ದೊಡ್ಡಣ್ಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ದೀಪೋತ್ಸವ ಸಂಪನ್ನ

| Published : Dec 03 2024, 12:30 AM IST

ದೊಡ್ಡಣ್ಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ದೀಪೋತ್ಸವ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಣ್ಣಗುಡ್ಡೆಯ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಭಾನುವಾರ ಕಾರ್ತಿಕ ಅಮಾವಾಸ್ಯೆಯ ಪರ್ವಕಾಲದಂದು ವೈಭವದ ದೀಪೋತ್ಸವವು ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ನೇತೃತ್ವದಲ್ಲಿ ನೆರವೇರಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ದೊಡ್ಡಣ್ಣಗುಡ್ಡೆಯ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಭಾನುವಾರ ಕಾರ್ತಿಕ ಅಮಾವಾಸ್ಯೆಯ ಪರ್ವಕಾಲದಂದು ವೈಭವದ ದೀಪೋತ್ಸವವು ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ನೇತೃತ್ವದಲ್ಲಿ ನೆರವೇರಿತು.

ಆ ಪ್ರಯುಕ್ತ ಸಂಜೆ ಶ್ರೀ ದುರ್ಗಾ ಆದಿಶಕ್ತಿ ದೇವಿಗೆ ಅಭಿಮುಖವಾಗಿ ವಿಶೇಷ ಅಲಂಕೃತ ದೀಪಸ್ತಂಭದಲ್ಲಿ ಶ್ರೀ ಗುರೂಜಿಯವರು ದೀಪ ಪ್ರಜ್ವಲಿಸಿ ದೀಪೋತ್ಸವಕ್ಕೆ ಚಾಲನೆ ನೀಡಿದರು..

ಕ್ಷೇತ್ರದ ಒಳಾಂಗಣ ಹಾಗೂ ಹೊರಾಂಗಣವನ್ನು ಹಣತೆ ದೀಪಗಳಿಂದ ಕಣ್ಮಣ ಸೆಳೆಯುವಂತೆ ಅಲಂಕರಿಸಲಾಗಿತ್ತು. ಶ್ರೀ ಕ್ಷೇತ್ರದ ಆದಿಶಕ್ತಿ ಸಭಾಭವನದಲ್ಲಿ ರಚಿಸಲಾದ ನವಧಾನ್ಯ ಸಹಿತವಾದ ಚಿತ್ತಾರದ ದೀಪ, ನಾಣ್ಯಗಳಿಂದ ರಚಿಸಲಾದ ಗಣಪತಿ ದೀಪ, ವಿವಿಧ ಪತ್ರೆಗಳಿಂದ ಹಾಗೂ ಹೂವುಗಳಿಂದ ರಚಿಸಲಾದ ಪೂಕಳಂ ದೀಪಗಳು, ಹಣತೆಯಿಂದ ರಚಿಸಲಾದ ಕ್ಷೇತ್ರದ ನಾಮದೀಪಗಳು, ಭಕ್ತರಿಗೆ ವಿಶೇಷ ಆಕರ್ಷಣೆಯಾಯಿತು.ಶ್ರೀ ಕ್ಷೇತ್ರದ ಗುರುಪೀಠವಾದ ಗಾಯತ್ರಿ ಧ್ಯಾನಪೀಠದ ಶ್ರೀ ಕಪಿಲ ಮಹರ್ಷಿಗಳ ಸನ್ನಿಧಾನದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸಿ ದೀಪ ಬೆಳಗಿಸಲಾಯಿತು. ನಂತರ ಕ್ರಮಬದ್ಧವಾಗಿ ಶ್ರೀ ಕ್ಷೇತ್ರದ ನಾಗಾಲಯ ಹಾಗೂ ಷಟ್ ಶಿರ ಸುಬ್ರಮಣ್ಯ ಸ್ವಾಮಿಯ ಸನ್ನಿಧಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

ಕ್ಷೇತ್ರದ ಕಪಿಲ ಗೋ ಮಂದಿರದಲ್ಲಿಯೂ ಕೂಡ ದೀಪ ಪ್ರಜ್ವಲಿಸಲಾಯಿತು. ನಂತರ ಶ್ರೀ ಆದಿಶಕ್ತಿಯ ಸನ್ನಿಧಾನದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಾದ ಅನಿಶ್ ಆಚಾರ್ಯ ಅವರು ರಂಗ ಪೂಜೆಯನ್ನು ನೆರವೇರಿಸಿದರು. ಶ್ರೀ ದುರ್ಗಾ ಆದಿಶಕ್ತಿ ದೇವಿಯನ್ನು ದೀಪ ಮಾತೆಯಾಗಿ ಕ್ಷೇತ್ರದ ಅಲಂಕಾರ ತಜ್ಞ ಆನಂದ್ ಬಾಯರಿ ಅವರು ಅಲಂಕರಿಸಿದ್ದರು. ಸ್ವಸ್ತಿಕ್ ಆಚಾರ್ಯ ಸಹಕರಿಸಿದರು.ಕಿಕ್ಕಿರಿದು ತುಂಬಿದ ಭಕ್ತರ ಸಾಕಾರದೊಂದಿಗೆ ಕ್ಷೇತ್ರದ ಪರಿಸರ ದೀಪಮಯವಾಗಿತ್ತು. ಕ್ಷೇತ್ರದ ಮಹಾಪ್ರಸಾದವಾದ ಅನ್ನಪ್ರಸಾದ ಮಧ್ಯಾಹ್ನ ಹಾಗೂ ರಾತ್ರಿ ವಿವಿಧ ಭಕ್ಷ್ಯ ಭೋಜ್ಯಗಳೊಂದಿಗೆ ಉಣಬಡಿಸಲಾಯಿತು. ಭಕ್ತರ ಎಲ್ಲರೂ ಅತಿ ಉತ್ಸಾಹದಿಂದ ಈ ಮಹೋತ್ಸವದಲ್ಲಿ ಪಾಲ್ಗೊಂಡು ಯಶಸ್ಸಿಗೆ ಕಾರಣರಾದರು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ.