಸಾವಿರಕ್ಕೂ ಮಿಕ್ಕಿದ ಭಕ್ತರಿಗೆ ಉಣಿಸಲಾಗುತ್ತಿದೆ. ಭಕ್ತರೂ ಭಕ್ತಿಯಿಂದ ಅನ್ನಪ್ರಸಾದ ಸ್ವೀಕರಿಸಿ ದೇವಿಯ ಅನುಗ್ರಹಕ್ಕೆ ಪಾತ್ರರಾಗುತ್ತಿದ್ದಾರೆ ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.ಭಕ್ತರ ಅಕ್ಕಿಸೇವೆ ವಿಶೇಷ ಅವಕಾಶಈ ಕ್ಷೇತ್ರದಲ್ಲಿ ನವರಾತ್ರಿಯ ಪರ್ವಕಾಲದಲ್ಲಿ ಭಕ್ತರಿಗೆ ಬಾಳೆಎಲೆಯಲ್ಲಿ ಬಡಿಸುವ ಅನ್ನಪ್ರಸಾದಕ್ಕೆ ವಿಶೇಷ ಮಹತ್ವವಿದೆ. ಗುರುಗಳ ಇಚ್ಛೆಯಂತೆ ಈ ಅನ್ನದಾನದ ಸೇವೆಯಲ್ಲಿ ಭಾಗವಹಿಸಲು ಭಕ್ತರಿಗೂ ಅವಕಾಶ ಕಲ್ಪಿಸಲಾಗಿದೆ. ದೇವಿಗೆ ಅಭಿಮುಖವಾಗಿ ಅಕ್ಕಿಯ ಹುಂಡಿ ಇರಿಸಲಾಗಿದ್ದು, ಭಕ್ತರು ಮನಸಂಕಲ್ಪ ಈಡೇರಿಕೆಗೆ ಯಥಾನುಶಕ್ತಿ ಅಕ್ಕಿಯನ್ನು ಈ ಹುಂಡಿಗೆ ಸಮರ್ಪಿಸಬಹುದಾಗಿದೆ ಅಥವಾ ಕ್ಷೇತ್ರದಲ್ಲಿ ಅಕ್ಕಿಯ ಬಾಬ್ತು ಹಣ ನೀಡುವುದಕ್ಕೂ ಅವಕಾಶವಿದೆ.