ಸಾರಾಂಶ
ಶರನ್ನವರಾತ್ರಿ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮದ ಪೂರ್ವಭಾವಿ ಕಾರ್ಯಕ್ರಮಗಳು ಕ್ಷೇತ್ರದಲ್ಲಿ ಸಂಪನ್ನಗೊಂಡವು. ನವರಾತ್ರಿ ಸಂದರ್ಭ ನಿರಂತರ ಅನ್ನಸಂತರ್ಪಣೆ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ದೊಡ್ಡಣಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಹತ್ತು ದಿನಗಳ ಕಾಲ ಸಂಪನ್ನಗೊಳ್ಳಲಿರುವ ಶರನ್ನವರಾತ್ರಿ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮದ ಪೂರ್ವಭಾವಿ ಕಾರ್ಯಕ್ರಮಗಳು ಕ್ಷೇತ್ರದಲ್ಲಿ ಬುಧವಾರ ಸಂಪನ್ನಗೊಂಡವು.ಶ್ರೀ ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಗಣೇಶ್ ಸರಳಾಯ ಅವರ ನೇತೃತ್ವದಲ್ಲಿ ವೇದಮೂರ್ತಿ ಕೊಲಕಾಡಿ ವಾದಿರಾಜ ಉಪಾಧ್ಯಾಯ ಅವರು ಸಾಮೂಹಿಕ ದೇವತಾ ಪ್ರಾರ್ಥನೆಯೊಂದಿಗೆ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ತರಕಾರಿ ಮುಹೂರ್ತಗಳನ್ನು ನೆರವೇರಿಸಿದರು. ಶ್ರೀ ಕ್ಷೇತ್ರದ ಯಾಗ ಮಂಟಪದಲ್ಲಿ ವಾಸ್ತು ಹೋಮ, ಪ್ರಕಾರ ಬಲಿ, ಪ್ರಸಾದ ಶುದ್ದಿ, ಮಂಟಪ ಸಂಸ್ಕಾರ ಪ್ರಕ್ರಿಯೆ ಹಾಗೂ ರಾಕ್ಷೋಜ್ಞಾದಿ ಪ್ರಕ್ರಿಯೆಗಳು ಶ್ರದ್ಧೆಯಿಂದ ನೆರವೇರಿದವು.
ಇಂದಿನಿಂದ ಹತ್ತು ದಿನಗಳ ಕಾಲ ಜೋಡಿ ಚಂಡಿಕಾಯಾಗ, ದುರ್ಗಾನಮಸ್ಕಾರ ಪೂಜೆ, ಶ್ರೀ ಲಲಿತಾ ಸಹಸ್ರ ಕದಳಿಯಾಗ, ಲೋಕೇಶ್ವರಿ ಮಹಾಯಾಗ, ಲಕ್ಷ್ಮಿ ಸಹಸ್ರನಾಮ ಯಾಗ, ಗಾಯತ್ರಿ ಮಂತ್ರ ಮಹಾಯಾಗ, ನಿರಂತರ ಅನ್ನಸಂರ್ಪಣೆಯೊಂದಿಗೆ ನೆರವೇರಲಿದೆ ಎಂದು ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ ತಿಳಿಸಿರುತ್ತಾರೆ.