ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮುಖ್ಯಮಂತ್ರಿ ವಿರುದ್ಧ ಪಾದಯಾತ್ರೆ ನಡೆಸಲು ಬಿಜೆಪಿಯವರಿಗೆ ಯಾವ ನೈತಿಕತೆ ಇದೆ? ಕಾನೂನು ಅಡಿ ಸಿದ್ದರಾಮಯ್ಯ ಏನು ತಪ್ಪು ಮಾಡಿದ್ದಾರೆ ಎನ್ನುವುದನ್ನು ತೋರಿಸಲಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸವಾಲು ಹಾಕಿದ್ದಾರೆ.ಮಂಗಳೂರಿಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಮುಖಂಡ ಯಡಿಯೂರಪ್ಪ ಮೇಲೆ ಪೋಕ್ಸೊ ಕೇಸ್ ನಡೆಯುತ್ತಿದೆ. ವಿಜಯೇಂದ್ರ ಮೇಲೂ ಕೇಸ್ ಇದೆ, ಹೀಗಿರುವಾಗ ಅವರಿಗೆ ಪಾದಯಾತ್ರೆ ನಡೆಸಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು ಕಳೆದುಕೊಂಡ ಭೂಮಿಯನ್ನು ವಾಪಸ್ ಪಡೆದಿದ್ದಾರೆ ಅಷ್ಟೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕಾನೂನಿನಡಿ ತಪ್ಪು ತೋರಿಸಲಿ. ಅಧಿಕಾರ ದುರುಪಯೋಗದ ಬಗ್ಗೆ ತೋರಿಸಲಿ ನೋಡೋಣ ಎಂದರು.ಪಾದಯಾತ್ರೆ ಮಾಡಲು ಅಧಿಕೃತವಾಗಿ ಅನುಮತಿ ನೀಡಲು ಆಗುವುದಿಲ್ಲ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರಿಗೆ ಆ ರೀತಿಯ ಯಾತ್ರೆ ಮಾಡಲು ಅವಕಾಶ ಇದೆ. ಹಾಗಾಗಿ ನಿರ್ಬಂಧ ವಿಧಿಸಿ ಪಾದಯಾತ್ರೆಗೆ ಅವಕಾಶ ಕೊಡಲಾಗುತ್ತದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಕೇಂದ್ರ ಸರ್ಕಾರ ಐಟಿ, ಇ.ಡಿ. ಎಲ್ಲವನ್ನೂ ದುರುಪಯೋಗಪಡಿಸಿಕೊಳ್ಳುತ್ತಿದೆ. ಏನಾದರೂ ಮಾಡಿ ಸರ್ಕಾರ ಉರುಳಿಸಲು ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ. ಶೇ.95ರಷ್ಟು ಇ.ಡಿ, ಐ.ಟಿ. ದಾಳಿಗಳು ವಿರೋಧ ಪಕ್ಷಗಳ ಮೇಲೆಯೇ ಆಗಿವೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೇಗಾದರೂ ಮಾಡಿ ಜೈಲಿಗೆ ಹಾಕಬೇಕೆಂದು ಇಷ್ಟೆಲ್ಲ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಅಬ್ರಹಾಂ ಹಿನ್ನೆಲೆ ಏನು?: ರಾಜ್ಯಪಾಲರು ದೂರು ಪಡೆದ ಕೆಲವೇ ಗಂಟೆಗಳಲ್ಲಿ ನೋಟಿಸ್ ಜಾರಿ ಮಾಡಿದ್ದಾರೆ. ದೂರು ಕೊಟ್ಟ ಅಬ್ರಹಾಂ ಹಿನ್ನೆಲೆ ಎಲ್ಲರಿಗೂ ಗೊತ್ತಿದೆ, ಅವರಿಗೆ ಸುಪ್ರೀಂ ಕೋರ್ಟ್ ಕೂಡ 20 ಲಕ್ಷ ರು. ದಂಡ ಹಾಕಿತ್ತು. ಯಾವುದೇ ಕಾನೂನು ತಜ್ಞರ ಜತೆಗೂ ರಾಜ್ಯಪಾಲರು ಚರ್ಚೆ ಮಾಡಿಲ್ಲ. ನೂರಾರು ಪುಟಗಳ ದೂರು ಪಡೆದು ಕೆಲವೇ ಗಂಟೆಗಳಲ್ಲಿ ನೋಟಿಸ್ ನೀಡಿದ್ದಾರೆ. ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ರಾಜ್ಯಪಾಲರು ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಮಳೆಹಾನಿ ಪರಿಹಾರ ವಿಚಾರದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಅಶೋಕ್ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ರಾಜ್ಯ ಹಾಗೂ ಕೇಂದ್ರದ ಪರಿಹಾರ ಸೇರಿಸಿ ಹಾನಿಯಾದ ಮನೆಗಳಿಗೆ 50 ಸಾವಿರ ರು. ನೀಡುತ್ತಿದ್ದೇವೆ. ಬಿಜೆಪಿಯವರು ಹಿಂದೆ ಕೊಟ್ಟ 5 ಲಕ್ಷ ರು. ಯೋಜನೆಯಲ್ಲಿ ಭಾರೀ ಅವ್ಯವಹಾರ ಆಗಿದೆ. ಕೆಲವರು ಸಣ್ಣಪುಟ್ಟ ಹಾನಿಗೆ 5 ಲಕ್ಷ ರು. ಪರಿಹಾರ ಪಡೆದಿದ್ದಾರೆ. ನಮ್ಮ ಸರ್ಕಾರ ಆ ಯೋಜನೆ ತೆಗೆದು ಬೇರೆ ಯೋಜನೆ ತಂದಿದ್ದೇವೆ. ಆರ್.ಅಶೋಕ್ ಗೆ ಅದೆಲ್ಲ ಗೊತ್ತಿಲ್ಲ ಅನಿಸುತ್ತದೆ ಎಂದು ಲೇವಡಿ ಮಾಡಿದರು.