ಸಚಿವ ನಾಗೇಂದ್ರ ರಾಜೀನಾಮೆ ನೀಡಲು ದೊಡ್ಡನಗೌಡ ಆಗ್ರಹ

| Published : May 30 2024, 12:48 AM IST

ಸಾರಾಂಶ

ಅಧಿಕಾರಿ ಆತ್ಮಹತ್ಯೆಯಿಂದ ಕೈ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ

ಕನ್ನಡಪ್ರಭ ವಾರ್ತೆ ಇಳಕಲ್ಲ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಸುಮಾರು ₹ 187 ಕೋಟಿ ಮೀಸಲಿಟ್ಟ ಹಣದ ಅವ್ಯವಹಾರ ನಡೆದಿದೆ ಎಂದು ಒಬ್ಬ ಅಧಿಕಾರಿಯೊಬ್ಬ ಡೆತ್ ನೋಟ್ ಬರೆದು ನೇಣಿಗೆ ಶರಣಾಗಿರುವುದು ಈ ರಾಜ್ಯದ ಕಾಂಗ್ರೆಸ್ ಆಡಳಿತದ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹುನಗುಂದ ಮತಕ್ಷೇತ್ರದ ಬಿಜೆಪಿ ಮಾಜಿ ಶಾಸಕ ದೊಡ್ಡನಗೌಡ ಜಿ.ಪಾಟೀಲ ಗಂಭೀರ ಆರೋಪ ಮಾಡಿದರು.

ನಗರದ ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಗರಣದಲ್ಲಿ ಎಸ್ಟಿ ಸಮುದಾಯದ ಕಲ್ಯಾಣ ಸಚಿವ ಬಿ.ನಾಗೇಂದ್ರ ಅವರ ಕೈವಾಡ ಇರುವ ಆರೋಪಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಸಚಿವ ಬಿ.ನಾಗೇಂದ್ರ ಅವರು ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಸಿಎಂ, ಡಿಸಿಎಂಗೆ ಜನರ ಚಿಂತೆಯಿಲ್ಲ:

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಒಂದು ವರ್ಷ ಕಳೆದರೂ ರಾಜ್ಯದಲ್ಲಿ ಇಂದಿಗೂ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಸಿಲ್ಲ. ಕೇವಲ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಬೇಕು ತಮ್ಮ ಅಧಿಕಾರ ಉಳಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ರಾಮಯ್ಯನವರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಅದೇ ಚಿಂತೆಯಲ್ಲಿದ್ದಾರೆ. ಆದರೆ, ರಾಜ್ಯದ ರೈತರ, ಬಡವರ, ದೀನ ದಲಿತರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಯಾವುದೇ ಚಿಂತನೆ ಮಾಡುತ್ತಿಲ್ಲ ಎಂದು ದೂರಿದರು.ಈ ವರ್ಷದಲ್ಲಿ ₹ 92 ಸಾವಿರ ಕೋಟಿ ಸಾಲ ಮಾಡಿ ರಾಜ್ಯದ ಜನತೆಗೆ ಹೊರೆ ಮಾಡಿದ್ದು ಇವರ ಸಾಧನೆ ಎಂದು ಟೀಕಿಸಿದರು. ದೇವರ ಅನುಗ್ರಹದಿಂದ ರಾಜ್ಯದಲ್ಲಿ ಸ್ವಲ್ಪು ಮಟ್ಟಿಗೆ ಮುಂಗಾರು ಮಳೆಯಾಗಿದ್ದು, ಇನ್ನೇನು ರೈತರು ಬಿತ್ತನೆ ಪ್ರಾರಂಭಿಸಬೇಕೆಂದರೆ ಕಾಂಗ್ರೆಸ್ ಸರ್ಕಾರ ರೈತರ ಬಿತ್ತನೆ ಬೀಜದ ಬೆಲೆಯನ್ನು ಹೆಚ್ಚಿಸಿ ರೈತರ ಹೊಟ್ಟೆಗೆ ಬರೆ ಎಳೆದಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಮಹಾಂತಗೌಡ ಪಾಟೀಲ ತೊಂಡಿಹಾಳ, ಮಹಾಂತಪ್ಪ ಚನ್ನಿ, ಲಕ್ಷ್ಮಣ ಗುರಂ, ಆದಪ್ಪ ಮೇರನಾಳ, ವೆಂಕಟೇಶ ಪೋತಾ, ಅಜ್ಜಪ್ಪ ನಾಡಗೌಡ, ಸುರೇಶ ನಾಗಲೋಟಿ, ಚಂದ್ರಶೇಖರ ಏಕಬೋಟೆ ಹಾಗೂ ಇತರರು ಉಪಸ್ಥಿತರಿದ್ದರು.

------------------------ಕೃಷ್ಣಾ, ಮಲಪ್ರಭಾ ತಟದಲ್ಲಿ ಶಾಸಕರ ಸಂಬಂಧಿಕರು ಹಾಗೂ ಅವರ ಅನುಯಾಯಿಗಳು ಜೆಸಿಬಿಗಳ ಮೂಲಕ ಮರಳಿನ ದಂಧೆಯನ್ನು ಅವ್ಯಾಹತವಾಗಿ ನಡೆಸಿದ್ದಾರೆ. ಸರ್ಕಾರಿ ಮಟ್ಟದಲ್ಲಿ ಒಂದು ಇಲಾಖೆಯಿಂದ ಇನ್ನೊಂದು ಇಲಾಖೆಯಲ್ಲಿ ಜಾಗವನ್ನು ಕೊಡುವ ಮತ್ತು ತೆಗೆದುಕೊಳ್ಳುವ ಕೆಲಸ ಸಹಜ. ಆದರೆ, ಇದನ್ನೇ ನೆಪ ಮಾಡಿ ನಮ್ಮ ಅವಧಿಯ ₹ 40 ಕೋಟಿ ವೆಚ್ಚದಲ್ಲಿ ಸುಮಾರು 13 ವಾರ್ಡ್‌ಗಳಿಗೆ ಕುಡಿಯುವ ನೀರು ಪೂರೈಕೆಗೆ ಪ್ರಾರಂಭಗೊಂಡ ಸುಮಾರು 50 ಲಕ್ಷ ಕ್ಯೂಸೆಕ್ ನೀರಿನ ಸಂಗ್ರಹದ ನೀರಿನ ಟ್ಯಾಂಕ್ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಿ ಜನರಿಗೆ ಸರಿಯಾಗಿ ನೀರು ಪೂರೈಕೆಯಾಗದೇ ಪರದಾಡುವಂತೆ ಶಾಸಕರು ಮಾಡಿದ್ದಾರೆ.

- ದೊಡ್ಡನಗೌಡ ಜಿ.ಪಾಟೀಲ, ಮಾಜಿ ಶಾಸಕ